ನವದೆಹಲಿ: ಎರಡು ವಿಮಾನಗಳ ಟೇಕ್ ಆಫ್ ವಿಳಂಬವಾಗಿದ್ದು ಮತ್ತು ಆ ಸಂದರ್ಭಗಳಲ್ಲಿ ಏರ್ ಕಂಡೀಷನರ್ಗಳು ಕೆಲಸ ಮಾಡದೇ ಪ್ರಯಾಣಿಕರಿಗೆ ಅಸೌಖ್ಯ ಉಂಟು ಮಾಡಿರುವ ಘಟನೆಗಳ ಬಗ್ಗೆ ವಿವರಣೆ ನೀಡುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ)ವು ಶುಕ್ರವಾರ ಏರ್ ಇಂಡಿಯಾಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
"24.05.2024 ರಂದು ಹೊರಡಬೇಕಿದ್ದ ವಿಮಾನ ಎಎಲ್ -179 (ಮುಂಬೈನಿಂದ ಸ್ಯಾನ್ ಫ್ರಾನ್ಸಿಸ್ಕೋ) ಮತ್ತು 30.05.2024 ರಂದು ಹೊರಡಬೇಕಿದ್ದ ವಿಮಾನ ಎಎಲ್ -183 (ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋ)ಗಳ ಟೇಕ್ ಆಫ್ ಮಿತಿಮೀರಿದ ವಿಳಂಬವಾಗಿದೆ ಮತ್ತು ವಿಮಾನದೊಳಗೆ ಹವಾನಿಯಂತ್ರಕ ವ್ಯವಸ್ಥೆಗಳು ಕೆಲಸ ಮಾಡದ ಕಾರಣದಿಂದ ಪ್ರಯಾಣಿಕರು ಅಸ್ವಸ್ಥರಾಗಿದ್ದಾರೆ" ಎಂಬುದು ಡಿಜಿಸಿಎ ಗಮನಕ್ಕೆ ಬಂದಿದೆ.
"ಇದಲ್ಲದೇ ಡಿಜಿಸಿಎ ದ ಸಿಎಆರ್ ನಿಬಂಧನೆಗಳನ್ನು ಉಲ್ಲಂಘಿಸಿ ಏರ್ ಇಂಡಿಯಾದಿಂದ ಪ್ರಯಾಣಿಕರಿಗೆ ಪದೇ ಪದೇ ಅನಾನುಕೂಲತೆ ಉಂಟಾಗುತ್ತಿರುವ ಘಟನೆಗಳು ಗಮನಕ್ಕೆ ಬಂದಿವೆ" ಎಂದು ಡಿಜಿಸಿಎ ಹೊರಡಿಸಿದ ಶೋಕಾಸ್ ನೋಟಿಸ್ನಲ್ಲಿ ತಿಳಿಸಲಾಗಿದೆ.
"ಪ್ರಯಾಣಿಕರ ಬಗ್ಗೆ ಸೂಕ್ತ ಕಾಳಜಿ ವಹಿಸಲು ಮತ್ತು ಮೇಲೆ ತಿಳಿಸಿದ ಸಿಎಆರ್ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಏರ್ ಇಂಡಿಯಾ ಪದೇ ಪದೆ ವಿಫಲವಾಗಿದೆ. ಆದ್ದರಿಂದ, ಮೇಲೆ ತಿಳಿಸಿದ ಉಲ್ಲಂಘನೆಗಳಿಗಾಗಿ ವಿಮಾನಯಾನ ಸಂಸ್ಥೆಯ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು ಎಂಬುದಕ್ಕೆ ಕಾರಣ ನೀಡುವಂತೆ ಏರ್ ಇಂಡಿಯಾವನ್ನು ಈ ಮೂಲಕ ಕೇಳಲಾಗಿದೆ. ಈ ನೋಟಿಸ್ ನೀಡಿದ ದಿನಾಂಕದಿಂದ ಮೂರು ದಿನಗಳ ಒಳಗೆ ಏರ್ ಇಂಡಿಯಾದ ಉತ್ತರವು ಈ ಕಚೇರಿಗೆ ತಲುಪಬೇಕು, ಇಲ್ಲದಿದ್ದರೆ, ಈ ವಿಷಯವನ್ನು ಏಕಪಕ್ಷೀಯವಾಗಿ ನಿರ್ಧರಿಸಲಾಗುವುದು" ಎಂದು ಅದು ಹೇಳಿದೆ. ಲಭ್ಯವಿರುವ ಮಾಹಿತಿಯ ಪರಿಶೀಲನೆಯಿಂದ ಏರ್ ಇಂಡಿಯಾ ಸಿಎಆರ್ ಸೆಕ್ಷನ್ 3, ಸರಣಿ ಎಂ, ಭಾಗ 4 ರ ಪ್ಯಾರಾ 3.4 ಮತ್ತು ಪ್ಯಾರಾ 3.8 ರ ನಿಬಂಧನೆಗಳನ್ನು ಉಲ್ಲಂಘಿಸಿದೆ ಎಂದು ಡಿಜಿಸಿಎ ಹೇಳಿದೆ.
ಏರ್ ಇಂಡಿಯಾದ ದೆಹಲಿ-ಸ್ಯಾನ್ ಫ್ರಾನ್ಸಿಸ್ಕೋ ವಿಮಾನದಲ್ಲಿ ಗುರುವಾರ ಎಂಟು ಗಂಟೆಗಳಿಗಿಂತ ಹೆಚ್ಚು ವಿಳಂಬವಾಗಿತ್ತು. ಆ ಸಂದರ್ಭದಲ್ಲಿ ಹವಾ ನಿಯಂತ್ರಕ ವ್ಯವಸ್ಥೆ ಕೂಡ ಕೆಲಸ ಮಾಡದ್ದರಿಂದ ಹಲವಾರು ಜನ ವಿಮಾನದೊಳಗೆ ಮೂರ್ಛೆ ಹೋದರು ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.
ಈ ಘಟನೆಯನ್ನು ಎಕ್ಸ್ನಲ್ಲಿ ಶೇರ್ ಮಾಡಿರುವ ಪತ್ರಕರ್ತೆ ಶ್ವೇತಾ ಪುಂಜ್ ಅವರ ಪ್ರಕಾರ, ಎಐ -183 ವಿಮಾನವು ಗುರುವಾರ ಎಂಟು ಗಂಟೆಗಳಿಗಿಂತ ಹೆಚ್ಚು ವಿಳಂಬವಾಯಿತು. ಪ್ರಯಾಣಿಕರನ್ನು ವಿಮಾನದೊಳಗೆ ಹತ್ತಿಸಿಕೊಳ್ಳಲಾಯಿತು ಮತ್ತು ಸೂಕ್ತ ಹವಾನಿಯಂತ್ರಣವಿಲ್ಲದೆ ಪ್ರಯಾಣಿಕರು ಅಸೌಖ್ಯದಿಂದ ಬಳಲುವಂತಾಯಿತು ಎಂದು ಬರೆದಿದ್ದಾರೆ.
ಇದನ್ನೂ ಓದಿ : ರಣಭಯಂಕರ ಬಿಸಿಗಾಳಿ ಅಬ್ಬರ: ಬಿಹಾರದಲ್ಲಿ 3 ದಿನಗಳಲ್ಲಿ 80 ಜನರು