ನವದೆಹಲಿ: ಮುಂದಿನ ವರ್ಷ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಈಗಲೇ ಸಿದ್ಧತೆಯಲ್ಲಿರುವ ಆಡಳಿತಾರೂಢ ಆಮ್ ಆದ್ಮಿ ಪಕ್ಷವು (ಆಪ್) ತನ್ನ 11 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ. ಈ ಮೂಲಕ, ರಾಷ್ಟ್ರ ರಾಜಧಾನಿಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲ ಎಂಬುದರ ಸುಳಿವು ನೀಡಿದೆ.
ಪಟ್ಟಿಯಲ್ಲಿ ಘೋಷಿತವಾಗಿರುವ ಅಭ್ಯರ್ಥಿಗಳ ಪೈಕಿ ಮೂವರು ಹಾಲಿ ಶಾಸಕರಿಗೆ ಕೊಕ್ ನೀಡಲಾಗಿದೆ. ಅವರ ಬದಲಿಗೆ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ವಲಸೆ ಬಂದ ಆರು ನಾಯಕರಿಗೆ ಮಣೆ ಹಾಕಲಾಗಿದೆ. ಈ 11 ಪೈಕಿ 8 ಬಿಜೆಪಿ ಶಾಸಕರು ಗೆದ್ದಿರುವ ಕ್ಷೇತ್ರಗಳಾಗಿವೆ. ಹೀಗಾಗಿ ಯಾವುದೇ ವಿರೋಧ, ಗೊಂದಲವಿಲ್ಲದ ಕಾರಣ ಮತ್ತು ಚುನಾವಣೆಗೆ ಪೂರ್ವಭಾವಿ ಸಜ್ಜಾಗಲು ಅಭ್ಯರ್ಥಿಗಳನ್ನು ಅಖೈರು ಮಾಡಿದೆ.
First list of AAP candidates for Delhi Elections is OUT‼️
— AAP (@AamAadmiParty) November 21, 2024
All the best to all the candidates ✌️🏻
फिर लायेंगे केजरीवाल ! 🔥#PhirLayengeKejriwal pic.twitter.com/YTbnqpzqEC
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೆಹಲಿ ಎಎಪಿ ಸಂಚಾಲಕ ಗೋಪಾಲ್ ರೈ, ಮೊದಲ ಪಟ್ಟಿಯಲ್ಲಿ 11 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಈ ಪೈಕಿ ಎಂಟು ಕ್ಷೇತ್ರಗಳು ಪಕ್ಷದ ವಶದಲ್ಲಿಲ್ಲದ ಕಾರಣ ಅಭ್ಯರ್ಥಿಗಳ ಹೆಸರನ್ನು ಮೊದಲೇ ಘೋಷಿಸಲಾಗಿದೆ ಎಂದು ತಿಳಿಸಿದರು.
ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ರಾಜಕೀಯ ವ್ಯವಹಾರಗಳ ಸಮಿತಿಯ ಸಭೆಯಲ್ಲಿ ಚರ್ಚಿಸಿದ ನಂತರ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಯಿತು. ಕಾರ್ಯಕ್ಷಮತೆ, ಸಮೀಕ್ಷೆಗಳು ಮತ್ತು ಸಾರ್ವಜನಿಕ ಅಭಿಪ್ರಾಯವನ್ನು ಆಧರಿಸಿ ಟಿಕೆಟ್ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಮೂವರು ಹಾಲಿ ಶಾಸಕರಿಗೆ ಟಿಕೆಟ್ ಮಿಸ್: ವಿಶೇಷವೆಂದರೆ, ಮೂವರು ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗಿಲ್ಲ. ಕಿರಾರಿ ಕ್ಷೇತ್ರದ ರಿತುರಾಜ್ ಝಾ, ಮಟಿಯಾಲದಿಂದ ಗುಲಾಬ್ ಸಿಂಗ್ ಯಾದವ್ ಮತ್ತು ಸೀಲಂಪುರದಿಂದ ಅಬ್ದುಲ್ ರೆಹಮಾನ್ ಅವರಿಗೆ ಈ ಬಾರಿ ಕೊಕ್ ನೀಡಲಾಗಿದೆ. ಝಾ ಮತ್ತು ಗುಲಾಬ್ ಸಿಂಗ್ ಇಬ್ಬರೂ ಎರಡು ಬಾರಿ ಆಯ್ಕೆಯಾಗಿದ್ದವರು.
ವಲಸಿಗರಿಗೆ ಮಣೆ: ಛತ್ತರ್‌ಪುರದಿಂದ ಬ್ರಹ್ಮ್ ಸಿಂಗ್ ತನ್ವಾರ್, ಕಿರಾರಿಯಿಂದ ಅನಿಲ್ ಝಾ ಮತ್ತು ಲಕ್ಷ್ಮಿ ನಗರದಿಂದ ಬಿಬಿ ತ್ಯಾಗಿ ಅವರನ್ನು ಕಣಕ್ಕಿಳಿಸಲಾಗಿದ್ದು, ಈ ಮೂವರೂ ಇತ್ತೀಚೆಗೆ ಬಿಜೆಪಿ ತೊರೆದು ಎಎಪಿ ಸೇರಿದ್ದಾರೆ. ಇತ್ತ ಕಾಂಗ್ರೆಸ್‌ನಿಂದ ಬಂದಿರುವ ಚೌಧರಿ ಜುಬೇರ್ ಅಹ್ಮದ್ಗೆ ಸೀಲಾಂಪುರ, ವೀರ್ ಸಿಂಗ್ ದಿಂಗನ್, ಸೋಮೇಶ್ ಶೋಕೀನ್ ಅವರಿಗೆ ಕ್ರಮವಾಗಿ ಸೀಮಾಪುರಿ ಮತ್ತು ಮಟಿಯಾಲದ ಟಿಕೆಟ್ ನೀಡಲಾಗಿದೆ.
ದೆಹಲಿ ವಿಧಾನಸಭೆಯ 70 ಕ್ಷೇತ್ರಗಳಿಗೆ ಫೆಬ್ರವರಿಯಲ್ಲಿ ಚುನಾವಣೆ ನಡೆಯಬೇಕಿದೆ. 2015 ರಿಂದ ಎರಡು ಅವಧಿಗೆ ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಆಪ್, 2020 ರ ಚುನಾವಣೆಯಲ್ಲಿ 62 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.
ಇದನ್ನೂ ಓದಿ: ಉದ್ಯಮಿ ಅದಾನಿ ಬಂಧಿಸಿ, ಸೆಬಿ ಮುಖ್ಯಸ್ಥರ ವಿರುದ್ಧ ತನಿಖೆ ನಡೆಸಿ: ರಾಹುಲ್ ಗಾಂಧಿ ಆಗ್ರಹ