ನವದೆಹಲಿ: ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಲಕ್ಷಾಂತರ ಜನರ ಸಾವಿಗೆ ಅಲೋಪತಿ ಕಾರಣ ಮತ್ತು ಕೊರೊನಾಗೆ ಪತಂಜಲಿಯ ಕೊರೊನಿಲ್ ಔಷಧವೇ ಚಿಕಿತ್ಸೆ ಎಂದು ನೀಡಿದ್ದ ಹೇಳಿಗಳನ್ನು ತೆಗೆದುಹಾಕುವಂತೆ ಬಾಬಾ ರಾಮ್ದೇವ್ಗೆ ದೆಹಲಿ ಹೈಕೋರ್ಟ್ ಸೂಚನೆ ನೀಡಿದೆ. ನ್ಯಾಯಮೂರ್ತಿ ಅನೂಪ್ ಜೈರಾಮ್ ಭಂಬಾನಿ ಅವರ ಪೀಠವು ಸಾಮಾಜಿಕ ಜಾಲತಾಣದಲ್ಲಿನ ಹೇಳಿಕೆಗಳನ್ನು ಮೂರು ದಿನಗಳಲ್ಲಿ ಅಳಿಸಿ ಹಾಕುವಂತೆ ಸೂಚಿಸಿದೆ.
ಬಾಬಾ ರಾಮದೇವ್ ಅವರು ಮೂರು ದಿನಗಳಲ್ಲಿ ತಮ್ಮ ಹೇಳಿಕೆಯನ್ನು ತೆಗೆದು ಹಾಕದಿದ್ದರೆ. ಸಂಬಂಧಪಟ್ಟ ಸಾಮಾಜಿಕ ಮಾಧ್ಯಮ ವೇದಿಕೆಯೇ ಅವರ ಹೇಳಿಕೆಯನ್ನು ತೆಗೆದುಹಾಕಬೇಕು. ಬಾಬಾ ರಾಮದೇವ್ ಹೇಳಿಕೆ ಆಯುರ್ವೇದದಂತಹ ಪ್ರತಿಷ್ಠಿತ ವೈದ್ಯಕೀಯ ವ್ಯವಸ್ಥೆಗೆ ಕಳಂಕ ತರಲಿದೆ. ಆಯುರ್ವೇದವು ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ವೈದ್ಯಕೀಯ ವ್ಯವಸ್ಥೆಯಾಗಿದೆ ಎಂದು ನ್ಯಾಯಾಲಯ ಹೇಳಿತು.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಅಖಿಲ್ ಸಿಬಲ್, ಆಗಸ್ಟ್ 4, 2022 ರಂದು ಹರಿದ್ವಾರದಲ್ಲಿ ಮಾತನಾಡಿದ್ದ ಬಾಬಾ ರಾಮ್‌ದೇವ್ ಅವರು, ಕೊರೊನಾ ಲಸಿಕೆ ತೆಗೆದುಕೊಂಡರೂ, ಯುಎಸ್ ಅಧ್ಯಕ್ಷ ಬೈಡನ್ ಮೂರನೇ ಬಾರಿಗೆ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಬೈಡನ್ಗೆ ಕೊರೊನಾ ಸೋಂಕು ತಗುಲಿರುವುದು ವೈದ್ಯಕೀಯ ವಿಜ್ಞಾನದ ವೈಫಲ್ಯ ಎನ್ನುವುದನ್ನು ತೋರಿಸುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು ಎಂದು ವಾದಿಸಿದರು.
ಕೊರೊನಿಲ್ ಔಷಧಕ್ಕೆ ಸಂಬಂಧಿಸಿದಂತೆ ಬಾಬಾ ರಾಮ್‌ದೇವ್ ನೀಡಿದ ವಿವರಣೆಗೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಾಲಯ, ಈ ವಿವರಣೆಯಲ್ಲಿ ಬಾಬಾ ರಾಮ್‌ದೇವ್ ಅವರ ತಮ್ಮ ಬೆನ್ನು ತಟ್ಟಿಕೊಂಡಂತೆ ತೋರುತ್ತಿದೆ. ಬಾಬಾ ರಾಮದೇವ್ ಅವರ ವಿವರಣೆಯಲ್ಲಿ ಎರಡು ವಿಷಯಗಳು ಸ್ಪಷ್ಟವಾಗಿವೆ. ಮೊದಲನೆಯದಾಗಿ, ಅಲೋಪತಿ ವೈದ್ಯರ ಬಳಿ ಕೊರೊನಾಗೆ ಚಿಕಿತ್ಸೆ ಇಲ್ಲ ಮತ್ತು ಮತ್ತೊಂದು ಕೊರೊನಿಲ್ ಔಷಧವೇ ಕೊರೊನಾಗೆ ಚಿಕಿತ್ಸೆಯಾಗಿದೆ ಎಂಬುದಾಗಿದೆ. ಕೊರೊನಿಲ್, ಕೊರೊನಾಗೆ ಪೂರಕ ಚಿಕಿತ್ಸೆ ಎಂದು ನೀವು ಹೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿತು.
ಏಮ್ಸ್ ರಿಷಿಕೇಶದ ರೆಸಿಡೆಂಟ್ ವೈದ್ಯರ ಸಂಘವು 2021 ರಲ್ಲಿ ಬಾಬಾ ರಾಮ್‌ದೇವ್, ಆಚಾರ್ಯ ಬಾಲಕೃಷ್ಣ ಮತ್ತು ಪತಂಜಲಿ ಆಯುರ್ವೇದ ವಿರುದ್ಧ ಈ ಅರ್ಜಿಯನ್ನು ಸಲ್ಲಿಸಿತ್ತು. ವೈದ್ಯರ ಹೊರತಾಗಿ ಬಾಬಾ ರಾಮದೇವ್ ವಿಜ್ಞಾನಕ್ಕೆ ಸಾರ್ವಜನಿಕವಾಗಿ ಸವಾಲು ಹಾಕಿದ್ದಾರೆ. ಅವರ ಹೇಳಿಕೆಯಿಂದ ಜನರಿಗೆ ತೊಂದರೆಯಾಗುತ್ತಿದೆ. ಅವರು ವೈದ್ಯಕೀಯ ವಿಜ್ಞಾನಕ್ಕೆ ಸವಾಲು ಹಾಕುತ್ತಿದ್ದಾರೆ. ಬಾಬಾ ರಾಮ್‌ದೇವ್ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದು, ಅವರಿಗೆ ಹಲವರ ಸಂಪರ್ಕವಿದೆ. ರಾಮ್‌ದೇವ್ ನೀಡಿರುವ ಈ ಹೇಳಿಕೆಗಳು ಅವರ ಅಭಿಮಾನಿಗಳನ್ನು ಆಕರ್ಷಿಸುತ್ತವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.