ನವದೆಹಲಿ : ಯೌವನದಲ್ಲಿ ದೇಹವನ್ನು ಹುರಿಗೊಳಿಸಲು, ಅಂದವಾಗಿ ಕಾಣಲು ಯುವಜನತೆ ಜಿಮ್ಮು, ವ್ಯಾಯಾಮ ಮತ್ತು ಬಗೆ ಬಗೆಯ ಆಹಾರದ ಮೊರೆ ಹೋಗುವುದು ಸಾಮಾನ್ಯ. ಆದ್ರೆ ರಾಷ್ಟ್ರ ರಾಜಧಾನಿಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಹೌದು, ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯ ವೈದ್ಯರು ಶಸ್ತ್ರ ಚಿಕಿತ್ಸೆ ಮೂಲಕ 26 ವರ್ಷದ ಯುವಕನ ಹೊಟ್ಟೆಯಿಂದ 39 ನಾಣ್ಯಗಳು ಮತ್ತು 37 ಆಯಸ್ಕಾಂತಗಳನ್ನು ಹೊರತೆಗೆದಿದ್ದಾರೆ. ಸತುವು ದೇಹದ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂಬ ನಂಬಿಕೆಯಿಂದ ಈ ಯುವಕನು ನಾಣ್ಯಗಳು ಮತ್ತು ಆಯಸ್ಕಾಂತಗಳನ್ನು ನುಂಗಿದ್ದ ಎಂದು ತಿಳಿದುಬಂದಿದೆ.
ನಾಣ್ಯಗಳು 1 ರೂ. 2 ರೂ. ಮತ್ತು 5 ರೂ. ಮುಖಬೆಲೆಯದ್ದಾಗಿದ್ದು, ಆಯಸ್ಕಾಂತಗಳು ವಿವಿಧ ಆಕಾರಗಳಲ್ಲಿವೆ. ಇವುಗಳನ್ನು ನುಂಗಿದ ಬಳಿಕ ಯುವಕನಿಗೆ ವಾಂತಿ ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರವಾದ ನೋವಿನಿಂದ ಆತ ಏನನ್ನೂ ತಿನ್ನಲು ಸಾಧ್ಯವಾಗಿರಲಿಲ್ಲ.
ಚಿಕಿತ್ಸೆ ಕುರಿತು ವೈದ್ಯರು ಹೇಳಿದ್ದು ಹೀಗೆ; ಈ ಬಗ್ಗೆ ಆಸ್ಪತ್ರೆಯ ಲ್ಯಾಪ್ರೋಸ್ಕೋಪಿಕ್ ಸರ್ಜನ್ ಡಾ ತರುಣ್ ಮಿತ್ತಲ್ ಮಾತನಾಡಿ, ರೋಗಿಯ ಸಿಟಿ ಸ್ಕ್ಯಾನ್‌ನಲ್ಲಿ ನಾಣ್ಯಗಳು ಮತ್ತು ಆಯಸ್ಕಾಂತಗಳಂತಹ ಹಲವಾರು ಕಣಗಳು ಕರುಳನ್ನು ನಿರ್ಬಂಧಿಸಿರುವುದು ಕಂಡುಬಂದಿದ್ದು, ತಕ್ಷಣ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು ನಿರ್ಧರಿಸಿದ್ದರು. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಕರುಳಿನೊಳಗೆ ಎರಡು ಕುಣಿಕೆಗಳಲ್ಲಿ ನಾಣ್ಯಗಳು ಮತ್ತು ಆಯಸ್ಕಾಂತಗಳನ್ನು ವೈದ್ಯರು ಕಂಡುಕೊಂಡರು ಎಂದಿದ್ದಾರೆ.
ಆಯಸ್ಕಾಂತೀಯ ಬಲವು ಎರಡು ಕುಣಿಕೆಗಳನ್ನು ಒಟ್ಟಿಗೆ ಎಳೆದು ಅವುಗಳನ್ನು ಸವೆತಗೊಳಿಸಿತ್ತು. ನಂತರ ಶಸ್ತ್ರಚಿಕಿತ್ಸೆ ನಡೆಸಿ ನಾಣ್ಯಗಳು ಮತ್ತು ಆಯಸ್ಕಾಂತಗಳನ್ನು ಕರುಳಿನಿಂದ ಹೊರತೆಗೆಯಲಾಯಿತು. ನಂತರ, ರೋಗಿಯ ಹೊಟ್ಟೆಯನ್ನು ಪರೀಕ್ಷಿಸಲಾಯಿತು. ಅಲ್ಲಿಯೂ ಹಲವು ನಾಣ್ಯಗಳು ಮತ್ತು ಆಯಸ್ಕಾಂತಗಳು ಕಂಡುಬಂದಿದ್ದರಿಂದ ಇವುಗಳನ್ನು ಸಹ ತೆಗೆದುಹಾಕಲಾಯಿತು ಎಂದು ಮಾಹಿತಿ ನೀಡಿದರು.
ನಾಣ್ಯಗಳನ್ನು ಸೇವಿಸುವ ಅಭ್ಯಾಸ : ರೋಗಿ ಮಾನಸಿಕ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದು, ನಾಣ್ಯಗಳನ್ನು ಸೇವಿಸುವ ಅಭ್ಯಾಸವಿದೆ ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ. ಎರಡು ವಾರಗಳಿಗೂ ಹೆಚ್ಚು ಕಾಲ ನೋವಿನಿಂದ ಬಳಲುತ್ತಿದ್ದ ಆತನನ್ನು ಸರ್ ಗಂಗಾರಾಮ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಸಂಬಂಧಿಕರೊಬ್ಬರು ತಿಳಿಸಿದರು.
"ಶಸ್ತ್ರಚಿಕಿತ್ಸೆಯ ನಂತರ ಸ್ಕ್ಯಾನ್ ಮಾಡಿದಾಗ ಕರುಳಿನ ಪ್ರದೇಶ ಮತ್ತು ಹೊಟ್ಟೆಯು ಎಲ್ಲಾ ನಾಣ್ಯಗಳು ಮತ್ತು ಆಯಸ್ಕಾಂತಗಳಿಂದ ಮುಕ್ತವಾಗಿದೆ. ಶಸ್ತ್ರಚಿಕಿತ್ಸೆಯ ಏಳು ದಿನಗಳ ನಂತರ ರೋಗಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು" ಎಂದು ಡಾ. ಮಿತ್ತಲ್ ಅವರು ಹೇಳಿದರು.
ಇದನ್ನೂ ಓದಿ: ಒಂದಲ್ಲ ಎರಡಲ್ಲ ಬರೋಬ್ಬರಿ 187 ನಾಣ್ಯ ನುಂಗಿದ ಭೂಪ.. ವ್ಯಕ್ತಿಯ ಪ್ರಾಣ ಉಳಿಸಿದ ಬಾಗಲಕೋಟೆ ವೈದ್ಯರು