ಹೈದರಾಬಾದ್: ಐದು ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ 62 ವರ್ಷದ ಗಫರ್ ಅಲಿಗೆ ನೀಡಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ಹೈಕೋರ್ಟ್ ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಿ ಮಹತ್ವದ ತೀರ್ಪು ನೀಡಿದೆ. ಹಾಗೇ ತೀರ್ಪಿನಲ್ಲಿ ಅಲಿ ತನ್ನ ಜೈಲುವಾಸದ ಮೊದಲ 15 ವರ್ಷಗಳ ಕಾಲ ಪೆರೋಲ್, ಕ್ಷಮಾದಾನ ಅಥವಾ ಉಪಶಮನಕ್ಕೆ ಅರ್ಹನಾಗಿರುವುದಿಲ್ಲ ಎಂಬುದನ್ನು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ: 2023ರ ಅಕ್ಟೋಬರ್ 16ರಂದು ರಾಮಚಂದ್ರಪುರಂ ಮಂಡಲದ ಹಳ್ಳಿಯಲ್ಲಿ ಗಫರ್ ಅಲಿ ಎಂಬಾತ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ. ಈ ಪ್ರಕರಣದ ತನಿಖೆ ನಡೆಸಿದ ಸಂಗಾರೆಡ್ಡಿ ಪೋಕ್ಸೋ ವಿಶೇಷ ನ್ಯಾಯಾಲಯವು ಸೆಪ್ಟೆಂಬರ್ 2023 ರಲ್ಲಿ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಆದೇಶಿಸಿತ್ತು. ಈ ಪ್ರಕರಣದ ವಿರುದ್ಧ ಗಫರ್ ಪರ ವಕೀಲರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಎರಡೂ ಕಡೆ ವಾದ ಆಲಿಸಿ ತೀರ್ಪು ನೀಡಿದ ಕೋರ್ಟ್: ನ್ಯಾಯಮೂರ್ತಿ ಕೆ. ಸುರೇಂದರ್ ಮತ್ತು ನ್ಯಾಯಮೂರ್ತಿ ಜೆ.ಅನಿಲ್ ಕುಮಾರ್ ಅವರಿದ್ದ ವಿಭಾಗೀಯ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು. ಎರಡೂ ಕಡೆಯವರು ಸಲ್ಲಿಸಿದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಪೀಠವು ಈ ಮಹತ್ವದ ಆದೇಶ ನೀಡಿದೆ.
ಘಟನೆ ನಡೆದ ದಿನದಂದು ಬಾಲಕಿ ಗಫರ್ ಜೊತೆಗೆ ಕೊನೆಯಾದಾಗಿ ಕಾಣಿಸಿಕೊಂಡಿದ್ದಳು ಎಂದು ಸಾಕ್ಷ್ಯಿಗಳು ತಿಳಿಸಿವೆ. ಜೊತೆಗೆ ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಗೆ ತಂಪು ಪಾನೀಯ ನೀಡಿ ಅಪರಾಧ ಎಸಗಿದ್ದು, ಆಘಾತದಿಂದ ಬಾಲಕಿ ಸಾವನ್ನಪ್ಪಿರುವುದು ವರದಿಯಲ್ಲಿ ಕಂಡು ಬಂದಿದೆ. ಅಲ್ಲದೇ ಸಂತ್ರಸ್ತೆಯ ಕೆನ್ನೆ, ಕಣ್ಣು, ಗಂಟಲು ಮತ್ತು ಜನನಾಂಗಗಳಿಗೆ ಗಾಯಗಳಾಗಿರುವುದನ್ನು ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಸಿಸಿಟಿವಿ ದೃಶ್ಯಗಳು ಮತ್ತು ಫೋರೆನ್ಸಿಕ್ ಸಂಶೋಧನಾ ಸಾಕ್ಷ್ಯಗಳು ಪ್ರಕರಣವನ್ನು ಮತ್ತಷ್ಟು ದೃಢಪಡಿಸಿದ್ದವು.
ಈ ಕಾರಣಕ್ಕೆ ಮರಣದಂಡನೆ ಬದಲು ಜೀವಾವಧಿ: ಮರಣದಂಡನೆಯನ್ನು ಷರತ್ತುಬದ್ಧ ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸುವ ನಿರ್ಧಾರದಲ್ಲಿ ಪೀಠವು ಈ ಕೆಳಗಿನ ಅಂಶಗಳನ್ನು ಪ್ರಮುಖವಾಗಿ ಗಮನಿಸಿದೆ. ಆರೋಪಿಯು ಉದ್ದೇಶಪೂರ್ವಕವಾಗಿ ಕೊಲೆ ಮಾಡಿದ್ದಾನೆ ಎಂಬುದಕ್ಕೆ ಯಾವುದೇ ಸಾಕ್ಷಾಧಾರ ಇಲ್ಲ. ಹಾಗೂ ಗಫರ್ ಆಲಿ ಈ ಮೊದಲು ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದೇ ಇರುವುದರಿಂದ ಆತನ ಶಿಕ್ಷೆಯನ್ನು ಕಡಿತ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಜೀವವಾಧಿ ಶಿಕ್ಷೆಗೆ ಷರತ್ತು: ಮರಣದಂಡನೆಯನ್ನು ರದ್ದುಗೊಳಿಸಿದ ಮೊದಲ 15 ವರ್ಷಗಳವರೆಗೆ ಯಾವುದೇ ರೀತಿಯ ಬಿಡುಗಡೆಗೆ ಅಲಿ ಅರ್ಹರಾಗಿರುವುದಿಲ್ಲ. ಈ ಅವಧಿಯಲ್ಲಿ ಪೆರೋಲ್, ಉಪಶಮನ ಅಥವಾ ಕ್ಷಮೆಯನ್ನು ಸ್ಪಷ್ಟವಾಗಿ ನಿರ್ಬಂಧಿಸಲಾಗಿದೆ, ಕಠಿಣ ಷರತ್ತುಗಳ ಅಡಿಯಲ್ಲಿ ಶಿಕ್ಷೆಯನ್ನು ಪೂರೈಸುತ್ತಾರೆ ಎಂದು ಖಚಿತಪಡಿಸುತ್ತದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ
ಇದನ್ನೂ ಓದಿ: ಮಾಂತ್ರಿಕನ ಮಾತು ಕೇಳಿ 7 ವರ್ಷದ ಬಾಲಕನ ಕೊಲೆ: ಹಂತಕನ ಬಂಧನ, ತಂತ್ರಿಗಾಗಿ ಹುಡುಕಾಟ