ರೂರ್ಕಿ (ಉತ್ತರಾಖಂಡ): ಕ್ರಿಕೆಟ್ ವಿಚಾರವಾಗಿ ಎರಡು ಗುಂಪುಗಳ ನಡುವೆ ಆರಂಭಗೊಂಡ ಗಲಾಟೆ ಓರ್ವ ಯುವಕನ ಸಾವಿನಲ್ಲಿ ಅಂತ್ಯಗೊಂಡಿದೆ. ಹರಿದ್ವಾರದ ರೂರ್ಕಿಯಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಸದ್ದಾಂ ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ. ಗಲಾಟೆಯಲ್ಲಿ ಉಭಯ ಗುಂಪುಗಳು ಹರಿತವಾದ ಆಯುಧಗಳನ್ನು ಬಳಸಿದ್ದರಿಂದ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಘಟನೆಯಿಂದ ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಗ್ರಾಮದ ಸುತ್ತಲೂ ಪೊಲೀಸ್ ಪಡೆಯನ್ನು ನಿಯೋಜಿಸಿದ್ದು, ಹಲವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಎಸ್‌ಪಿ ಪರಮೇಂದ್ರ ದೋಬಲ್ ಮಾಹಿತಿ ನೀಡಿದ್ದಾರೆ.
ನಡೆದಿದ್ದಿಷ್ಟು: ರೂರ್ಕಿಯ ಪನಿಯಾಲ ಗ್ರಾಮದ ನಿವಾಸಿ ಸದ್ದಾಂ ಎಂಬಾತ ತನ್ನ ಕೆಲ ಸ್ನೇಹಿತರೊಂದಿಗೆ ಗ್ರಾಮದ ಹೊಲವೊಂದರಲ್ಲಿ ಕ್ರಿಕೆಟ್ ಆಡುತ್ತಿದ್ದ. ಆಡುತ್ತಿದ್ದಾಗ ಚೆಂಡು ಸಮೀಪದ ಮೈದಾನಕ್ಕೆ ಹೋಗಿತ್ತು. ಚೆಂಡನ್ನು ತರಲೆಂದು ಸದ್ದಾಂ ಅಲ್ಲಿಗೆ ಹೋದಾಗ, ತೋಟದ ಮಾಲೀಕ ಮತ್ತು ಈತನ ನಡುವೆ ಚಕಮಕಿ ನಡೆದಿತ್ತು. ಘಟನೆ ಬಳಿಕ ತೋಟದ ಮಾಲೀಕ ತನ್ನನ್ನು ಥಳಿಸಿರುವುದಾಗಿ ಸದ್ದಾಂ ತನ್ನ ಪೋಷಕರಿಗೆ ತಿಳಿಸಿದ್ದನು. ಈ ವಿಚಾರ ಗೊತ್ತಾಗುತ್ತಿದ್ದಂತೆ ತೋಟದ ಮಾಲೀಕನನ್ನು ಒಂದು ಗುಂಪು ಆಗಮಿಸಿ ಪ್ರಶ್ನಿಸಲು ಆಗಮಿಸಿದ್ದರು. ಭಾನುವಾರ ತಡರಾತ್ರಿ ಎರಡೂ ಕಡೆಯ 10ಕ್ಕೂ ಹೆಚ್ಚು ಮಂದಿ ಪರಸ್ಪರ ಹೊಡೆದಾಡಿಕೊಂಡಿದ್ದು, ಹಲವರು ಗಾಯಗೊಂಡಿದ್ದಾರೆ.
ಎರಡೂ ಕಡೆಯವರು ದೊಣ್ಣೆ ಹಾಗೂ ಹರಿತವಾದ ಆಯುಧಗಳಿಂದ ಪರಸ್ಪರ ಹಲ್ಲೆ ನಡೆಸಿದ್ದರಿಂದ ಸದ್ದಾಂ ಎಂಬಾತ ತೀವ್ರ ಗಾಯಗೊಂಡಿದ್ದನು. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿತಾದರೂ ಚಿಕಿತ್ಸೆ ಫಲಿಸದೇ ಆತ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಎರಡೂ ಗುಂಪಿನ ಕಡೆಯರು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಮೃತದೇಹವನ್ನು ತಮ್ಮ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಗಂಗಾನಹರ್ ಕೊಟ್ವಾಲಿ ಪ್ರಭಾರಿ ಇನ್ಸ್‌ಪೆಕ್ಟರ್ ಗೋವಿಂದ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ: ಹಣಕಾಸಿನ ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ