ವಾರಣಾಸಿ (ಉತ್ತರ ಪ್ರದೇಶ): ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ವಂಚನೆ ಹಾಗೂ ಡಿಜಿಟಲ್ ಅರೆಸ್ಟ್ನಂತಹ ಪ್ರಕರಣಗಳು ಹೆಚ್ಚುತ್ತಲೇ ಇವೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಕಳವಳ ವ್ಯಕ್ತಪಡಿಸಿದ್ದರು. ಇದೀಗ ವಾರಣಾಸಿಯಲ್ಲಿ ನಿವೃತ್ತ ನೌಕರರೊಬ್ಬರು ಇಂತಹ ಮೋಸದ ಜಾಲಕ್ಕೆ ಸಿಲುಕಿ, 98 ಲಕ್ಷ ಹಣ ಕಳೆದುಕೊಂಡಿದ್ದಾರೆ. ಭಾರತೀಯ ನೌಕಾ ಸೇನೆಯಲ್ಲಿದ್ದ ಸಬ್ ಲೆಫ್ಟಿನೆಂಟ್ ಬರೋಬ್ಬರಿ 22 ದಿನಗಳ ಕಾಲ ಡಿಜಿಟಲ್ ಅರೆಸ್ಟ್ಗೆ ಒಳಗಾಗಿದ್ದು, 98 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ: ವಾರಣಾಸಿಯ ಮಾಧವ ನಗರ ಕಾಲೋನಿಯ ನಿವಾಸಿಯಾಗಿರುವ ಅನುಜ್ ಕುಮಾರ್ ಯಾದವ್ ವಂಚನೆಗೆ ಒಳಗಾದ ನಿವೃತ್ತ ಅಧಿಕಾರಿ. 2024 ಜುಲೈ 31ರಂದು ಸೇವೆಯಿಂದ ನಿವೃತ್ತಿಯಾಗಿದ್ದ ಇವರು ವಿಶ್ರಾಂತಿಯ ಜೀವನ ಕಳೆಯುತ್ತಿದ್ದಾರೆ. ಈ ವೇಳೆ ನವೆಂಬರ್ 11ರಂದು ಸೈಬರ್ ಅಪರಾಧಿಗಳು ಟ್ರಾಯ್ ಅಧಿಕಾರಿಗಳಂತೆ ಬಿಂಬಿಸಿಕೊಂಡು ಕರೆ ಮಾಡಿದ್ದರು. ಅಲ್ಲದೇ ಅಂದಿನಿಂದ ಡಿಸೆಂಬರ್ 3ರ ವರೆಗೆ ಡಿಜಿಟಲ್ ಅರೆಸ್ಟ್ ಮಾಡಿದ್ದರು ಎಂಬ ಅಂಶ ಹೊರಬಿದ್ದಿದೆ.
''ನಿಮ್ಮ ಹೆಸರಿನಲ್ಲಿ ಸಿಮ್ ಕಾರ್ಡ್ ವಿತರಿಸಲಾಗಿದ್ದು, ಇದನ್ನು ಅಕ್ರಮ ಚಟುವಟಿಕೆಗೆ ಬಳಕೆ ಮಾಡಲಾಗುತ್ತಿದೆ ಎಂದು ಬೆದರಿಕೆ ಹಾಕಿದ್ದಾರೆ. ಇದಾದ ಸ್ವಲ್ಪ ಹೊತ್ತಿನಲ್ಲಿ ಮತ್ತೊಂದು ಕರೆ ಬಂದಿದ್ದು, ತಾವು ಪೊಲೀಸರು ಎಂದು ಹೇಳಿಕೊಂಡಿದ್ದು, ನಿಮ್ಮ ಹೆಸರಿನಲ್ಲಿ ಎಫ್ಐಆರ್ ದಾಖಲಾಗಿದೆ ಎಂದಿದ್ದಾರೆ. ಅಲ್ಲದೇ, ಈ ವೇಳೆ ಮಾಜಿ ಸಿಜೆಐ ಫೋಟೋವನ್ನು ವಾಟ್ಸಾಪ್ ಮಾಡುವ ಮೂಲಕ ನರೇಶ್ ಗೋಯಲ್ ಮನಿ ಲಾಂಡರಿಂಗ್ ಕೇಸ್ನಲ್ಲಿ ನಿಮ್ಮ ಪಾತ್ರವಿದೆ'' ಎಂದು ಬೆದರಿಸಿದ್ದಾರೆ.
ಇಷ್ಟಕ್ಕೆ ಮುಗಿಯದೇ ಅನೇಕ ವಾಟ್ಸಾಪ್ ನಂಬರ್ನಿಂದ ಬೆದರಿಕೆ ಕರೆ ಬಂದಿದೆ. ಈ ವೇಳೆ ಕರೆ ಮಾಡಿದ ಅವರಿಗೆ ತನಿಖೆ ನಡೆಯುತ್ತಿದ್ದು, ಈ ಉದ್ದೇಶದಿಂದ ನಿಮ್ಮ ಹಣ ವರ್ಗಾಯಿಸುವ ಸ್ವಾತಂತ್ರ್ಯ ನೀಡಿ. ತನಿಖೆ ಮುಗಿದ ಬಳಿಕ ಎಲ್ಲಾ ಹಣವನ್ನು ನಿಮಗೆ ವರ್ಗಾಯಿಸುತ್ತೇವೆ ಎಂದು ತಿಳಿಸಿದ್ದಾರೆ. ಇದಾದ ಬಳಿಕ ನವೆಂಬರ್ 14ರಂದು 33 ಲಕ್ಷ ಹಣವನ್ನು ಕೋಟಕ್ ಮಹೀಂದ್ರಾ ಬ್ಯಾಂಕ್ಗೆ ವರ್ಗಾವಣೆ ಮಾಡಿಸಲಾಗಿದೆ. ನಂತರ ನವಂಬರ್ 16ರಂದು ಎರಡು ಕಂತಿನಂತೆ ಪ್ರತಿ ಬಾರಿ ಐಸಿಐಸಿಐಗೆ ಬ್ಯಾಂಕ್ ಖಾತೆಗೆ 7.5 ಲಕ್ಷ ವರ್ಗಾಯಿಸಲಾಗಿದೆ. ಇದರಲ್ಲಿ ಎಫ್ಡಿ ಮತ್ತು ಪೆನ್ಷನ್ ಹಣವನ್ನು ಕೂಡ ವರ್ಗಾಯಿಸಿಕೊಳ್ಳಲಾಗಿದೆ.
ಬಯಲಾಗಿದ್ದೇಗೆ ಈ ರಹಸ್ಯ: ಸುಮಾರು 22 ದಿನಗಳ ಕಾಲ ಡಿಜಿಟಲ್ ಅರೆಸ್ಟ್ ಆದ ನಿವೃತ್ತ ಅಧಿಕಾರಿಯು ಈ ಅವಧಿಯಲ್ಲಿ ಯಾರ ಸಂಪರ್ಕಕ್ಕೂ ಬಂದಿಲ್ಲ. ಈ ವೇಳೆ ಅನೇಕ ದಿನಗಳ ಕಾಲ ತಂದೆಯ ಫೋನ್ ಕರೆಯಿಲ್ಲದೆ ಮಗ ಅನುಮಾನಗೊಂಡು ಡಿಸೆಂಬರ್ 3ರಂದು ಮನೆಗೆ ಬಂದಿದ್ದಾರೆ. ಇದಾದ ಬಳಿಕ ಘಟನೆ ಬಗ್ಗೆ ತಿಳಿದಾಗ ತಂದೆ ಸೈಬರ್ ವಂಚನೆಗೆ ಒಳಗಾಗಿದ್ದನ್ನು ತಿಳಿದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣದ ಕುರಿತು ಮಾಹಿತಿ ನೀಡಿದ ಸೈಬರ್ ಪೊಲೀಸ್ ಅಧಿಕಾರಿ ವಿಜಯ್ ನಾರಾಯಣ್ ಮಿಶ್ರಾ, ಹಣ ವರ್ಗಾವಣೆ ಮಾಹಿತಿ ಆಧಾರದ ಮೇಲೆ ಮೂರು ನಂಬರ್ ಪತ್ತೆ ಮಾಡಲಾಗಿದ್ದು, ಮೂರು ನಗರಗಳಲ್ಲಿ ಇವು ಕಂಡು ಬಂದಿವೆ. ನವದೆಹಲಿಯ ರೋಹಿಣಿ ಪ್ರದೇಶದ ಬ್ಯಾಂಕ್ಗೆ 33 ಲಕ್ಷ ರೂ. ಗುರುಗ್ರಾಮದ ಕೋಟಕ್ ಮಹೀಂದ್ರಾ ಬ್ಯಾಂಕ್ಗೆ 50 ಲಕ್ಷ ರೂ. ಹರಿಯಾಣದ ಪಾಣಿಪತ್ ಐಸಿಐಸಿಐ ಬ್ಯಾಂಕ್ಗೆ ಏಳೂವರೆ ಲಕ್ಷ, ಮತ್ತು ಉತ್ತರ ಪ್ರದೇಶದ ಕುಶಿನಗರ ಬ್ಯಾಂಕ್ಗೆ ಏಳು ಲಕ್ಷ ವರ್ಗಾವಣೆಯಾಗಿದೆ.
ಇನ್ನು, ಈ ಕುರಿತು ಮಾತನಾಡಿರುವ ನಿವೃತ್ತ ನೌಕಾಧಿಕಾರಿ ಅನುಜ್, ವಂಚಕರು ತನಗೆ ಇದು ರಾಷ್ಟ್ರೀಯ ಭದ್ರತೆ ವಿಚಾರವಾಗಿದ್ದು, ಸಹಕಾರ ನೀಡಬೇಕು ಎಂದು ಬೆದರಿಕೆ ಹಾಕಿದ್ದರು ಎಂದು ತಿಳಿಸಿದರು.
ಇದನ್ನೂ ಓದಿ: ಹುಷಾರ್.. ಈ ಸಂಖ್ಯೆಗಳಿಂದ ನಿಮಗೆ ಕರೆಗಳು ಬರುತ್ತಿವೆಯಾ?: ಹಾಗಾದರೆ ಈ ಕರೆಗಳನ್ನು ಎತ್ತಲೇಬೇಡಿ! ಏಕೆ ಅಂತೀರಾ?