ಛತ್ರ(ಜಾರ್ಖಂಡ್): ಇಲ್ಲಿನ ಛತ್ರ ಜಿಲ್ಲೆಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಯೋಧನೊಬ್ಬ ತನ್ನ ಸರ್ವಿಸ್ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೆ ಸೂಕ್ತ ಕಾರಣ ತಿಳಿದಿಲ್ಲವಾದರೂ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜಧಾನಿ ರಾಂಚಿಯಿಂದ ಸುಮಾರು 200 ಕಿಲೋ ಮೀಟರ್ ದೂರದಲ್ಲಿರುವ ವಶಿಷ್ಠ ನಗರ ಪ್ರದೇಶದಲ್ಲಿನ 190 ಬೆಟಾಲಿಯನ್‌ನ ಸಿಆರ್‌ಪಿಎಫ್ ಬೆಟಾಲಿಯನ್ನಲ್ಲಿ ಬುಧವಾರ ಈ ಘಟನೆ ನಡೆದಿದೆ. ಮೃತರನ್ನು ರಾಜಸ್ಥಾನದ ನಿಹಾಲ್ ಸಿಂಗ್ ಎಂದು ಗುರುತಿಸಲಾಗಿದೆ.
ನಿಹಾಲ್ ಸಿಂಗ್ ಬೆಟಾಲಿಯನ್ನಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ. ರಾಜಸ್ಥಾನದ ದೌಸಾ ನಿವಾಸಿಯಾಗಿರುವ ಅವರು ಫೆಬ್ರವರಿ 3ರಂದು ರಜೆ ಮುಗಿಸಿ ಸೇನೆಗೆ ಮರಳಿದ್ದರು. ಇಂದು ಬೆಳಗ್ಗೆ ಏಕಾಏಕಿ ತಮ್ಮಲ್ಲಿನ ಸೇವಾ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ದು ಕೇಳಿಬಂದು ತಕ್ಷಣವೇ ಸ್ಥಳಕ್ಕೆ ಬಂದಿರುವ ಸಹ ಯೋಧರು ಸಿಂಗ್ ಅವರ ಶವವನ್ನು ಕಂಡಿದ್ದಾರೆ ಎಂದು 190 ಬೆಟಾಲಿಯನ್‌ನ ಕಮಾಂಡೆಂಟ್ ಮನೋಜ್ ಕುಮಾರ್ ತಿಳಿಸಿದ್ದಾರೆ.
ಮೃತ ಯೋಧನ ಕುಟುಂಬ ಸದಸ್ಯರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಯೋಧ ನಿಹಾಲ್ ಸಿಂಗ್ 2015ರಲ್ಲಿ ಸಿಆರ್‌ಪಿಎಫ್‌ಗೆ ಸೇರಿದ್ದರು. 2022ರಲ್ಲಿ 190 ಬೆಟಾಲಿಯನ್‌ಗೆ ನಿಯೋಜಿತರಾಗಿದ್ದರು.
ಬಂಗಾಳದಲ್ಲಿ ಬಿಎಸ್‌ಎಫ್ ಯೋಧ ಸಾವು: ಭಾರತ-ಬಾಂಗ್ಲಾದೇಶದ ಗಡಿಯಲ್ಲಿರುವ ಸಿತಾಲ್ಕುಚಿ ಬ್ಲಾಕ್‌ನಲ್ಲಿ ಬಿಎಸ್‌ಎಫ್ ಯೋಧನೊಬ್ಬ ಸರ್ವೀಸ್ ರೈಫಲ್‌ನಿಂದ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಈಚೆಗೆ ನಡೆದಿತ್ತು. ಕೌಟುಂಬಿಕ ಸಮಸ್ಯೆಗಳಿಂದಾಗಿ ಆತ ಪ್ರಾಣಾಹುತಿ ಮಾಡಿಕೊಂಡಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿತ್ತು.
ನಲ್ಲಬೋತುಲ ನಾರಾಯಣ ಸ್ವಾಮಿ ಆತ್ಮಹತ್ಯೆಗೆ ಶರಣಾದ ಯೋಧ. ಪಶ್ಚಿಮ ಬಂಗಾಳದ ಸೀತಾಲ್ಕುಚಿಯ ಗಾಡೋಪೋಟಾ ಗ್ರಾಮದ ಅಮೃತ್ ಕ್ಯಾಂಪ್ನಲ್ಲಿ ಈತ ಸೇವೆ ಸಲ್ಲಿಸುತ್ತಿದ್ದ. ಘಟನೆ ನಡೆದ ತಕ್ಷಣ ಇತರ ತೀವ್ರ ಗಾಯಗೊಂಡಿದ್ದ ಯೋಧನನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಪರೀಕ್ಷೆ ನಡೆಸಿದ ವೈದ್ಯರು ಯೋಧ ಮೃತಪಟ್ಟಿದ್ದಾಗಿ ತಿಳಿಸಿದ್ದರು.
ಯೋಧನಿಗೆ ಕೆಲವು ಕೌಟುಂಬಿಕ ಸಮಸ್ಯೆಗಳಿದ್ದವು. ಅವರ ಕುಟುಂಬಸ್ಥರು, ಪರಿಚಯಸ್ಥರ ವಿಚಾರಣೆಯ ಬಳಿಕ ಈ ಮಾಹಿತಿ ತಿಳಿದುಬಂದಿದೆ ಎಂದು ಕೂಚ್ ಬೆಹಾರ್‌ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದರು.
ಇದನ್ನೂ ಓದಿ: ಮಂಗಳೂರು: ಗುಂಡು ಹಾರಿಸಿಕೊಂಡು ಕರ್ತವ್ಯನಿರತ ಸಿಐಎಸ್ಎಫ್ ಪಿಎಸ್ಐ ಆತ್ಮಹತ್ಯೆ