ಚೆನ್ನೈ(ತಮಿಳುನಾಡು): ಸಾಲ ಕೊಟ್ಟ ಮಹಿಳೆಯ ತಾಯಿಯನ್ನು ದಂಪತಿ ಅತ್ಯಂತ ಬರ್ಬರವಾಗಿ ಕೊಲೆಗೈದ ಘಟನೆ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನಡೆದಿದೆ. ಸಾಲ ತೀರಿಸುವ ಸಲುವಾಗಿ ವೃದ್ಧೆಯ ಹಣ, ಚಿನ್ನವನ್ನೂ ಕಳ್ಳತನ ಮಾಡಿದ್ದಾರೆ. ಶವವನ್ನು ತುಂಡಾಗಿ ಕತ್ತರಿಸಿ ಕಾಲುವೆಗೆಸೆದು ಕ್ರೌರ್ಯ ಮೆರೆದಿದ್ದಾರೆ. ಸಂತ್ರಸ್ತೆಯ ಮಗಳು ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಇಡೀ ಪ್ರಕರಣ ಬೆಳಕಿಗೆ ಬಂದಿದೆ.
ಸಂಪೂರ್ಣ ವಿವರ: ಚೆನ್ನೈನ ಎಂಜಿಆರ್ ನಗರದ ನಿವಾಸಿ ವಿಜಯಾ (78) ಎಂಬವರು ದಿಢೀರ್ ಕಾಣೆಯಾಗಿದ್ದರು. ಮಗಳು ಲೋಗನಾಯಕಿ ವಿವಿಧೆಡೆ ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ತಾಯಿಯ ಸುಳಿವು ಸಿಗಲಿಲ್ಲ. ಜುಲೈ 19ರಂದು ತಾಯಿ ಕಾಣೆಯಾಗಿದ್ದಾರೆ ಎಂದು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶೋಧ ಆರಂಭಿಸಿದ್ದರು.
ಜುಲೈ 23ರಂದು ವಿಜಯಾ ಮನೆ ಬಳಿ ಇದ್ದ ಪಾರ್ಥಿಬನ್ ಎಂಬ ವ್ಯಕ್ತಿಯನ್ನು ಠಾಣೆಗೆ ಬರುವಂತೆ ಪೊಲೀಸರು ತಿಳಿಸಿದ್ದರು. ಆದರೆ, ಪಾರ್ಥಿಬನ್ ತನ್ನ ಮನೆ ಖಾಲಿ ಮಾಡಿ ಪರಾರಿಯಾಗಿದ್ದ. ಇದರಿಂದ ಅನುಮಾನಗೊಂಡ ಪೊಲೀಸರು ಆತನ ಮೊಬೈಲ್ ಸಿಗ್ನಲ್ ಪತ್ತೆ ಹಚ್ಚಿದ್ದಾರೆ. ಆಗ ಆತ ವಿರುಡುನಗರ ಪ್ರದೇಶದಲ್ಲಿರುವುದು ಗೊತ್ತಾಗಿದೆ. ಕೂಡಲೇ ಪಾರ್ಥಿಬನ್ ಮತ್ತು ಸಂಗೀತಾ ಎಂಬ ದಂಪತಿಯನ್ನು ವಶಕ್ಕೆ ಪಡೆದಿದ್ದಾರೆ. ನಂತರ ನಡೆದ ವಿಚಾರಣೆಯಲ್ಲಿ ಆರೋಪಿಗಳು ವಿಜಯಾರನ್ನು ಕೊಲೆ ಮಾಡಿರುವ ಸಂಗತಿ ಒಪ್ಪಿಕೊಂಡಿದ್ದಾರೆ.
ಕೊಲೆ ರಹಸ್ಯ ಬಯಲು!: ಪೊಲೀಸರು ಇಬ್ಬರನ್ನೂ ಚೆನ್ನೈಗೆ ಕರೆದುಕೊಂಡು ಹೋಗಿ ಕೂಲಂಕಷವಾಗಿ ತನಿಖೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಆಘಾತಕಾರಿ ಮಾಹಿತಿ ಬಹಿರಂಗಗೊಂಡಿದೆ. ಕೊಲೆಯಾದ ವಿಜಯಾ ಅವರ ಪುತ್ರಿ ಲೋಗನಾಯಕಿ ಅವರಿಂದ ಪಾರ್ಥಿಬನ್ ದಂಪತಿ 20 ಸಾವಿರ ರೂ ಸಾಲ ಪಡೆದಿದ್ದರು. ಲೋಗಾನಾಯಕಿ ಹಣ ನೀಡುವಂತೆ ಒತ್ತಡ ಹೇರುತ್ತಿದ್ದರಂತೆ. ಇದೇ ಸಮಯದಲ್ಲಿ ವಿಜಯಾ ತಮ್ಮ ಸೂಟ್ಕೇಸ್ನಲ್ಲಿ ಹಣ ಇಡುವುದು ಸಂಗೀತಾಗೆ ಗೊತ್ತಾಗಿದೆ.
ಹೀಗಾಗಿ ಈ ಹಣವನ್ನು ಹೇಗಾದರೂ ಕದ್ದು ಲೋಗನಾಯಕಿಗೆ ನೀಡಲು ಸಂಗೀತಾ ಸಂಚು ರೂಪಿಸಿದ್ದಳು. ವಿಜಯಾ ಅವರು ಒಂಟಿಯಾಗಿ ಮನೆಯಲ್ಲಿದ್ದಾಗ ಸಂಗೀತಾ ತೆರಳಿ ಸೂಟ್ಕೇಸ್ನಲ್ಲಿದ್ದ ಹಣ ದೋಚಿದ್ದಾಳೆ. ಇದನ್ನು ಗಮನಿಸಿದ ವಿಜಯಾ ಜೋರಾಗಿ ಕೂಗಿದ್ದಾರೆ. ಗಾಬರಿಗೊಂಡ ಸಂಗೀತಾ ಅಲ್ಲೇ ಇದ್ದ ರಾಡ್ನಿಂದ ವಿಜಯಾ ತಲೆಗೆ ಹೊಡೆದಿದ್ದಾಳೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಂತ್ರಸ್ತೆಯನ್ನು ತಮ್ಮ ಮನೆಗೆ ಕರೆದೊಯ್ದು, ದೇಹವನ್ನು ತುಂಡು ತುಂಡುಗಳಾಗಿ ಕತ್ತರಿಸಿ ಗೋಣಿಚೀಲದಲ್ಲಿ ತುಂಬಿದ್ದಾರೆ. ಬಳಿತ, ದ್ವಿಚಕ್ರ ವಾಹನದಲ್ಲಿ ತೆಗೆದುಕೊಂಡು ಹೋಗಿ ಪೂರ್ವ ಜೋನ್ಸ್ ರಸ್ತೆಯ ಕಾಲುವೆಗೆ ಎಸೆದಿದ್ದರು.
ಇದೀಗ ಪೊಲೀಸರು ಕಾಲುವೆಯಿಂದ ಶವದ ಚೀಲ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕೆ.ಕೆ.ನಗರ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರೆದಿದೆ.
ಇದನ್ನೂ ಓದಿ: ಚಾಮರಾಜನಗರ: ಮನೆಗಳ್ಳರಿಗೆ ಸಿಂಹಸ್ವಪ್ನವಾಗಿದ್ದ ಬಾಹು ನಿಧನ, ಸರ್ಕಾರಿ ಗೌರವದೊಂದಿಗೆ ಅಂತಿಮ ನಮನ - Police dog Bahu dies