ನವದೆಹಲಿ: ಯುವಕರು, ಮಹಿಳೆಯರು ಮತ್ತು ರೈತರಿಗೆ ಬಜೆಟ್ನಲ್ಲಿ ಘೋಷಿಸಲಾಗಿರುವ ಅಂಶಗಳು ತಮ್ಮ ಚುನಾವಣಾ ಪ್ರಣಾಳಿಕೆಯ ನಕಲು ಎಂದು ಕಾಂಗ್ರೆಸ್ ಆರೋಪಿಸಿದೆ. ಕೇಂದ್ರ ಸರ್ಕಾರ ಪ್ರಕಟಿಸಿರುವ ಯೋಜನೆಗಳು ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಅಭಿವೃದ್ಧಿ ಅಜೆಂಡಾಗಳಿವೆ. ಅವುಗಳು ಜಾರಿಯಾಗುವವರೆಗೂ ಹೋರಾಟ ನಡೆಸಲಾಗುವುದು ಎಂದು ಪಕ್ಷ ತಿಳಿಸಿದೆ.
ಯುವಕರು ಉದ್ಯೋಗಕ್ಕೆ ಸೇರಿದಾಗ ಮೊದಲ ಸಂಬಳ ಕೇಂದ್ರ ಸರ್ಕಾರ ನೀಡುವುದು, ಮಹಿಳೆಯರಿಗೆ ಮತ್ತು ರೈತರಿಗೆ ಘೋಷಿಸಿರುವ ಯೋಜನೆಗಳು ಕಾಂಗ್ರೆಸ್ನ ಪ್ರಣಾಳಿಕೆಯಲ್ಲಿವೆ. ಎನ್ಡಿಎ ಸರ್ಕಾರ ಅವನ್ನು ಯಥಾವತ್ತಾಗಿ ಕದ್ದಿದೆ. ಅಪ್ರೆಂಟಿಸ್‌ಶಿಪ್ ಕಲ್ಪನೆಯು ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿರುವ ಯುವ ಮತದಾರರ ಪರವಾಗಿತ್ತು. ಇದು ನಮ್ಮ ಪಕ್ಷದ ಚಿಂತನೆಯಾಗಿತ್ತು ಎಂದು ಹೇಳಿದೆ.
ದೇಶದ 140 ಕೋಟಿ ನಾಗರಿಕರಿಗೆ ಅಗತ್ಯವಿರುವ ಆಹಾರವನ್ನು ಬೆಳೆಯುವ ರೈತರು ಮತ್ತು ಮಹಿಳೆಯರ ಅಭ್ಯುದಯಕ್ಕಾಗಿ ಚುನಾವಣಾ ಭರವಸೆಗಳಲ್ಲಿ ಇವನ್ನು ಉಲ್ಲೇಖಿಸಲಾಗಿತ್ತು. ಹೀಗಾಗಿಯೇ ಜನರು ನಮ್ಮನ್ನು ದೊಡ್ಡ ವಿಪಕ್ಷ ಸ್ಥಾನಕ್ಕೆ ತಂದು ಕೂರಿಸಿದ್ದಾರೆ ಎಂದಿದೆ.
ಜನರ ಪರವಾಗಿ ಧ್ವನಿ: ಈ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಕಾರ್ಯಾಧ್ಯಕ್ಷ ಬಿ.ಎಂ .ಸಂದೀಪ್ ಕುಮಾರ್, ಜನರ ಪರವಾಗಿ ಧ್ವನಿ ಎತ್ತುವುದು ತಮ್ಮ ಆದ್ಯತೆಯಾಗಿದೆ. ಹೀಗಾಗಿ ಬಜೆಟ್ನಲ್ಲಿ ಸರ್ಕಾರ ಘೋಷಿಸಿರುವ ಕಾಂಗ್ರೆಸ್ ಪ್ರಣಾಳಿಕೆಯ ಅಂಶಗಳನ್ನು ಜಾರಿಯಾಗುವಂತೆ ನೋಡಿಕೊಳ್ಳಲಾಗುವುದು. ಇದಕ್ಕಾಗಿ ಪಕ್ಷ ಹೋರಾಟ ನಡೆಸಲಿದೆ ಎಂದರು.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡುವ ಮಹಿಳಾ ಮೀಸಲಾತಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ. ಇದು ಚುನಾವಣೆಗಾಗಿ ಮಾಡಿದ ಗಿಮಿಕ್ ಆಗಿತ್ತು. ಜನಗಣತಿ ಮತ್ತು ಸಂಸದೀಯ ಕ್ಷೇತ್ರಗಳ ವಿಂಗಡಣೆ ಬಗ್ಗೆಯೂ ಒತ್ತಾಯಿಸಲಾಗುವುದು ಎಂದರು.
ಮಹಿಳಾ ಮೀಸಲು ಶೀಘ್ರವೇ ಜಾರಿ ಮಾಡಿ: ಮಹಿಳೆಯರಿಗೆ ಶೇಕಡಾ 33 ರ ಮೀಸಲಾತಿಯೊಳಗೆ ಒಬಿಸಿ ಮಹಿಳೆಯರಿಗೆ ಒಳಮೀಸಲಾತಿ ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತದೆ. ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ ಭರವಸೆಯಾದ 'ನಾರಿ ನ್ಯಾಯ' ಅಂದರೆ 8,500 ರೂಪಾಯಿ ಮಾಸಿಕ ಭತ್ಯೆಯನ್ನು ಕೊಡಿಸಲು ಜುಲೈ 29 ರಿಂದ ರಾಷ್ಟ್ರವ್ಯಾಪಿ ಆಂದೋಲನವನ್ನು ನಡೆಸಲಿದ್ದೇವೆ. ಇದನ್ನು ಕೇಂದ್ರ ಸರ್ಕಾರ ಜಾರಿ ಮಾಡುವವರೆಗೂ ವಿರಮಿಸುವುದಿಲ್ಲ ಎಂದು ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ಅಲ್ಕಾ ಲಂಬಾ ತಿಳಿಸಿದರು.
ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ದೇಶಾದ್ಯಂತ ರೈತ ಮುಖಂಡರನ್ನು ಭೇಟಿ ಮಾಡುವ ಮೂಲಕ ರೈತರು ಬೆಳೆದ ಉತ್ಪನ್ನಗಳಿಗೆ ಕಾನೂನು ಬೆಂಬಲ ನೀಡುವ ಎಂಎಸ್ಪಿಯನ್ನು ಜಾರಿಯ ಭರವಸೆ ನೀಡಿದ್ದರು. ಎಂಎಸ್ಪಿಯನ್ನು ಕಾನೂನಾತ್ಮಕವಾಗಿ ಜಾರಿ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಸಂಸದ ಇಮ್ರಾನ್ ಮಸೂದ್ ತಿಳಿಸಿದ್ದಾರೆ.
ಇದನ್ನೂ ಓದಿ: ಮಾನನಷ್ಟ ಮೊಕದ್ದಮೆ: ನಾಳೆ ಸುಲ್ತಾನ್ಪುರ ನ್ಯಾಯಾಲಯಕ್ಕೆ ಹಾಜರಾಗಲಿರುವ ರಾಹುಲ್ ಗಾಂಧಿ - Rahul Gandhi appear in Court