ನವದೆಹಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಆದಾಯ ತೆರಿಗೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸರಣಿ ಹಿನ್ನಡೆಯಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಆದಾಯ ತೆರಿಗೆ ಇಲಾಖೆಯು 1820 ಕೋಟಿ ರೂ ಮೊತ್ತದ ಮತ್ತೊಂದು ನೋಟಿಸ್ ಜಾರಿ ಮಾಡಿದೆ.
ಶುಕ್ರವಾರ ಈ ವಿಷಯವನ್ನು ಬಹಿರಂಗಪಡಿಸಿದ ಕಾಂಗ್ರೆಸ್ ಮುಖಂಡ ಅಜಯ್ ಮಾಕೆನ್ ಅವರು, ''ಲೋಕಸಭೆ ಚುನಾವಣೆಗೆ ಮುನ್ನ ಹಣದ ಕೊರತೆಯಿರುವ ಪಕ್ಷಕ್ಕೆ ಮತ್ತೊಂದು ಹೊಡೆತ ನೀಡಿದೆ. 2017-18 ಮತ್ತು 2020-21ರ ಮೌಲ್ಯಮಾಪನ ವರ್ಷಕ್ಕೆ ದಂಡ ಮತ್ತು ಬಡ್ಡಿ ಸೇರಿದಂತೆ 1,823.08 ಕೋಟಿ ರೂ. ಪಾವತಿಸುವಂತೆ ಐಟಿ ಹೊಸ ನೋಟಿಸ್ ನೀಡಿದೆ. ತಮ್ಮ ವಿರುದ್ಧದ ಐಟಿ ಇಲಾಖೆ ವಿಚಾರಣೆಯನ್ನು ನಿಲ್ಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ ಈ ಬೆಳವಣಿಗೆಗಳು ನಡೆದಿರುವುದು ಗಮನಾರ್ಹ. ಯಾವುದೇ ಮೌಲ್ಯಮಾಪನ ಆದೇಶ ಅಥವಾ ದಾಖಲೆಗಳಿಲ್ಲದೇ ಗುರುವಾರ ಹೊಸ ನೋಟಿಸ್ ನೀಡಲಾಗಿದೆ. ಇದಕ್ಕೂ ಮುನ್ನ ಪಕ್ಷಕ್ಕೆ 210 ಕೋಟಿ ರೂಪಾಯಿ ದಂಡ ಹಾಕಲಾಗಿತ್ತು'' ಎಂದು ಆರೋಪಿಸಿದ್ದಾರೆ.
''ಇದು ಅತಾರ್ಕಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ ಕೃತ್ಯ. ಲೋಕಸಭೆ ಚುನಾವಣೆ ವೇಳೆಯಲ್ಲಿ ಪ್ರಮುಖ ವಿರೋಧ ಪಕ್ಷವನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಲು ಕೇಂದ್ರವು ಪ್ರಯತ್ನಿಸುತ್ತಿದೆ'' ಎಂದು ದೂರಿದರು. ಇದನ್ನು ಕಾನೂನಾತ್ಮಕವಾಗಿ ಪ್ರಶ್ನಿಸುವುದಾಗಿ ತಿಳಿಸಿದ್ದಾರೆ.
"ಕಾಂಗ್ರೆಸ್ ಇತರ ಸಮಾನ ಮನಸ್ಕ ವಿರೋಧ ಪಕ್ಷಗಳನ್ನು ಬಿಜೆಪಿ ಟಾರ್ಗೆಟ್ ಮಾಡುತ್ತಿದೆ. ಲೋಕಸಭೆ ಚುನಾವಣೆಗೆ ಮುಂಚಿತವಾಗಿ ತೆರಿಗೆ ಅಧಿಕಾರಿಗಳನ್ನು ವಿರೋಧ ಪಕ್ಷಗಳ ವಿರುದ್ಧ ಬಿಜೆಪಿ ಬಳಸುತ್ತಿದೆ. ಬಿಜೆಪಿ ತೆರಿಗೆ ಕಾನೂನುಗಳನ್ನು ಉಲ್ಲಂಘಿಸಿದೆ. ಐಟಿ ಇಲಾಖೆಯಿಂದ 4,600 ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ಸಂಗ್ರಹಿಸಲು ಮುಂದಾಗಿದೆ'' ಎಂದು ಆರೋಪಿಸಿದರು.
''ಐಟಿ ಇಲಾಖೆಯು ಆಧಾರ ರಹಿತ ಹಳೆಯ ಆದಾಯ ತೆರಿಗೆ ವಿಷಯಗಳನ್ನು ಪುನಃ ತೆರೆಯುವ ಮೂಲಕ ಕಾಂಗ್ರೆಸ್ ವಿರುದ್ಧ ಪೂರ್ವಯೋಜಿತ, ಪೈಶಾಚಿಕ ಅಭಿಯಾನ ಪ್ರಾರಂಭಿಸಿದೆ" ಎಂದು ಆಕ್ರೋಶ ಹೊರಹಾಕಿದರು.
'''ಬಿಜೆಪಿ ತೆರಿಗೆ ಭಯೋತ್ಪಾದನೆಯಲ್ಲಿ ನಿರತವಾಗಿದೆ. ಕಾಂಗ್ರೆಸ್ ಅನ್ನು ಆರ್ಥಿಕವಾಗಿ ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ನಾವು ಹೆದರುವುದಿಲ್ಲ" ಎಂದು ಕಾಂಗ್ರೆಸ್ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.