ಕೊಚ್ಚಿ: ಅಂತಾರಾಷ್ಟ್ರೀಯ ಜೀವ ವೈವಿಧ್ಯ ದಿನದ (ಮೇ 22) ಹಿನ್ನೆಲೆಯಲ್ಲಿ ಕೇಂದ್ರ ಸಾಗರ ಮೀನುಗಾರಿಕೆ ಸಂಶೋಧನಾ ಸಂಸ್ಥೆ (ಸಿಎಂಆಫ್ಆರ್ಐ) ಕೇರಳ ಕರಾವಳಿಯ ಸಮುದ್ರ ಜೀವಿಗಳ ಬಗ್ಗೆ ತಿಳಿಯುವ ಸಲುವಾಗಿ ಒಂದು ದಿನದ ಸಮೀಕ್ಷೆ ನಡೆಸಿದೆ. ಈ ಸಂದರ್ಭದಲ್ಲಿ ಸಾಗರದಾಳದ ಸಮುದ್ರ ಜೀವಿನಗಳ ಮೌಲ್ಯಮಾಪನ ನಡೆಸಿದ್ದು, 468 ಜಾತಿಯ ಸಮುದ್ರ ಜೀವಿಗಳು ಪತ್ತೆಯಾಗಿ ಹೊಸ ದಾಖಲೆ ಮಾಡಿದೆ.
ಸಾಗರದಾಳದ ಜೀವ ವೈವಿಧ್ಯ ಮತ್ತು ಪರಿಸರ ನಿರ್ವಹಣಾ ವಿಭಾಗದ (ಎಂಬಿಇಎಂಡಿ) 55 ತಜ್ಞರು ಸಮೀಕ್ಷೆಯಲ್ಲಿ ಭಾಗಿಯಾಗಿದ್ದಾರೆ. ಇವರು ಉತ್ತರದ ಕಾಸರಗೋಡಿನಿಂದ ದಕ್ಷಿಣದ ವಿಝಿಂಜಮ್‌ವರೆಗೆ ಹರಡಿರುವ 26 ಪ್ರಮುಖ ಮೀನುಗಾರಿಕಾ ಬಂದರುಗಳಲ್ಲಿ ಸಮುದ್ರ ಪ್ರಭೇದಗಳ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.
ಸಮೀಕ್ಷೆಯಲ್ಲಿ ಎಲ್ಲಾ ಪ್ರಮುಖ ಲ್ಯಾಂಡಿಂಗ್ ಮತ್ತು ಬಂದರು ಕೇಂದ್ರದಲ್ಲಿ ಒಂದೇ ದಿನ ಬೆಳಗ್ಗೆ 5ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಸಮೀಕ್ಷೆ ನಡೆಸಲಾಗಿದೆ. ಟ್ರಾಲರ್‌ಗಳು ಮತ್ತು ರಿಂಗ್ ಸೀನರ್‌ಗಳು ಸೇರಿದಂತೆ ಹಲವು ವಿಧದ ಸಮುದ್ರ ಜೀವಿಗಳ ಮಾಹಿತಿ ಕಲೆ ಹಾಕಲಾಗಿದೆ.
ಇದರಲ್ಲಿ ಸ್ಕ್ವಿಡ್‌ಗಳು ಮತ್ತು ಕಟ್ಲ್‌ಫಿಶ್‌ಗಳ ಜೊತೆಗೆ ಮ್ಯಾಕೆರೆಲ್, ಸಾರ್ಡೀನ್, ಆಂಚೊವಿಗಳು, ಹಲ್ಲಿ ಮೀನುಗಳು ಮತ್ತು ಪೆನೈಡ್ ಸಿಗಡಿಗಳಂತಹ ಜನಪ್ರಿಯ ಜಾತಿಗಳೂ ಸಹ ಅತ್ಯಂತ ಹೇರಳ ಪ್ರಮಾಣದಲ್ಲಿ ಕಂಡುಬಂದಿವೆ. ಜ್ಯಾಕ್‌ಗಳು ಮತ್ತು ಟ್ರೆವಲ್ಲಿಗಳಂತಹ ವೈವಿಧ್ಯಮಯ ಮೀನು, ವಾಣಿಜ್ಯ ಮೀನುಗಳಾದ ಕಾರಂಗಿಡೆ ಮೀನಿನ ಜಾತಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಕಂಡಿದೆ.
ಆಯಿಲ್ ಶಾರ್ಕ್, ಬ್ರಾಂಬಲ್ ಶಾರ್ಕ್, ಲ್ಯಾಂಟರ್ನ್‌ಫಿಶ್ ಮತ್ತು ಸ್ನೇಕ್ ಮ್ಯಾಕೆರೆಲ್‌ಗಳಂತಹ ಮೀನಿನ ಪ್ರಬೇದಗಳು ಕೂಡ ಸಮೀಕ್ಷೆಯಲ್ಲಿ ಕಂಡುಬಂದಿದ್ದು, ಕೇರಳದ ಸಮುದ್ರ ಮೀನುಗಾರಿಕೆಯ ಜೀವ ಜಗತ್ತಿನ ಕುರಿತು ತಿಳಿಯಲು ಸಮೀಕ್ಷೆ ಸಹಕಾರಿಯಾಗಿದೆ.
ಈ ಹಿಂದೆ ದಾಖಲಾಗದ ಹೊಸ ಏಳು ಜಾತಿಯ ಸಮುದ್ರ ಮೀನುಗಳು ಈ ಸಮೀಕ್ಷೆಯಲ್ಲಿ ಪತ್ತೆಯಾಗಿದ್ದು ವಿಶೇಷ. ಈ ತಳಿಗಳ ಕುರಿತು ನಿರಂತರ ಮೇಲ್ವಿಚಾರಣೆ ಮತ್ತು ಸಂಶೋಧನೆಯ ಅಗತ್ಯತೆಯನ್ನು ಸಮೀಕ್ಷೆ ಒತ್ತಿ ಹೇಳಿದೆ.
ಈ ಕುರಿತು ಮಾತನಾಡಿದ ಸಿಎಮ್‌ಎಫ್‌ಆರ್‌ಐ ನಿರ್ದೇಶಕ ಡಾ.ಎ.ಗೋಪಾಲಕೃಷ್ಣನ್, "ಪರಿಣಾಮಕಾರಿ ಸಂರಕ್ಷಣಾ ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸಲು ಸಮುದ್ರ ಪರಿಸರ ವ್ಯವಸ್ಥೆಗಳ ಜೀವವೈವಿಧ್ಯವನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ" ಎಂದು ಹೇಳಿದ್ದಾರೆ.
"ಭವಿಷ್ಯದ ಪೀಳಿಗೆಗೆ ಸಮುದ್ರ ಸಂಪನ್ಮೂಲಗಳನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ಪರಿಣಾಮಕಾರಿ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ಸಂಗ್ರಹಿಸಿದ ಈ ದತ್ತಾಂಶ ಸಹಕಾರಿಯಾಗುತ್ತದೆ" ಎಂದು ತಿಳಿಸಿದರು. (ಐಎಎನ್ಎಸ್)
ಇದನ್ನೂ ಓದಿ: ಸಮುದ್ರ ಮೀನಿನ ಕೃಷಿಯಲ್ಲಿ ಹೊಸ ಸಾಧನೆ ಮಾಡಿದ ಸಿಎಂಎಫ್ಆರ್ಐ