ಫಿರೋಜಾಬಾದ್(ಉತ್ತರ ಪ್ರದೇಶ): ಕಳೆದ 500 ವರ್ಷಗಳಿಂದ ಅತ್ಯಂತ ಕಾತುರದಿಂದ ಕಾಯುತ್ತಿದ್ದ ಐತಿಹಾಸಿಕ ಕ್ಷಣಕ್ಕೆ ಇಡೀ ದೇಶ ನಿನ್ನೆ (ಜನವರಿ 22) ಸಾಕ್ಷಿಯಾಯಿತು. ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಅತ್ಯಂತ ವೈಭವದಿಂದ ಸಂಪನ್ನವಾಗಿದೆ. ಈ ಶುಭದಿನದಂದು ಜನಿಸಿದ ಗಂಡು ಮಗುವಿಗೆ ಫಿರೋಜಾಬಾದ್‌ದ ಮುಸ್ಲಿಂ ಕುಟುಂಬವೊಂದು 'ರಾಮ್ ರಹೀಮ್' ಎಂದು ಹೆಸರಿಡುವ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದೆ.
ಫಿರೋಜಾಬಾದ್‌ನ ಜಿಲ್ಲಾಸ್ಪತ್ರೆಯಲ್ಲಿ ಫರ್ಜಾನ್ ಎಂಬ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದರು. ಇದೀಗ ಮಗು ಮತ್ತು ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ. ನಿನ್ನೆ ಇದೇ ಆಸ್ಪತ್ರೆಯಲ್ಲಿ 12 ಮಕ್ಕಳು ಜನಿಸಿದ್ದಾರೆ. ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯಂದು ಮಕ್ಕಳು ಹುಟ್ಟಿರುವುದರಿಂದ ಎಲ್ಲ ಕುಟುಂಬಸ್ಥರು ಸಂತಸಗೊಂಡಿದ್ದಾರೆ ಎಂದು ಡಾ.ನವೀನ್ ಜೈನ್ ಮಾಹಿತಿ ನೀಡಿದರು.
ಮಗುವಿನ ಅಜ್ಜಿ ಹುಸ್ನಾ ಬಾನೊ ಎಂಬವರು ಮಾತನಾಡಿ, "ರಾಮ ಮಂದಿರ ಉದ್ಘಾಟನೆಯಾಗುತ್ತಿರುವ ಪವಿತ್ರ ದಿನ ನಮ್ಮ ಮನೆಗೆ ಪುಟ್ಟ ಅತಿಥಿ ಬಂದಿದ್ದಾನೆ. ಈ ದಿನವನ್ನು ಸ್ಮರಣೀಯವಾಗಿಸಲು ನಾವು ಮಗುವಿಗೆ ರಾಮ್ ರಹೀಮ್ ಎಂದು ಹೆಸರಿಸಲು ನಿರ್ಧರಿಸಿದ್ದೇವೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೋಟ್ಯಂತರ ರಾಮಭಕ್ತರ ಆಸೆ ಇಂದು ಈಡೇರಿದೆ, ಕನ್ನಡಿಗರೂ ಹೆಮ್ಮೆ ಪಡುವ ದಿನ ಇದಾಗಿದೆ: ಬಿ ವೈ ವಿಜಯೇಂದ್ರ