ಚೆನ್ನೈ: ವಾಂಟೆಡ್ ಕ್ರಿಮಿನಲ್ 'ಬಾಂಬ್' ಸರವಣನ್ನನ್ನು ಗುರುವಾರ ಚೆನ್ನೈನಲ್ಲಿ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಹಲವಾರು ಪ್ರಕರಣಗಳಲ್ಲಿ ಬೇಕಾಗಿದ್ದ ಸರವಣನ್ನನ್ನು ಬಂಧಿಸಲು ಮುಂದಾದಾಗ ಆತ ಸಬ್ ಇನ್ ಸ್ಪೆಕ್ಟರ್ ಮೇಲೆ ಹಲ್ಲೆ ನಡೆಸಿದ್ದ. ತದನಂತರ ಪೊಲೀಸರು ಗುಂಡು ಹಾರಿಸಿ ಆತನನ್ನು ಬಂಧಿಸಿದ್ದಾರೆ. ಸದ್ಯ ಗುಂಡೇಟಿನಿಂದ ಗಾಯಗೊಂಡ ಸರವಣನ್ನ್ನು ಬಂಧಿಸಿ ಚಿಕಿತ್ಸೆಗಾಗಿ ಸರ್ಕಾರಿ ಸ್ಟಾನ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
33 ಪ್ರಕರಣಗಳು ದಾಖಲು: ಎ-ಕೆಟಗರಿ ರೌಡಿ ಎಂದು ವರ್ಗೀಕರಿಸಲ್ಪಟ್ಟ ಸರವಣನ್ ವಿರುದ್ಧ ಆರು ಕೊಲೆ ಪ್ರಕರಣ ಸೇರಿದಂತೆ 33 ಪ್ರಕರಣಗಳು ದಾಖಲಾಗಿವೆ. ಆದರೆ ಸರವಣನ್ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಲಾಗಿದೆ ಎಂದು ಹಲ್ಲೆಕೋರನ ಪತ್ನಿ, ವಕೀಲೆಯೂ ಆಗಿರುವ ಮಹಾಲಕ್ಷ್ಮಿ ಆರೋಪಿಸಿದ್ದಾರೆ. ಕಳೆದ 15 ವರ್ಷಗಳಲ್ಲಿ ಆತನ ವಿರುದ್ಧ ಯಾವುದೇ ನೈಜ ಪ್ರಕರಣ ದಾಖಲಾಗಿಲ್ಲ ಮತ್ತು ಸುಳ್ಳು ಆರೋಪಗಳ ಮೇಲೆ ಬಂಧನ ವಾರಂಟ್ಗಳನ್ನು ಮಾತ್ರ ಹೊರಡಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ಸರವಣನ್ನನ್ನು ಬಂಧಿಸಲಾಗಿದ್ದು, ಬಂಧಿಸಿ ಒಂದು ದಿನ ಮುಗಿದು ಹೋದರೂ 24 ಗಂಟೆಗಳ ಒಳಗೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸದೇ ಪೊಲೀಸರು ಅವರನ್ನು ಅಕ್ರಮ ಬಂಧನದಲ್ಲಿರಿಸಿದ್ದಾರೆ ಎಂದು ಮಹಾಲಕ್ಷ್ಮಿ ಆರೋಪಿಸಿದ್ದಾರೆ. ಗ್ರೇಟರ್ ಚೆನ್ನೈ ಪೊಲೀಸ್ ಕಮಿಷನರೇಟ್ ಮತ್ತು ಪೊಲೀಸ್ ಪ್ರಧಾನ ಕಚೇರಿಯಲ್ಲಿ ತನ್ನ ಪತಿಯ ಬಗ್ಗೆ ತನಗೆ ಯಾವುದೇ ಮಾಹಿತಿ ನೀಡಲಿಲ್ಲ ಎಂದು ಅವರು ದೂರಿದ್ದಾರೆ.
ಹಿಸ್ಟರಿ ಶೀಟರ್ ಅರಿವಝಗನ್ ಅಲಿಯಾಸ್ ಹರಿ ಬಂಧನ: ಇದಕ್ಕೂ ಮುನ್ನ ಡಿಸೆಂಬರ್ 8, 2024 ರಂದು ತಿರುಮುಲ್ಲೈವೊಯಲ್ ನಗರದ ಹಿಸ್ಟರಿ ಶೀಟರ್ ಅರಿವಝಗನ್ ಅಲಿಯಾಸ್ ಹರಿ (24) ಎಂಬಾತನನ್ನು ಎನ್ಕೌಂಟರ್ ನಡೆಸಿ ಪೊಲೀಸರು ಬಂಧಿಸಿದ್ದರು. ಇತನ ವಿರುದ್ಧ ಕೊಲೆ ಸೇರಿದಂತೆ ಹಲವಾರು ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ. ಸಬ್ಇನ್ಸ್ಪೆಕ್ಟರ್ ಪ್ರೇಮ್ ಕುಮಾರ್ ನೇತೃತ್ವದ ತಂಡವು ಆತನನ್ನು ಅಯನಾವರಂನ ಅಡಗುತಾಣದಲ್ಲಿ ಪತ್ತೆ ಹಚ್ಚಿತ್ತು.
ಪೊಲೀಸರು ಆತನನ್ನು ಬಂಧಿಸಲು ಪ್ರಯತ್ನಿಸಿದಾಗ, ಅರಿವಝಗನ್ ದೇಶೀಯ ನಿರ್ಮಿತ ಪಿಸ್ತೂಲ್ನಿಂದ ಅಧಿಕಾರಿಗಳ ಮೇಲೆ ಗುಂಡು ಹಾರಿಸಲು ಪ್ರಯತ್ನಿಸಿದ್ದ ಎಂದು ಆರೋಪಿಸಲಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಸಬ್ಇನ್ಸ್ಪೆಕ್ಟರ್ ಪ್ರೇಮಕುಮಾರ್ ಆತನ ಕಾಲಿಗೆ ಗುಂಡು ಹಾರಿಸಿದ್ದರು. ಅರಿವಝಗನ್ ಚೆನ್ನೈ ಮತ್ತು ತಿರುವಳ್ಳೂರು ಜಿಲ್ಲೆಗಳಲ್ಲಿ ನಡೆದ ಕೊಲೆ ಮತ್ತು ಕೊಲೆ ಯತ್ನ ಸೇರಿದಂತೆ ಕನಿಷ್ಠ ಆರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಮಾದಕವಸ್ತು ಮಾರಾಟಕ್ಕೆ ಸಂಬಂಧಿಸಿದ ಹಲವಾರು ಪ್ರಕರಣಗಳು ಸಹ ಈತನ ಮೇಲಿವೆ.