ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ನಡೆಸುವ ನೀಟ್, ನೆಟ್ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಇದರ ವಿರುದ್ಧ ದೇಶದ ಹಲವೆಡೆ ಪ್ರತಿಭಟನೆಗಳೂ ನಡೆಯುತ್ತಿವೆ. ಇದರಿಂದ ನ್ಯಾಯಯುತ, ಪಾರದರ್ಶಕ ಮತ್ತು ಸುಗಮ ಪರೀಕ್ಷೆಗಳಿಗೆ ಏನೆಲ್ಲಾ ಸುಧಾರಣೆ ತರಬೇಕು ಎಂಬ ಕುರಿತು ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ಶನಿವಾರ ತಜ್ಞರ ಸಮಿತಿಯನ್ನು ರಚಿಸಿದೆ.
ರಾಷ್ಟ್ರ ಮಟ್ಟದ ಪರೀಕ್ಷೆಗಳನ್ನು ನಡೆಸುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯಲ್ಲಿ (ಎನ್‌ಟಿಎ) ಬದಲಾವಣೆ, ಪರೀಕ್ಷೆಗಳಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಇಸ್ರೋ ಮಾಜಿ ಮುಖ್ಯಸ್ಥ ಡಾ.ಕೆ. ರಾಧಾಕೃಷ್ಣನ್ ಅವರ ನೇತೃತ್ವದಲ್ಲಿ ಏಲು ಸದಸ್ಯರ ಸಮಿತಿ ರೂಪಿಸಿ ಕೇಂದ್ರ ಶಿಕ್ಷಣ ಸಚಿವಾಲಯ ಆದೇಶ ಹೊರಡಿಸಿದೆ.
ಈ ಉನ್ನತ ಮಟ್ಟದ ಸಮಿತಿಯು ಪರೀಕ್ಷಾ ಪ್ರಕ್ರಿಯೆಯಲ್ಲಿನ ಸುಧಾರಣೆಗಳು, ದಾಖಲೆಗಳ ಭದ್ರತಾ ಪ್ರೋಟೋಕಾಲ್ ಸುಧಾರಣೆ ಮತ್ತು ಎನ್‌ಟಿಎ ರಚನೆ ಅದರ ಕಾರ್ಯನಿರ್ವಹಣೆಯನ್ನು ಹೆಚ್ಚಿಸುವ ಕುರಿತು ಶಿಫಾರಸುಗಳನ್ನು ಮಾಡುವ ಟಾಸ್ಕ್ ನೀಡಲಾಗಿದೆ. ಎರಡು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ.
ಸಮಿತಿಯಲ್ಲಿರುವ ಸದಸ್ಯರು ಯಾರು?: ಇಸ್ರೋ ಮಾಜಿ ಅಧ್ಯಕ್ಷ ಹಾಗೂ ಐಐಟಿ ಕಾನ್ಪುರದ ಆಡಳಿತ ಮಂಡಳಿ ಅಧ್ಯಕ್ಷರಾಗಿರುವ ಡಾ.ಕೆ.ರಾಧಾಕೃಷ್ಣನ್ ಅವರು ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಉಳಿದಂತೆ ದೆಹಲಿಯ ಏಮ್ಸ್‌ನ ಮಾಜಿ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ, ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಬಿ.ಜೆ. ರಾವ್, ಐಐಟಿ ಮದ್ರಾಸ್‌ನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಕೆ.ರಾಮಮೂರ್ತಿ, ಪೀಪಲ್ ಸ್ಟ್ರಾಂಗ್‌ನ ಸಹ-ಸಂಸ್ಥಾಪಕ ಮತ್ತು ಕರ್ಮಯೋಗಿ ಭಾರತ್ ಮಂಡಳಿಯ ಸದಸ್ಯರಾದ ಪಂಕಜ್ ಬನ್ಸಾಲ್, ದೆಹಲಿ ಐಐಟಿ ವಿದ್ಯಾರ್ಥಿ ವ್ಯವಹಾರಗಳ ಡೀನ್ ಪ್ರೊ.ಆದಿತ್ಯ ಮಿತ್ತಲ್ ಮತ್ತು ಕೇಂದ್ರ ಶಿಕ್ಷಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಗೋವಿಂದ್ ಜೈಸ್ವಾಲ್ ಅವರು ಸಮಿತಿಯ ಸದಸ್ಯರಾಗಿದ್ದಾರೆ.
ಸಮಿತಿಯು ರಾಷ್ಟ್ರೀಯ ಪರೀಕ್ಷಾ ಪ್ರಕ್ರಿಯೆಯನ್ನು ಸುಧಾರಿಸುವುದು, ಈಗಿರುವ ವ್ಯವಸ್ಥೆಯಲ್ಲಿ ಇನ್ನಷ್ಟು ದಕ್ಷತೆಯನ್ನು ತರುವುದು, ಸಂಭವನೀಯ ಸೋರಿಕೆಗಳನ್ನು ತಡೆಗಟ್ಟುವ ವಿಧಾನಗಳು ಮತ್ತು ಸಂಪೂರ್ಣ ಪರೀಕ್ಷಾ ಪ್ರಕ್ರಿಯೆಯನ್ನು ವಿಶ್ಲೇಷಿಸಿ ವರದಿ ನೀಡಬೇಕಿದೆ.