ನವದೆಹಲಿ: ಕೇಂದ್ರ ಸಚಿವರ ಜೊತೆಗಿನ 6 ಗಂಟೆಗಳ ಮಾತುಕತೆ ವಿಫಲವಾಗಿದ್ದು, ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ 'ದೆಹಲಿ ಚಲೋ' ಹೋರಾಟ ಮುಂದುವರಿಯಲಿದೆ. ಇಂದು ರೈತ ಹೋರಾಟಗಾರರು ದೆಹಲಿಗೆ ಪ್ರವೇಶ ಮಾಡಲಿದ್ದಾರೆ ಎಂದು ರೈತಸಂಘಗಳು ತಿಳಿಸಿದ್ದರೆ, ಇದನ್ನು ಎದುರಿಸಲು ಪೊಲೀಸ್ ಪಡೆಗಳು ಸರ್ವಸನ್ನದ್ಧವಾಗಿವೆ.
ಚಂಡೀಗಢದಲ್ಲಿ ಸೋಮವಾರ ರಾತ್ರಿಯಿಂದ ಕೇಂದ್ರ ಸಚಿವರಾದ ಅರ್ಜುನ್ ಮುಂಡಾ, ಪಿಯೂಷ್ ಗೋಯಲ್ ಮತ್ತು ನಿತ್ಯಾನಂದ ರಾಯ್ ಅವರೊಂದಿಗೆ ರೈತ ಮುಖಂಡರು, 6 ಗಂಟೆಗಳ ಕಾಲ ಮಾತುಕತೆ ನಡೆಸಿದರು. ಪ್ರಮುಖ ಬೇಡಿಕೆಗಳಾದ ಎಂಎಸ್‌ಪಿಗೆ ಕಾನೂನು ಖಾತರಿ, ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ, ರೈತರು ಮತ್ತು ರೈತ ಕಾರ್ಮಿಕರಿಗೆ ಪಿಂಚಣಿ, ಕೃಷಿ ಸಾಲ ಮನ್ನಾ, ಈ ಹಿಂದಿನ ಹೋರಾಟದ ವೇಳೆ ರೈತರ ಮೇಲೆ ಹಾಕಲಾದ ಪ್ರಕರಣಗಳನ್ನು ಹಿಂಪಡೆಯುವುದು, ಲಖಿಂಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯ ಕುರಿತು ಯಾವುದೇ ಅಂತಿಮ ನಿರ್ಧಾರಗಳು ಹೊರಬೀಳದ ಹಿನ್ನೆಲೆಯಲ್ಲಿ ಮಾತುಕತೆ ವಿಫಲವಾಗಿದೆ.
ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ ರೈತ ಮುಖಂಡರೊಬ್ಬರು, ಕೇಂದ್ರ ಸರ್ಕಾರದ ಜೊತೆಗಿನ ಮಾತುಕತೆ ಫಲಪ್ರದವಾಗಿಲ್ಲ. ಹೀಗಾಗಿ ದೆಹಲಿ ಚಲೋ ಹೋರಾಟ ಮುಂದುವರಿಯಲಿದೆ. ಮಂಗಳವಾರ ರೈತ ಹೋರಾಟಗಾರರು ದೆಹಲಿ ಪ್ರವೇಶ ಮಾಡಲಿದ್ದಾರೆ. ಹೋರಾಟದ ಮೂಲಕವೇ ನಮ್ಮ ಬೇಡಿಕೆಗಳನ್ನು ಪರಿಹರಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.
ಸಭೆಯಲ್ಲಿ ಏನಾಯ್ತು?: ಕೇಂದ್ರ ಸಚಿವರು ಮತ್ತು ರೈತರ ಹೋರಾಟಗಾರರ ಮಧ್ಯೆ ನಡೆದ ಸಭೆಯಲ್ಲಿ ವಿದ್ಯುತ್ ಕಾಯಿದೆ 2020 ರದ್ದು, ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ಸಾವನ್ನಪ್ಪಿದ ರೈತರಿಗೆ ಪರಿಹಾರ, ರದ್ದಾದ ಕೃಷಿ ಕಾನೂನುಗಳ ವಿರುದ್ಧ ಈ ಹಿಂದೆ ನಡೆದ ಪ್ರತಿಭಟನೆಯಲ್ಲಿ ರೈತರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರ ಮತ್ತು ರೈತರ ನಡುವೆ ಒಪ್ಪಂದಕ್ಕೆ ಬರಲಾಯಿತು.
ಆದರೆ, ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿ ಕಾನೂನು, ಕೃಷಿ ಸಾಲ ಮನ್ನಾ ಮತ್ತು ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನದ ಕುರಿತು ಎರಡೂ ಕಡೆಯಿಂದ ಯಾವುದೇ ಪರಿಹಾರ ಕಂಡುಕೊಳ್ಳಲಾಗಲಿಲ್ಲ. ಇದರಿಂದ ಸಭೆ ಮೊಟಕುಗೊಂಡಿತು. ಸಭೆ ಬಳಿಕ ಮಾತನಾಡಿದ ಕೇಂದ್ರ ಸಚಿವ ಅರ್ಜುನ್ ಮುಂಡಾ, ಮಾತುಕತೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ನಾವು ಇನ್ನೂ ಅದೇ ಭರವಸೆಯಲ್ಲಿದ್ದೇವೆ. ಮಾತುಕತೆಗಳನ್ನು ಸ್ವಾಗತಿಸುತ್ತೇವೆ ಎಂದು ಹೇಳಿದರು.
ಗಡಿಗಳಲ್ಲಿ ಪೊಲೀಸ್ ಬಂದೋಬಸ್ತ್: ಹರಿಯಾಣ, ಪಂಜಾಬ್, ದೆಹಲಿಯ ಸಿಂಘು, ಘಾಜಿಪುರ್ ಮತ್ತು ಟಿಕ್ರಿ ಗಡಿಗಳಲ್ಲಿ ಸಂಚಾರ ನಿರ್ಬಂಧ ಹೇರಲಾಗಿದೆ. ಸಾವಿರಾರು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಹೋರಾಟಗಾರರ ಮೇಲೆ ಕಣ್ಣಿಡಲು ಡ್ರೋನ್‌ಗಳನ್ನು ಬಳಸಲಾಗುತ್ತಿದೆ. ಹರಿಯಾಣದ 15 ಜಿಲ್ಲೆಗಳಲ್ಲಿ ಜನರು ಗುಂಪು ಸೇರುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ದೆಹಲಿಯಲ್ಲಿ ಒಂದು ತಿಂಗಳು ನಿಷೇಧಾಜ್ಞೆ ವಿಧಿಸಲಾಗಿದೆ.
ಪಂಜಾಬ್‌ನ ಗಡಿಯಲ್ಲಿರುವ ಅಂಬಾಲಾ, ಜಿಂದ್, ಫತೇಹಾಬಾದ್, ಕುರುಕ್ಷೇತ್ರ ಮತ್ತು ಸಿರ್ಸಾದಲ್ಲಿ ಬ್ಯಾರಿಕೇಡ್ಗಳನ್ನು ಹಾಕಿದ್ದರೆ, ರಸ್ತೆಗಳ ಮೇಲೆ ಕಬ್ಬಿಣದ ಮೊಳೆಗಳು ಮತ್ತು ಮುಳ್ಳುತಂತಿಗಳನ್ನು ಅಳವಡಿಸಲಾಗಿದೆ. ಇದರಿಂದ ರೈತರ ಟ್ರ್ಯಾಕ್ಟರ್ಗಳು ದೆಹಲಿಗೆ ಪ್ರವೇಶಿಸದಂತೆ ತಡೆ ಒಡ್ಡಲಾಗುತ್ತಿದೆ. ಈ ಮಧ್ಯೆ ದೆಹಲಿ ಚಲೋ ಬೆಂಬಲಿಸಿ ಕರ್ನಾಟಕ, ಮಧ್ಯಪ್ರದೇಶ ಸೇರಿದಂತೆ ಇತರ ರಾಜ್ಯಗಳಿಂದ ಬರುತ್ತಿರುವ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಬೆಳ್ಳುಳ್ಳಿಗೆ ಬಂಗಾರದ ಬೆಲೆ: ಸಾಲ ಮಾಡಿ ಬೆಳೆ ಬೆಳೆದ ರೈತ ಮೂರೇ ತಿಂಗಳಲ್ಲಿ ಕೋಟ್ಯಧಿಪತಿ