ಕೋಲ್ಕತ್ತಾ (ಪಶ್ಚಿಮಬಂಗಾಳ): ಬಂಗಾಳ ವೈದ್ಯೆ ವಿದ್ಯಾರ್ಥಿನಿ ಅತ್ಯಾಚಾರ, ಹತ್ಯೆ ಪ್ರಕರಣದಲ್ಲಿ ಸಾಕ್ಷ್ಯ ನಾಶ ಆರೋಪ ಹೊತ್ತಿರುವ ಆರ್ಜಿ ಕರ್ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಭ್ರಷ್ಟಾಚಾರ ನಡೆಸಿದ ಪ್ರಕರಣದಲ್ಲಿ ಸೋಮವಾರ ರಾತ್ರಿ ಬಂಧಿಸಿದೆ.
ಸಂದೀಪ್ ಘೋಷ್ ಅವರು ಕಾಲೇಜಿನ ಪ್ರಾಂಶುಪಾಲರಾಗಿದ್ದ ವೇಳೆ ವೈದ್ಯ ವಿದ್ಯಾರ್ಥಿನಿಯ ಹತ್ಯೆ ನಡೆದಿತ್ತು. ಬಳಿಕ ಅವರ ವಿರುದ್ಧವೇ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರಾಂಶುಪಾಲ ಹುದ್ದೆಗೆ ರಾಜೀನಾಮೆ ನೀಡಿ, ವಿಚಾರಣೆಗೆ ಒಳಗಾಗಿದ್ದರು. ಬಳಿಕ ಅವರ ಆಸ್ತಿಪಾಸ್ತಿಗಳ ಮೇಲೂ ಸಿಬಿಐ ದಾಳಿ ನಡೆಸಿತ್ತು. ಕಾಲೇಜಿನ ಆಡಳಿತವನ್ನು ದುರ್ಬಳಕೆ ಮಾಡಿಕೊಂಡು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಂದೀಪ್ರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂದೀಪ್ ಘೋಷ್ ಅವರು ಕಳೆದ ಎರಡು ವಾರಗಳಿಂದ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗದೇ ಗೈರಾಗಿದ್ದರು. ಇಂದು ಸಂಜೆ ಅಥವಾ ರಾತ್ರಿ ಮನೆಗೆ ಮರಳುತ್ತಿದ್ದಾಗ, ಸಿಬಿಐ ಅಧಿಕಾರಿಗಳು ಸಿಜಿಒ ಕಾಂಪ್ಲೆಕ್ಸ್‌ನಿಂದ ಅವರನ್ನು ಬಂಧಿಸಿ ಕರೆದೊಯ್ದಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾಗಿದ್ದಾಗ ವಹಿವಾಟಿನಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪದ ಮೇಲೆ ಸಂದೀಪ್ ಘೋಷ್ ಅವರನ್ನು ಬಂಧಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಸಂದೀಪ್ ಮೇಲಿವೆ ಗಂಭೀರ ಆರೋಪಗಳು: ಆರ್ಜಿ ಕರ್ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ವಿರುದ್ಧ ಗಂಭೀರ ಸ್ವರೂಪದ ಆರೋಪಗಳು ಕೇಳಿ ಬಂದಿವೆ. ಘೋಷ್ ಹಣದಾಸೆಗೆ ಅನಾಥ ಶವಗಳನ್ನು ಮಾರಾಟ ಮಾಡುತ್ತಿದ್ದರು. ಬಳಸಿ ಬಿಸಾಡಿದ ಸಿರೆಂಜ್, ಇತರ ವಸ್ತುಗಳನ್ನು ಮರುಬಳಕೆ ಮಾಡುತ್ತಿದ್ದರು ಎಂದು ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ಆರೋಪಿಸಿದ್ದರು.
ಇದೇ ಕಾಲೇಜಿನಲ್ಲಿ ಮೊದಲು ಬೋಧಕರಾಗಿದ್ದ, ಈಗ ಮುರ್ಷಿದಾಬಾದ್ ಕಾಲೇಜಿನ ಉಪ ಅಧೀಕ್ಷರಾಗಿರುವ ಅಖ್ತರ್ ಅಲಿ ಅವರ ಹೇಳಿಕೆಗಳನ್ನು ತನಿಖಾಧಿಕಾರಿಗಳು ದಾಖಲಿಸಿದ್ದರು. ಕಾಲೇಜಿನ ಆಸ್ತಿಗಳನ್ನು ಮಂಡಳಿಗೆ ತಿಳಿಸದೇ ಗುತ್ತಿಗೆಗೆ ನೀಡುತ್ತಿದ್ದರು. ಆಸ್ಪತ್ರೆಗೆ ಅಗತ್ಯವಾದ ಉಪಕರಣಗಳು ಮತ್ತು ಔಷಧಗಳ ಪೂರೈಕೆದಾರರ ಆಯ್ಕೆಯಲ್ಲಿ ಸ್ವಜನಪಕ್ಷಪಾತ ಮಾಡುತ್ತಿದ್ದರು. ಕೋಟ್ಯಂತರ ರೂಪಾಯಿ ಮೌಲ್ಯದ ಟೆಂಡರ್ಗಳನ್ನು ಅನರ್ಹರಿಗೆ ನೀಡುತ್ತಿದ್ದರು. ಪೂರೈಕೆದಾರರಿಂದ ಶೇಕಡಾ 20 ರಷ್ಟು ಕಮಿಷನ್ ಪಡೆಯುತ್ತಿದ್ದರು. ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾಲೇಜಿನ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಿ ಪಾಸ್ ಮಾಡಿಸಿಕೊಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಆಸ್ಪತ್ರೆಗೆ ಬರುವ ಅನಾಥ ಶವಗಳ ದೇಹದ ಭಾಗಗಳನ್ನು ಮಾರಾಟ ಮಾಡುತ್ತಿದ್ದರು. ಬಳಸಿದ ಸಿರಿಂಜ್, ಗ್ಲುಕೋಸ್ ಬಾಟಲಿಗಳು, ರಬ್ಬರ್ ಗ್ಲೌಸ್ಗಳನ್ನು ಮರುಬಳಕೆಗೆ ಬಾಂಗ್ಲಾದೇಶಕ್ಕೆ ರವಾನಿಸುತ್ತಿದ್ದರು ಎಂದು ದೂರಲಾಗಿದೆ. ಈ ಎಲ್ಲಾ ಆರೋಪಗಳ ಮೇಲೆ ಸಂದೀಪ್ ಘೋಷ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.