ಪಾಟ್ನಾ( ಬಿಹಾರ): ರಾಜ್ಯದಲ್ಲಿ ಜಾತಿ ಸಮೀಕ್ಷೆಯನ್ನು ಕಾಂಗ್ರೆಸ್ ಒತ್ತಡದಿಂದ ನಡೆಸಲಾಗಿದೆ ಎಂಬ ರಾಹುಲ್ ಗಾಂಧಿ ಅವರ ಹೇಳಿಕೆ ಅಸಂಬದ್ಧ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. 'ಮಹಾಘಟಬಂಧನ್' ತ್ಯಜಿಸಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಮರಳಿದ ಮೂರು ದಿನಗಳ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಇಂಡಿಯಾ ಎಂದು ನಾಮಕರಣ ಮಾಡಿರುವುದು ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.
ಮಹಾಘಟಬಂಧನ್ ಪಾಲುದಾರರ ಒತ್ತಡದ ಮೇರೆಗೆ ಜಾತಿ ಸಮೀಕ್ಷೆ ನಡೆಸಿದ ಬಳಿಕ ನಿತೀಶ್ ಕುಮಾರ್ ಸಿಕ್ಕಿ ಬಿದ್ದಿದ್ದಾರೆ ಎಂದು ಮಂಗಳವಾರ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದರು. ಇದೇ ವೇಳೆ, ಬಿಜೆಪಿ ವಿರುದ್ಧವೂ ರಾಹುಲ್ ವಾಗ್ದಾಳಿ ನಡೆಸಿದ್ದರು. ಕಾಂಗ್ರೆಸ್ ನಾಯಕರ ಆರೋಪಗಳನ್ನು ತಳ್ಳಿಹಾಕಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಎನ್ಡಿಎದಲ್ಲಿ ಶಾಶ್ವತವಾಗಿ ಉಳಿಯುತ್ತೇವೆ ಹಾಗೂ ರಾಜ್ಯದ ಜನರಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.
ಒಂಬತ್ತು ಬಾರಿ ಮಿತ್ರ ಪಕ್ಷಗಳನ್ನು ಬದಲಿಸಿರುವ ಸಿಎಂ ನಿತೀಶ್ ಕುಮಾರ್, ಇತ್ತೀಚೆಗಷ್ಟೇ ಆರ್ಜೆಡಿ ಮೈತ್ರಿಯನ್ನು ತೊರೆದು ಮತ್ತೆ ಎನ್ಡಿಎ ಜತೆಗೂಡಿ ಸರ್ಕಾರ ರಚನೆ ಮಾಡಿದ್ದಾರೆ. ಹೊಸ ಸರ್ಕಾರ ರಚನೆ ಆದ ಬಳಿಕ ಮಾತನಾಡಿದ ಅವರು ತಮ್ಮ ನಿಲುವು ಹಾಗೂ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ನಾನು ಬೇರೊಂದು ಹೆಸರು ಸೂಚಿಸಿದ್ದೆ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿಯನ್ನು ಎದುರಿಸಲು ಪ್ರತಿಜ್ಞೆ ಮಾಡಿರುವ ವಿಪಕ್ಷಗಳ ಮೈತ್ರಿಕೂಟ ಇಂಡಿಯಾ ಎಂಬ ಹೆಸರು ಬಿಟ್ಟು ಬೇರೆ ನಾಮಕರಣ ಮಾಡುವಂತೆ ತಾವು ಮಾಡಿದ ಮನವಿಯನ್ನು ತಿರಸ್ಕರಿಸಲಾಯಿತು ಎಂದು ಇದೇ ವೇಳೆ ಅವರು ಆರೋಪಿಸಿದರು. ವಿರೋಧ ಪಕ್ಷಗಳು ಒಟ್ಟಾಗಿ ಹೋರಾಟ ನಡೆಸಲು ಯಾವುದೇ ಸ್ಟಾಟರ್ಜಿ ನಡೆಸಲಿಲ್ಲ, ಅಷ್ಟೇ ಅಲ್ಲ ಯಾವ ಪಕ್ಷ ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಬೇಕು ಎಂಬುದನ್ನು ಇದುವರೆಗೂ ಸರಿಯಾಗಿ ನಿರ್ಧರಿಸಲು ಆಗಲಿಲ್ಲ. ಹೀಗಾಗಿ ತಾವು ಮೈತ್ರಿಯನ್ನು ತೊರೆಯಬೇಕಾಯಿತು ಎಂದು ನಿತೀಶ್ ಕುಮಾರ್ ಸಮಜಾಯಿಷಿ ನೀಡಿದ್ದಾರೆ.
ಶಾಶ್ವತವಾಗಿ ಅಲ್ಲೇ ಇರುತ್ತೇನೆ: ಹೀಗೆ ನಾನಾ ಕಾರಣಗಳಿಂದ ನಾನು ಆರಂಭದಲ್ಲಿ ಯಾರೊಂದಿಗೆ ಇದ್ದೆನೋ ಅಲ್ಲಿಗೆ ಹಿಂತಿರುಗಿದ್ದೇನೆ. ಈಗ ನಾನು ಶಾಶ್ವತವಾಗಿ ಇಲ್ಲೇ ಇರುತ್ತೇನೆ. ನಾನು ಬಿಹಾರದ ಜನರಿಗಾಗಿ ಕೆಲಸ ಮಾಡುತ್ತೇನೆ" ಎಂದು ಅವರು ಹೇಳಿದರು.
ಇದನ್ನು ಓದಿ: ಅಬಕಾರಿ ಹಗರಣ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ 5ನೇ ಸಮನ್ಸ್ ನೀಡಿದ ಇಡಿ
ಪಶ್ಚಿಮಬಂಗಾಳದಲ್ಲಿ ರಾಹುಲ್ ಗಾಂಧಿ ಕಾರಿನ ಮೇಲೆ ಕಲ್ಲು ತೂರಾಟ: ಟಿಎಂಸಿ ವಿರುದ್ಧ ಆರೋಪ