ನವದೆಹಲಿ: ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣಗಳ ಪಟ್ಟಿ ಬಿಡುಗಡೆಯಾಗಿದೆ. ಅಗ್ರ 20 ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಭಾರತದ ಯಾವುದೇ ವಿಮಾನ ನಿಲ್ದಾಣಗಳು ಕಾಣಿಸಿಕೊಳ್ಳದೇ ಇದ್ದರೂ ಟಾಪ್ 100 ರ ಪಟ್ಟಿಯಲ್ಲಿ ಬೆಂಗಳೂರು ಕಳೆದ ಬಾರಿಗಿಂತ 10 ಸ್ಥಾನಗಳಷ್ಟು ಜಿಗಿತ ಕಾಣುವ ಮೂಲಕ 59ನೇ ಸ್ಥಾನ ಪಡೆದುಕೊಂಡಿದೆ.
ದೋಹಾದ ಹಮದ್ ವಿಶ್ವದ ನಂಬರ್ ಒನ್ ವಿಮಾನ ನಿಲ್ದಾಣ: ಇನ್ನು ಇತ್ತೀಚಿನ ವರ್ಷಗಳಲ್ಲಿ ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ ಎಂಬ ಕಿರೀಟವನ್ನು ದೋಹಾದ ಹಮದ್ ಇಂಟರ್ ನ್ಯಾಷನಲ್ ಪಡೆದುಕೊಂಡಿದ್ದರೆ, ಸಿಂಗಾಪುರದ ಚಾಂಗಿ 2ನೇ ಸ್ಥಾನ ಅಲಂಕರಿಸಿದೆ. ಈ ಬಾರಿ ಸತತ 12 ವರ್ಷಗಳಿಂದ ಅಗ್ರಸ್ಥಾನದಲ್ಲಿದ್ದ ಸಿಂಗಾಪುರ ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಪೋರ್ಟ್ ಅವಾರ್ಡ್ಸ್ 2024 ರಲ್ಲಿ ದೋಹಾಗೆ ಸ್ಥಾನ ಬಿಟ್ಟುಕೊಟ್ಟಿದೆ.
ಇನ್ನು ಸಿಯೋಲ್ ಇಂಚಿಯಾನ್ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಸಿಯೋಲ್‌ನ ಇಂಚಿಯಾನ್ 2024 ರ ಅತ್ಯಂತ ಕುಟುಂಬ ಸ್ನೇಹಿ ವಿಮಾನ ನಿಲ್ದಾಣ ಎಂಬ ಹಿರಿಮೆಗೂ ಪಾತ್ರವಾಗಿದೆ. ಟೋಕಿಯೊದ ಹನೆಡಾ ಮತ್ತು ನರಿತಾ ಪಟ್ಟಿಯಲ್ಲಿ ನಾಲ್ಕು ಮತ್ತು ಐದನೇ ಸ್ಥಾನವನ್ನು ಗಳಿಸಿದೆ. ಹಾಂಕಾಂಗ್ ವಿಮಾನ ನಿಲ್ದಾಣವು ಈ ಪಟ್ಟಿಯಲ್ಲಿ ಎದ್ದು ಕಾಣುವ ಸಾಧನೆ ಮಾಡಿದೆ. ಕಾರಣ 22 ಸ್ಥಾನಗಳ ಜಿಗಿತ ಕಾಣುವ ಮೂಲಕ 11 ನೇ ಸ್ಥಾನಕ್ಕೆ ತಲುಪಿದೆ. ವಿಶೇಷ ಹಾಗೂ ಅಚ್ಚರಿ ಎಂದರೆ ಅಮೆರಿಕದ ವಿಮಾನ ನಿಲ್ದಾಣಗಳು ಎಲ್ಲಿಯೂ ಅಗ್ರ ಕ್ರಮಾಂಕದಲ್ಲಿ ಕಾಣಿಸಿಕೊಂಡಿಲ್ಲ. ಅಮೆರಿಕದ ಅತ್ಯುನ್ನತ ಶ್ರೇಣಿಯ ನಗರವಾದ ಸಿಯಾಟಲ್-ಟಕೋಮಾ ಕೂಡ ಆರು ಸ್ಥಾನಗಳ ಕುಸಿತ ಕಂಡು 24ನೇ ಸ್ಥಾನಕ್ಕೆ ತಲುಪಿದೆ.
ಭಾರತೀಯ ವಿಮಾನ ನಿಲ್ದಾಣಗಳ ಕಥೆ ಏನು? ಭಾರತದ ನಾಲ್ಕು ವಿಮಾನ ನಿಲ್ದಾಣಗಳು ಮಾತ್ರ ಅಗ್ರ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ದೆಹಲಿ ವಿಮಾನ ನಿಲ್ದಾಣ ಪಟ್ಟಿಯಲ್ಲಿ 36 ನೇ ಸ್ಥಾನವನ್ನು ಉಳಿಸಿಕೊಂಡಿದೆ. ಆದರೆ ಮುಂಬೈ ವಿಮಾನ ನಿಲ್ದಾಣವು ಕಳೆದ ವರ್ಷದ 84 ನೇ ಸ್ಥಾನದಿಂದ 95 ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಬೆಂಗಳೂರು ವಿಮಾನ ನಿಲ್ದಾಣವು ಕಳೆದ ವರ್ಷ 69 ನೇ ಸ್ಥಾನಲ್ಲಿತ್ತು. ಆದರೆ ಈ ಬಾರಿ 10 ಸ್ಥಾನಗಳ ಜಿಗಿತ ಕಾಣುವ ಮೂಲಕ 59 ನೇ ಸ್ಥಾನಕ್ಕೆ ಏರಿಕೆ ಕಂಡಿದೆ. ಇನ್ನು ಹೈದರಾಬಾದ್ ವಿಮಾನ ನಿಲ್ದಾಣ ನಾಲ್ಕು ಸ್ಥಾನಗಳಷ್ಟು ಏರಿಕೆ ಕಾಣುವ ಮೂಲಕ 61 ಸ್ಥಾನ ಅಲಂಕರಿಸಿದೆ.
ಭಾರತದ ವಿಮಾನ ನಿಲ್ದಾಣಗಳ ಸ್ಥಾನ
- ನವದೆಹಲಿ - 36ನೇ ಸ್ಥಾನ
- ಬೆಂಗಳೂರು - 59
- ಮುಂಬೈ - 95
- ಹೈದರಾಬಾದ್ - 61
ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣಗಳ ಪಟ್ಟಿ ಇಂತಿದೆ
- ದೋಹಾದ ಹಮಾದ್
- ಸಿಂಗಾಪುರದ ಚಾಂಗಿ
- ಸಿಯೋಲ್ ಇಂಚಿಯಾನ್
- ಟೋಕಿಯೋ ಹನೆಡಾ
- ಟೋಕಿಯೋ ನರಿಟಾ
- ಪ್ಯಾರಿಸ್ ಸಿಡಿಜಿ
- ದುಬೈ
- ಮ್ಯೂನಿಚ್
- ಜ್ಯೂರಿಚ್
- ಇಸ್ತಾಂಬುಲ್
- ಹಾಂಕಾಂಗ್
- ರೋಮ್ ಫಿಯುಮಿಸಿನೊ
- ವಿಯೆನ್ನಾ
- ಹೆಲ್ಸಿಂಕಿ-ವಂಟಾ
- ಮ್ಯಾಡ್ರಿಡ್-ಬರಾಜಸ್
- ಸೆಂಟ್ರೇರ್ ನಗೋಯಾ
- ವ್ಯಾಂಕೋವರ್
- ಕನ್ಸಾಯಿ
- ಮೆಲ್ಬೋರ್ನ್
- ಕೋಪನ್ಹೇಗನ್