ಶಿವಪುರಿ (ಮಧ್ಯ ಪ್ರದೇಶ): ವೃದ್ಧೆಯೊಬ್ಬರಿಗೆ ಮನುಷ್ಯನ ಮಲ ತಿನ್ನಿಸಿ ವಿಕೃತಿ ಮೆರೆದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ವೃದ್ಧೆ ವಾಮಾಚಾರ ಮಾಡಿಸುತ್ತಿದ್ದಾಳೆ ಎಂಬ ಅನುಮಾನದ ಹಿನ್ನೆಲೆ ಯಾರೋ ಕಿಡಿಗೇಡಿಗಳು ಆಕೆಗೆ ಮನುಷ್ಯನ ಮಲ ತಿನ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅದಕ್ಕೂ ಮುನ್ನ ವೃದ್ಧೆಯನ್ನು ಕಿಡಿಗೇಡಿಗಳು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಆಕೆಯ ಬಾಯಿಗೆ ಮಲವನ್ನು ತುಂಬಿಸಿದ್ದಾರೆ. ಅಷ್ಟೇ ಅಲ್ಲದೇ ವೃದ್ಧೆಯನ್ನು ತಾವೇ ಟ್ಯಾಕ್ಸಿಯಲ್ಲಿ ಠಾಣೆಗೆ ಕರೆತಂದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಮಹಿಳೆಯ ಆರೋಪ: ''ಹೊರಗಡೆ ತೆರಳಿದ್ದ ನಾನು, ಫೆಬ್ರವರಿ 15ರಂದು ಬೆಳಗ್ಗೆ 10 ಗಂಟೆಗೆ ಮನೆಯತ್ತ ಬರುತ್ತಿದ್ದೆ. ಈ ವೇಳೆ ಯಾರೋ ಕೆಲವರು ನನ್ನನ್ನು ತಡೆದು ನಿಲ್ಲಿಸಿ ವಾಮಾಚಾರದ ಬಗ್ಗೆ ಪ್ರಶ್ನಿಸಿದರು. ನಾನು ನಿರಾಕರಿಸಿದಾಗ ಎಲ್ಲರೂ ಒದೆಯಲು ಪ್ರಾರಂಭಿಸಿದರು. ನನ್ನ ಬಟ್ಟೆಗಳನ್ನು ಹರಿದು ಹಾಕಿದರು. ಗ್ರಾಮದ ಒಳಗೆ ಕರೆದೊಯ್ದು ಮಾನವನ ಮಲವನ್ನು ಬಾಯಿಗೆ ತುಂಬಿಸಲಾಯಿತು'' ಎಂದು ಆರೋಪ ಮಾಡಿದ್ದಾರೆ. ಶುಕ್ರವಾರ ಸಂಜೆ ಪತಿಯೊಂದಿಗೆ ಶಿವಪುರಿ ಎಸ್ಪಿ ಕಚೇರಿಗೆ ಬಂದ ಮಹಿಳೆ, ಪೊಲೀಸ್ ವರಿಷ್ಠಾಧಿಕಾರಿ ರಘುವಂಶ್ ಸಿಂಗ್ ಭಡೋರಿಯಾ ಅವರ ಮುಂದೆ ತಮ್ಮ ನೋವು ತೋಡಿಕೊಂಡಿದ್ದಾಳೆ.
ತಕ್ಷಣ ತನಿಖೆ ನಡೆಸುವಂತೆ ಆದೇಶ: ತನ್ನ ಮೇಲೆ ಈ ಕೃತ್ಯ ನಡೆಸುತ್ತಿದ್ದಾಗ ಇಡೀ ಗ್ರಾಮದ ಜನರು ನೋಡಿಕೊಂಡು ಸಮ್ಮನೇ ನಿಂತಿದ್ದರು. ಯಾರೊಬ್ಬರು ಸಹ ತನ್ನನ್ನು ರಕ್ಷಿಸಲು ಮುಂದೆ ಬರಲಿಲ್ಲ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿಯೂ ದೂರು ನೀಡಿರುವೆ. ಆದರೆ, ಫಲ ನೀಡಲಿಲ್ಲ. ಹಾಗಾಗಿ ಎಸ್ಪಿ ಕಚೇರಿಗೆ ಬರಬೇಕಾಯಿತು. ಈ ಘಟನೆಯಿಂದ ಅವಮಾನವಾಗಿದ್ದು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಹಿಳೆಯು ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ. ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಪೊಲೀಸ್ ವರಿಷ್ಠಾಧಿಕಾರಿ ರಘುವಂಶ್ ಸಿಂಹ ಭಡೋರಿಯಾ ಅವರು ತಕ್ಷಣ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಶಾಪಿಂಗ್ ಮಾಲ್ನಲ್ಲಿ ಮಹಿಳೆಯರನ್ನು ಸ್ಪರ್ಶಿಸಿ ಕಿರುಕುಳ ನೀಡಿದ ವ್ಯಕ್ತಿ ನಿವೃತ್ತ ಮುಖ್ಯ ಶಿಕ್ಷಕ!