ಸಂಭಲ್, ಉತ್ತರಪ್ರದೇಶ: ಭಾರತೀಯ ಸಂಸ್ಕೃತಿಯಲ್ಲಿ, ಪಿತೃ ಪಕ್ಷದ ಸಮಯದಲ್ಲಿ ಶ್ರಾದ್ಧದ ಆಚರಣೆಗಳು ಮತ್ತು ದಾನ ನೀಡುವ ಸಂಪ್ರದಾಯವಿದೆ. ಈ ಆಚರಣೆಯ ಭಾಗವಾಗಿ ಬ್ರಾಹ್ಮಣರಿಗೆ ಆಹಾರ ಇತ್ಯಾದಿಗಳನ್ನು ದಾನ ಮಾಡಲಾಗುತ್ತದೆ. ಆದರೆ ಸಂಭಲ್ ಜಿಲ್ಲೆಯ ಗುನ್ನೌರ್ ತಹಸಿಲ್ ಪ್ರದೇಶದ ಭಗ್ತಾ ನಾಗ್ಲಾ ಗ್ರಾಮದ ಗ್ರಾಮಸ್ಥರು ಮಾತ್ರ, ಶ್ರಾದ್ಧ ಮಾಸದಲ್ಲಿ ಬ್ರಾಹ್ಮಣರಿಗೆ ಆಹಾರವನ್ನು ನೀಡುವುದಿಲ್ಲ. ಈ ದಿನಗಳಲ್ಲಿ ಯಾವುದೇ ಬ್ರಾಹ್ಮಣರು ಈ ಗ್ರಾಮಕ್ಕೆ ಭೇಟಿ ನೀಡುವುದಿಲ್ಲ. ಅಷ್ಟೇ ಏಕೆ, ಶ್ರಾದ್ಧದ ದಿನಗಳಲ್ಲಿ ಈ ಗ್ರಾಮಕ್ಕೆ ಯಾವ ಸನ್ಯಾಸಿಯೂ ಹೋಗುವುದಿಲ್ಲ, ಯಾರಾದರೂ ತಪ್ಪಾಗಿ ಹೋದರೂ ಅವರಿಗೆ ಇಲ್ಲಿನ ಜನ ಭಿಕ್ಷೆ ನೀಡುವುದಿಲ್ಲ.
ಪಿತೃ ಪಕ್ಷದ 16 ದಿನ ಗ್ರಾಮದಲ್ಲಿ ಪೂಜೆ ಇಲ್ಲ: ಸುಮಾರು 100 ವರ್ಷಗಳಿಂದ ಈ ಗ್ರಾಮದ ಜನರು ಶ್ರಾದ್ಧ ಮಾಡಿಲ್ಲ. ಶ್ರಾದ್ಧ ಆಚರಣೆಗಳ ನಿಷೇಧದ ಹೊರತಾಗಿ ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪಿತೃ ಪಕ್ಷದ 16 ದಿನಗಳ ಕಾಲ ಯಾವುದೇ ರೀತಿಯ ಪೂಜೆ, ಹವನ ಇತ್ಯಾದಿಗಳನ್ನು ಗ್ರಾಮಸ್ಥರು ನಡೆಸುವುದಿಲ್ಲ. ಪಿತೃಪಕ್ಷದ ದಿನಗಳಲ್ಲಿ ಬ್ರಾಹ್ಮಣರು ಈ ಗ್ರಾಮವನ್ನು ಪ್ರವೇಶಿಸುವಂತಿಲ್ಲ.
ಬ್ರಾಹ್ಮಣರ ಪ್ರವೇಶ ನಿಷೇಧದ ಹಿಂದಿನ ಕಥೆ ಏನು?: ಈ ಬಗ್ಗೆ ಮಾತನಾಡಿರುವ ಗ್ರಾಮದ ಹಿರಿಯ ನಿವಾಸಿ ರೇವತಿ ಸಿಂಗ್, ’’ಪ್ರಾಚೀನ ಕಾಲದಲ್ಲಿ, ಗ್ರಾಮದ ಬ್ರಾಹ್ಮಣ ಮಹಿಳೆಯೊಬ್ಬರು ಭಗ್ತಾ ನಾಗ್ಲಾ ಗ್ರಾಮದ ಗ್ರಾಮಸ್ಥರೊಬ್ಬರ ಮನೆಗೆ ಶ್ರಾದ್ಧ ಆಚರಣೆಗಳನ್ನು ಮಾಡಲು ಬಂದಿದ್ದರಂತೆ, ಇದಾದ ನಂತರ ಗ್ರಾಮದಲ್ಲಿ ಭಾರೀ ಮಳೆಯಾಗತೊಡಗಿತು. ಭಾರಿ ಮಳೆಯ ಪರಿಣಾಮ, ಬ್ರಾಹ್ಮಣ ಮಹಿಳೆ ಹಲವಾರು ದಿನಗಳ ಕಾಲ ಗ್ರಾಮಸ್ಥರ ಮನೆಯಲ್ಲಿ ಇರಬೇಕಾಯಿತು. ಕೆಲವು ದಿನಗಳ ನಂತರ ಮಳೆ ನಿಂತಾಗ, ಬ್ರಾಹ್ಮಣ ಮಹಿಳೆ ಮನೆಗೆ ಹಿಂದಿರುಗಿದ್ದಾರೆ. ಹಲವು ದಿನಗಳಿಂದ ಮನೆಯಲ್ಲಿಲ್ಲದ ಕಾರಣ, ಅನುಮಾನಪಟ್ಟ ಪತಿ, ಹೆಂಡತಿಯನ್ನು ಮನೆಯಿಂದ ಹೊರ ಹಾಕಿದ ಅಂತಾರೆ ಅವರು.
ಗ್ರಾಮಕ್ಕೆ ಶಾಪ ಹಾಕಿದ್ದ ಬ್ರಾಹ್ಮಣ ಮಹಿಳೆ: ಪತಿಯಿಂದ ಅವಮಾನಕ್ಕೊಳಗಾದ ಬ್ರಾಹ್ಮಣ ಮಹಿಳೆ ಭಗ್ತಾ ನಾಗ್ಲಾ ಗ್ರಾಮಕ್ಕೆ ಹಿಂತಿರುಗಿ ಗ್ರಾಮಸ್ಥರಿಗೆ ಇಡೀ ಕಥೆಯನ್ನು ತಿಳಿಸಿ, ಪಿತೃ ಪಕ್ಷದಲ್ಲಿ ಶ್ರಾದ್ಧ ಮಾಡಿದ್ದರಿಂದ ತನಗೆ ಅಪಮಾನವಾಗಿದೆ ಎಂದು ಗ್ರಾಮಸ್ಥರ ಗಮನಕ್ಕೆ ತಂದಳು. ಮಳೆಯಿಂದಾಗಿ ತಾನು ಗ್ರಾಮದಲ್ಲಿ ಉಳಿಯುವಂತಾಗಿದ್ದರಿಂದ, ನನ್ನ ಗಂಡ ನನ್ನನ್ನು ಮನೆಯಿಂದ ಹೊರಹಾಕಿದ್ದಾನೆ ಎಂದು ಅಳಲು ತೋಡಿಕೊಂಡಿದ್ದಳಂತೆ ಎಂದು ಆಚರಣೆಯ ಹಿಂದಿನ ಕಥೆಯನ್ನು ಹೇಳಿದರು ರೇವತಿ ಸಿಂಗ್.
ಹೀಗಾಗಿ ನೀವು ಶ್ರಾದ್ಧವನ್ನು ಮಾಡಿದರೆ ನಿಮಗೆ ಕೆಟ್ಟದ್ದು ಸಂಭವಿಸುತ್ತದೆ. ಬ್ರಾಹ್ಮಣ ಮಹಿಳೆಯ ನೋವನ್ನೇ ಶಾಪವೆಂದು ಪರಿಗಣಿಸಿದ ಈ ಗ್ರಾಮದ ಜನರು, ಸುಮಾರು 100 ವರ್ಷಗಳಿಂದ ಶ್ರಾದ್ಧ ಮಾಡದಿರುವ ಸಂಪ್ರದಾಯವನ್ನು ಇಂದಿಗೂ ಅನುಸರಿಸಿಕೊಂಡು ಬರುತ್ತಿದ್ದಾರೆ. ಶ್ರಾದ್ಧವನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಬ್ರಾಹ್ಮಣರು ಊರಿಗೆ ಬಂದು ಹೋಗುತ್ತಾರೆ. ಬ್ರಾಹ್ಮಣರು ಮದುವೆ ಇತ್ಯಾದಿ ಆಚರಣೆಗಳನ್ನೂ ಮಾಡುತ್ತಾರೆ. ಆದರೆ ಪಿತೃಪಕ್ಷದ ಸಂದರ್ಭದಲ್ಲಿ ಮಾತ್ರ ಈ ಗ್ರಾಮದತ್ತ ಸುಳಿವುದಿಲ್ಲ ಎಂದು ಆಚರಣೆ ಹಿಂದಿನ ಉದ್ದೇಶವನ್ನು ಗ್ರಾಮದ ಜನ ವಿವರಿಸಿದ್ದಾರೆ.
ಇದನ್ನು ಓದಿ: ಏನಿದು ಬ್ರಹ್ಮಮುಹೂರ್ತ?: ಆ ಸಮಯದಲ್ಲಿ ಏಳುವುದರಿಂದ ಆಗುವ ಪ್ರಯೋಜನಗಳೇನು? - WHAT IS BRAHMA MUHURTA