ಸೀತಾರಾಮರಾಜು (ಆಂಧ್ರಪ್ರದೇಶ) : ಬಹುತೇಕ ಮಕ್ಕಳಿಗೆ ಚಾಕೊಲೆಟ್, ಬಿಸ್ಕೆಟ್ ತುಂಬಾ ಇಷ್ಟ. ಮನೆಯಲ್ಲಿ ಮಾಡಿದ ಆಹಾರಕ್ಕಿಂತ ಅವರಿಗೆ ಹೆಚ್ಚು ಇಷ್ಟವಾಗೋದು ಬಿಸ್ಕೆಟ್ನಂತ ಪದಾರ್ಥಗಳು. ಹೀಗೆ ಆಟವಾಡುತ್ತ ಬಿಸ್ಕೆಟ್ ತಿನ್ನುತ್ತಿದ್ದ ಬಾಲಕನೋರ್ವ ದುರಂತ ಅಂತ್ಯ ಕಂಡಿದ್ದಾನೆ. ಗಂಟಲಿಗೆ ಬಿಸ್ಕೆಟ್ ಸಿಲುಕಿ ಮೂರು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಇಲ್ಲಿನ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಡುಂಬ್ರಿಗುಡ ಮಂಡಲದಲ್ಲಿ ನಡೆದಿದೆ.
ಮೃತ ಬಾಲಕನನ್ನು ದುಂಬ್ರಿಗುಡ ಮಂಡಲ ವ್ಯಾಪ್ತಿಯ ಬೊಂಡುಗುಡ ಗ್ರಾಮದ ಕಿಂದಂಗಿ ತೇಜ (3) ಎಂದು ಗುರುತಿಸಲಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕ ಶನಿವಾರ ಸಂಜೆ ಆಟವಾಡುತ್ತಿದ್ದ ವೇಳೆ ಬಿಸ್ಕೆಟ್ ತಿಂದಿದ್ದಾನೆ. ಆಟವಾಡುತ್ತ ವೇಗವಾಗಿ ಬಿಸ್ಕೆಟ್ ತಿನ್ನುತ್ತಿದ್ದರಿಂದ ಅದು ಏಕಾಏಕಿ ಗಂಟಲಿಗೆ ಸಿಲುಕಿದೆ. ಹೀಗಾಗಿ ಬಾಲಕ ತಕ್ಷಣ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ. ಆಗ ಅವನಿಗೆ ಉಸಿರಾಡಲು ಸಾಧ್ಯವಾಗಿಲ್ಲ. ಕುಟುಂಬಸ್ಥರು ಬಾಲಕನನ್ನು ರಕ್ಷಿಸಲು ಯತ್ನಿಸಿದರಾದರೂ ಫಲಕಾರಿಯಾಗಲಿಲ್ಲ.
ಬಳಿಕ ಪೋಷಕರು ಬಾಲಕನನ್ನು ಆಟೋದಲ್ಲಿ ಅರಕು ಕಣಿವೆ ಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ದಿದ್ದು, ಅದಾಗಲೇ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಹಳೆಯ ಘಟನೆ; ಕಳೆದ ವರ್ಷ ಮಧ್ಯಪ್ರದೇಶದ ಸೆಹೋರ್‌ನಲ್ಲಿ 11 ವರ್ಷದ ಬಾಲಕಿಯೊಬ್ಬಳು ಕುತ್ತಿಗೆಗೆ ದುಪಟ್ಟಾ ಸಿಕ್ಕಿ ಉಸಿರುಗಟ್ಟಿ ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಬುಧ್ನಿಯ ಪ್ರದೇಶದಲ್ಲಿ ಆಕೆಯ ಮನೆಯ ಹೊರಗೆ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಈ ಘಟನೆ ನಡೆದಿತ್ತು.
ಮೃತ ಬಾಲಕಿಯನ್ನು ದೀಪಕ್ ಸಾಹು ಅವರ ಪುತ್ರಿ ಹರ್ಷಿತಾ ಎಂದು ಗುರುತಿಸಲಾಗಿತ್ತು. ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಉಸಿರುಗಟ್ಟಿದ್ದರಿಂದ ಸಾವನ್ನಪ್ಪಿದ್ದಳು. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ಅವರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ : ಟ್ರ್ಯಾಕ್ಟರ್‌ಗೆ ಸಿಲುಕಿ ಮಗು ಸಾವು: ಟ್ರ್ಯಾಕ್ಟರ್ ಚಲಾಯಿಸುತ್ತಿದ್ದ ಬಾಲಕನ ಹತ್ಯೆ..!