ರುದ್ರಪ್ರಯಾಗ(ಉತ್ತರಾಖಂಡ): ಧಾರಾಕಾರ ಮಳೆಯಿಂದ ಉಂಟಾದ ಭೂಕುಸಿತದಿಂದ ಬಂಡೆಗಳು ಉರುಳಿ ಬಿದ್ದು ಕನಿಷ್ಠ ಮೂವರು ಸಾವನ್ನಪ್ಪಿರುವ ಘಟನೆ ಉತ್ತರಾಖಂಡದ ಕೇದಾರನಾಥದಲ್ಲಿ ಇಂದು ಬೆಳಗ್ಗೆ ನಡೆದಿದೆ. ಕೇದಾರನಾಥಕ್ಕೆ ತೆರಳುವ ಪಾದಚಾರಿ ಮಾರ್ಗದಲ್ಲಿ ದುರ್ಘಟನೆ ಸಂಭವಿಸಿತು. ಇತರ ಐವರು ಯಾತ್ರಿಕರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
![ಕೇದಾರನಾಥ - ರಕ್ಷಣಾ ಸಿಬ್ಬಂದಿ](https://etvbharatimages.akamaized.net/etvbharat/prod-images/21-07-2024/22008053_thum111.jpg)
ಯಾತ್ರೆ ಸಾಗುವ ಮಾರ್ಗ ಚಿರಬಾಸಾದಲ್ಲಿ ಭೂಕುಸಿತ ಉಂಟಾಗಿದೆ. ಬೆಟ್ಟದಿಂದ ಮಣ್ಣು ಮತ್ತು ಬೃಹತ್ ಗಾತ್ರದ ಕಲ್ಲುಗಳು ಬಿದ್ದು ಯಾತ್ರಿಕರು ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ. ಈ ಬಗ್ಗೆ ಬೆಳಗ್ಗೆ 7:30ರ ಸುಮಾರಿಗೆ ವಿಪತ್ತು ನಿಯಂತ್ರಣ ಕೊಠಡಿಗೆ ಮಾಹಿತಿ ಬಂದಿತ್ತು ಎಂದು ರುದ್ರಪ್ರಯಾಗ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ನಂದನ್ ಸಿಂಗ್ ರಾಜ್ವರ್ ಮಾಹಿತಿ ನೀಡಿದರು.
ಮುಂದುವರೆದ ರಕ್ಷಣಾ ಕಾರ್ಯ: ಈ ಮಾಹಿತಿ ಬಂದ ಕೂಡಲೇ ಯಾತ್ರೆಯ ಮಾರ್ಗದಲ್ಲಿ ನಿಯೋಜನೆಗೊಂಡಿದ್ದ ಭದ್ರತಾ ಸಿಬ್ಬಂದಿ, ಎನ್‌ಡಿಆರ್‌ಎಫ್, ಡಿಡಿಆರ್‌ಎಫ್, ವೈಎಂಎಫ್ ಮತ್ತು ಸ್ಥಳೀಯ ಆಡಳಿತ ತಂಡ ಸ್ಥಳಕ್ಕೆ ಧಾವಿಸಿ ಪರಿಹಾರ ಮತ್ತು ರಕ್ಷಣಾ ಕಾರ್ಯ ಪ್ರಾರಂಭಿಸಿತು. ರಕ್ಷಣಾ ತಂಡವು ಕಾರ್ಯಾಚರಣೆ ನಡೆಸಿ ಅವಶೇಷಗಳಿಂದ ಮೂರು ಮೃತದೇಹಗಳನ್ನು ಹೊರತೆಗೆದಿದೆ. ಐವರು ಗಾಯಗೊಂಡಿದ್ದಾರೆ ಎಂದು ಹೇಳಿದರು.
![ಕೇದಾರನಾಥ - ರಕ್ಷಣಾ ಸಿಬ್ಬಂದಿ](https://etvbharatimages.akamaized.net/etvbharat/prod-images/21-07-2024/22008053_thum11.jpg)
ಸಿಎಂ ಸಂತಾಪ: ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಂತಾಪ ಸೂಚಿಸಿದ್ದಾರೆ. 'ಕೇದಾರನಾಥ ಯಾತ್ರೆಯ ಮಾರ್ಗದ ಸಮೀಪ ಬೆಟ್ಟದ ಅವಶೇಷಗಳು ಮತ್ತು ಭಾರಿ ಕಲ್ಲುಗಳು ಬಿದ್ದುದರಿಂದ ಕೆಲವು ಯಾತ್ರಾರ್ಥಿಗಳು ಸಾವನ್ನಪ್ಪಿರುವ ಸುದ್ದಿ ಅತ್ಯಂತ ದುಃಖಕರ. ಘಟನಾ ಸ್ಥಳದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯ ನಡೆಯುತ್ತಿದೆ. ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಗಾಯಗೊಂಡವರಿಗೆ ತಕ್ಷಣ ಉತ್ತಮ ಚಿಕಿತ್ಸೆ ನೀಡಲು ಸೂಚನೆ ನೀಡಲಾಗಿದೆ. ಅಗಲಿದವರ ಆತ್ಮಕ್ಕೆ ಶಾಂತಿ ದೊರೆಯಲಿ. ಕುಟುಂಬ ಸದಸ್ಯರಿಗೆ ಅಪಾರ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ' ಎಂದು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ಧಾರೆ.
केदारनाथ यात्रा मार्ग के पास पहाड़ी से मलबा व भारी पत्थर गिरने से कुछ यात्रियों के हताहत होने का समाचार अत्यंत दुःखद है। घटनास्थल पर राहत एवं बचाव कार्य जारी है, इस सम्बन्ध में निरंतर अधिकारियों के संपर्क में हूं। हादसे में घायल हुए लोगों को त्वरित रूप से बेहतर उपचार उपलब्ध…
— Pushkar Singh Dhami (@pushkardhami) July 21, 2024
ಉಕ್ಕಿ ಹರಿಯುತ್ತಿರುವ ನದಿ, ತೊರೆಗಳು: ಮತ್ತೊಂದೆಡೆ, ಹವಾಮಾನ ಇಲಾಖೆ ಭಾರಿ ಮಳೆಯಾಗುವ ಎಚ್ಚರಿಕೆ ನೀಡಿದೆ. ನಿರಂತರ ಮಳೆಯಿಂದಾಗಿ ಪರ್ವತಗಳಿಂದ ಬಂಡೆಗಳು ಮತ್ತು ಕಲ್ಲುಗಳು ಬೀಳುವ ಆತಂಕ ಹೆಚ್ಚಾಗಿದೆ. ನದಿಗಳು, ತೊರೆಗಳು ಉಕ್ಕಿ ಹರಿಯುತ್ತಿವೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಇದೇ ರೀತಿ ಭೀಕರ ಗುಡ್ಡ ಕುಸಿತ ಉಂಟಾಗಿತ್ತು. ಇದರ ಪರಿಣಾಮ ಮೂರು ಅಂಗಡಿಗಳು ನೆಲಸಮವಾಗಿದ್ದವು. ಅವಶೇಷಗಳು ಬಿದ್ದು ಹಲವರು ನಾಪತ್ತೆಯಾಗಿದ್ದರು. ಮಂದಾಕಿನಿ ನದಿಯಲ್ಲಿ ಸುಮಾರು 12 ಜನರು ಮೃತದೇಹಗಳು ಪತ್ತೆಯಾಗಿದ್ದವು.
ಇದನ್ನೂ ಓದಿ: ಅಮರನಾಥ ಯಾತ್ರೆ: 22 ದಿನಗಳಲ್ಲಿ 3.86 ಲಕ್ಷ ಭಕ್ತರಿಂದ ಹಿಮಲಿಂಗದ ದರ್ಶನ