ದೆಹಲಿ/ಅಯೋಧ್ಯೆ: ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆಗಳು ಅವ್ಯಾಹತವಾಗಿ ಮುಂದುವರಿದಿದ್ದು, ಭಾನುವಾರ ಕೂಡ, ಇಂಡಿಯನ್ ಏರ್ಲೈನ್ ಸಂಸ್ಥೆ ನಿರ್ವಹಿಸುತ್ತಿದ್ದ ಕನಿಷ್ಠ 50 ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಅವುಗಳಲ್ಲಿ ಎರಡು ವಿಮಾನಗಳನ್ನು ಬೇರೆಡೆಗೆ ಡೈವರ್ಟ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ 14 ದಿನಗಳಲ್ಲಿ, 350ಕ್ಕೂ ಹೆಚ್ಚು ವಿಮಾನಗಳಿಗೆ ಸಾಮಾಜಿಕ ಮಾಧ್ಯಮದ ಮೂಲಕ ಹುಸಿ ಬಾಂಬ್ ಬೆದರಿಕೆ ಕರೆಗಳು ಬಂದಿವೆ.
ಬೆಂಗಳೂರಿನಿಂದ ಅಯೋಧ್ಯೆಗೆ ಹೋಗುತ್ತಿದ್ದ ಆಕಾಶ ಏರ್‌ಲೈನ್ಸ್ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದ ಬೆನ್ನಲ್ಲೇ, ಉನ್ನತ ಪೊಲೀಸ್ ಅಧಿಕಾರಿಗಳು, ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿ ಕಾರ್ಯಾಚರಣೆಗೆ ಇಳಿದರು. ಮತ್ತೊಂದೆಡೆ ಬೆಂಗಳೂರಿನಿಂದ ಗೋರಖ್‌ಪುರಕ್ಕೆ ಬರುತ್ತಿದ್ದ ವಿಮಾನಕ್ಕೂ ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಆತಂಕ ಸೃಷ್ಟಿಯಾಗಿತ್ತು.
ತುರ್ತು ಪರಿಸ್ಥಿತಿ ಎದುರಿಸಲು ಸಂಬಂಧಿಸಿದ ಎಲ್ಲ ಇಲಾಖೆಗಳಿಗೆ ಎಚ್ಚರಿಕೆ ನೀಡಲಾಯಿತು. ವಿಮಾನ ಲ್ಯಾಂಡ್ ಆದ ಬಳಿಕ ಬಾಂಬ್ ನಿಷ್ಕ್ರಿಯ ದಳ ತನಿಖೆ ಆರಂಭಿಸಿತು. ಜೊತೆಗೆ ಪ್ರಯಾಣಿಕರನ್ನೂ ತಪಾಸಣೆ ನಡೆಸಲಾಯಿತು. ಪ್ರಸ್ತುತ, ಯಾವುದೇ ಬಾಂಬ್ ಕಂಡುಬಂದಿಲ್ಲ. ಆದರೆ, ತನಿಖೆ ಮುಂದುವರಿದಿದೆ.
ಆಕಾಶ ಏರ್ಲೈನ್ಸ್ನ ಸುಮಾರು 15 ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ತಪಾಸಣೆ ನಡೆಸಿದ ನಂತರ ಎಲ್ಲಾ ವಿಮಾನಗಳನ್ನು ಕಾರ್ಯಾನಿರ್ವಹಣೆಗೆ ಬಿಡುಗಡೆ ಮಾಡಲಾಯಿತು. ಮೂಲಗಳ ಪ್ರಕಾರ, ಇಂಡಿಗೋ ಸಂಸ್ಥೆಯ 18 ವಿಮಾನಗಳಿಗೆ ಮತ್ತು ವಿಸ್ತಾರಾ ಸಂಸ್ಥೆಯ 17 ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ.
ಇಂಡಿಗೋ ಅಧಿಕಾರಿಗಳ ಪ್ರಕಾರ, ಬೆದರಿಕೆ ಕರೆಗಳ ನಂತರ ಕನಿಷ್ಠ ಎರಡು ಇಂಡಿಗೋ ವಿಮಾನಗಳನ್ನು ಡೈವರ್ಟ್ ಮಾಡಲಾಯಿತು. ಪುಣೆಯಿಂದ ಜೋಧ್‌ಪುರಕ್ಕೆ ಹೋಗುತ್ತಿದ್ದ 6E 133 ವಿಮಾನವನ್ನು ಅಹಮದಾಬಾದ್‌ಗೆ ಮತ್ತು ಕೋಝಿಕೋಡ್‌ನಿಂದ ದಮ್ಮಾಮ್ಗೆ ಹೋಗುತ್ತಿದ್ದ 6E 87 ವಿಮಾನವನ್ನು ಮುಂಬೈಗೆ ತಿರುಗಿಸಲಾಯಿತು.
ಉಳಿದಂತೆ 6E 11 (ದೆಹಲಿ-ಇಸ್ತಾನ್‌ಬುಲ್), 6E 92 (ಜೆಡ್ಡಾ-ಮುಂಬೈ), 6E 112 (ಗೋವಾ-ಅಹಮದಾಬಾದ್), 6E 125 (ಬೆಂಗಳೂರು-ಝಾರ್ಸುಗುಡ), 6E 127 (ಅಮೃತಸರ-ಅಹಮದಾಬಾದ್) ಮತ್ತು 6E 135 (ಕೋಲ್ಕಾತ-Pune), 6E 149 (ಹೈದರಾಬಾದ್‌ನಿಂದ ಬಾಗ್ಡೋಗ್ರಾ), 6E 173 (ದೆಹಲಿಯಿಂದ ಬೆಂಗಳೂರು), 6E 175 (ಬೆಂಗಳೂರಿನಿಂದ ದೆಹಲಿ), 6E 197 (ರಾಯಪುರದಿಂದ ಹೈದರಾಬಾದ್), 6E 248 (ಮುಂಬೈನಿಂದ ಕೋಲ್ಕತ್ತಾ), 6E 277 (ಅಹಮದಾಬಾದ್-ಲಕ್ನೋ), (ಬೆಂಗಳೂರಿನಿಂದ ಕೋಲ್ಕತ್ತಾ), 6E 235 (ಕೋಲ್ಕತ್ತಾ-ಬೆಂಗಳೂರು) ಮತ್ತು 6E 74 (ರಿಯಾದ್-ಮುಂಬೈ) ವಿಮಾನಗಳು ಬಾಂಬ್ ಬೆದರಿಕೆ ಕರೆಗಳನ್ನು ಸ್ವೀಕರಿಸಿವೆ.
ಲಕ್ನೋದ 9 ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆ ಇಮೇಲ್: ಮತ್ತೊಂದೆಡೆ, ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಒಂಬತ್ತು ಹೋಟೆಲ್‌ಗಳಿಗೆ ಭಾನುವಾರ ಬಾಂಬ್ ಬೆದರಿಕೆ ಇಮೇಲ್ ಬಂದಿದೆ. ಮೇಲ್ ಮಾಡಿದವರು ಹೋಟೆಲ್ ನಿರ್ವಾಹಕರಿಂದ 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಆಯಾ ಹೋಟೆಲ್‌ಗಳ ನೆಲದಲ್ಲಿ ಕಪ್ಪು ಚೀಲಗಳಲ್ಲಿ ಬಾಂಬ್‌ಗಳನ್ನು ಬಚ್ಚಿಡಲಾಗಿದೆ. ತಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳದಿದ್ದರೆ ಹೋಟೆಲ್‌ಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಲಕ್ನೋ ಪೊಲೀಸರು ಇಮೇಲ್ ಕಳುಹಿಸಿದವರ ಐಪಿ ವಿಳಾಸವನ್ನು ಟ್ರ್ಯಾಕ್ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಹೋಟೆಲ್‌ನಲ್ಲಿ ಬಾಂಬ್ ಇರುವ ಬಗ್ಗೆ ಮಾಹಿತಿ ಲಭಿಸಿದ ತಕ್ಷಣ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ಆರಂಭಿಸಿದ್ದಾರೆ. ಲೆಮನ್ ಟ್ರೀ, ಸರ್ಕಾ, ಪಿಕ್ಯಾಡಿಲಿ, ಮ್ಯಾರಿಯಟ್, ಕಂಫರ್ಟ್ ವಿಸ್ಟಾ, ಫಾರ್ಚೂನ್, ಕ್ಲಾರ್ಕ್ ಅವಧ್, ದಯಾಳ್ ಗೇಟ್‌ವೇ ಮತ್ತು ಕಾಸಾ ಎಂಬ ಹೋಟೆಲ್‌ಗಳಿಗೆ ಬೆದರಿಕೆ ಮೇಲ್ ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: 'ಹುಸಿ' ಪೀಡಕರಿಗೆ ಕಠಿಣ ಶಿಕ್ಷೆಗಾಗಿ ವಿಮಾನಯಾನ ಕಾನೂನುಗಳಿಗೆ ತಿದ್ದುಪಡಿ: ಕೇಂದ್ರ ಸರ್ಕಾರ