ನವದೆಹಲಿ: ವಿಶ್ವದಲ್ಲಿಯೇ ಅತಿದೊಡ್ಡ ಕಾರ್ಯಕರ್ತರ ಪಡೆ ಹೊಂದಿರುವ ಭಾರತೀಯ ಜನತಾ ಪಕ್ಷವು (ಬಿಜೆಪಿ) ಸೋಮವಾರ (ಅಕ್ಟೋಬರ್ 21) ತನ್ನ ಸದಸ್ಯತ್ವ 10 ಕೋಟಿಯನ್ನು ತಲುಪುವ ಮೂಲಕ ಮಹತ್ವದ ಮೈಲಿಗಲ್ಲು ಸಾಧಿಸಿದೆ.
ಅಕ್ಟೋಬರ್ 11ರಿಂದ ಎರಡನೇ ಹಂತದ ಅಭಿಯಾನ ಆರಂಭಿಸಲಾಗಿದೆ. ಈ ತಿಂಗಳ ಅಂತ್ಯದವರೆಗೂ ನೋಂದಣಿ ಮುಂದುವರಿಯಲಿದೆ. ನಂತರ ನವೆಂಬರ್ 1ರಿಂದ 5ರವರೆಗೆ ಪರಿಶೀಲನೆಯ ಅವಧಿ ಇರುತ್ತದೆ. ಹೀಗಾಗಿ, ಪಕ್ಷವು ತನ್ನ ಹಿಂದಿನ ಗರಿಷ್ಠ 11 ಕೋಟಿ ಸದಸ್ಯರನ್ನು ಮೀರಿಸುವ ಗುರಿ ಹೊಂದಿದೆ.
ಸದಸ್ಯರು 100 ರೂಪಾಯಿ ದೇಣಿಗೆ ನೀಡಿದ ನಂತರ ಮತ್ತು ಅವರು 50 ಸದಸ್ಯರನ್ನು ನೋಂದಾಯಿಸಿದ ಬಳಿಕ ಪ್ರಮಾಣಪತ್ರವನ್ನು ಪಡೆಯುತ್ತಾರೆ. ದೈಹಿಕ ಮತ್ತು ಆನ್ಲೈನ್ ಮೂಲಕ ಬೂತ್ ಮಟ್ಟದಲ್ಲಿ ಸದಸ್ಯತ್ವ ನೋಂದಣಿ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
'ಮೋದಿ ಮಿತ್ರ'ರಿಗೆ ಆಹ್ವಾನ: ಸದಸ್ಯತ್ವ ನೋಂದಣಿ ಹೆಚ್ಚಿಸಲು ಬಿಜೆಪಿ, ಈ ಬಾರಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಭಾವ ಬೀರುವವರನ್ನು (ಇನ್ಫ್ಲೂಯೆನ್ಸರ್) 'ಮೋದಿ ಮಿತ್ರರು' ಎಂದು ಗುರುತಿಸಿದೆ. ಇದಕ್ಕಾಗಿ 'ಆಡಿಯೋ ಬ್ರಿಡ್ಜ್' ಎಂಬ ಕಾರ್ಯಕ್ರಮ ಪ್ರಾರಂಭಿಸಿದೆ. ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾವು 26 ಸಾವಿರ ಮೋದಿ ಮಿತ್ರರನ್ನು (ಇನ್ಫ್ಲೂಯೆನ್ಸರ್) ಏಕಕಾಲದಲ್ಲಿ ಸಂಪರ್ಕಿಸಲು ಆಡಿಯೋ ಬ್ರಿಡ್ಜ್ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.
ಇದರಿಂದ ಇನ್ಫ್ಲೂಯೆನ್ಸರ್ಗಳು ಪಕ್ಷದ ದೃಷ್ಟಿಕೋನ ಅರ್ಥಮಾಡಿಕೊಳ್ಳಲು ಮತ್ತು ಬಿಜೆಪಿ ಸದಸ್ಯತ್ವವನ್ನು ಹೆಚ್ಚಿಸುವ ಭಾಗವಾಗಿ ಆಯಾ ಸಮುದಾಯಗಳೊಂದಿಗೆ ಸಂಪರ್ಕ ಸಾಧಿಸಲು ಅನುವಾಗಲಿದೆ. ಹೀಗಾಗಿ ಮೋದಿ ಸ್ನೇಹಿತರಿಗೆ (ಇನ್ಫ್ಲೂಯೆನ್ಸರ್) ಪತ್ರ ಬರೆಯಲಾಗಿದ್ದು, "ಆತ್ಮೀಯ ಮೋದಿ ಮಿತ್ರರೇ, ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಸೇರಲು ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸಲಾಗಿದೆ. ಸದಸ್ಯರಾಗಲು, 8800002024ಗೆ ಮಿಸ್ಡ್ ಕಾಲ್ ನೀಡಿ ಮತ್ತು ಸೂಚನೆಗಳನ್ನು ಅನುಸರಿಸಿ. ಇದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಸದಸ್ಯತ್ವ ಪ್ರಕ್ರಿಯೆ ಭಾಗವಾಗಿ ಅಕ್ಟೋಬರ್ 7ರಂದು ನಡೆಯುವ 'ಆಡಿಯೋ ಬ್ರಿಡ್ಜ್' ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ" ಎಂದು ಕೋರಿದೆ.
ಬಿಜೆಪಿ ಸದಾಸ್ಯತಾ ಅಭಿಯಾನ-2024 ಅನ್ನು ಸೆಪ್ಟೆಂಬರ್ 2ರಂದು ಪ್ರಾರಂಭಿಸಿತು. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ ಸದಸ್ಯತ್ವ ನವೀಕರಿಸಿಕೊಂಡರು. ಮೊದಲ ದಿನವೇ 47 ಲಕ್ಷ ಸದಸ್ಯತ್ವ ನೋಂದಣಿಯಾಗಿತ್ತು.
ಸೆಪ್ಟೆಂಬರ್ 2ರಿಂದ ಸೆಪ್ಟೆಂಬರ್ 25ರವರೆಗೆ ನಡೆದ ಮೊದಲ ಹಂತದ ಅಭಿಯಾನದಲ್ಲಿ 6 ಕೋಟಿ ಸದಸ್ಯರನ್ನು ನೋಂದಾಯಿಸಲಾಗಿದೆ. ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ ತಲಾ 1 ಕೋಟಿಗೂ ಹೆಚ್ಚು ಸದಸ್ಯರನ್ನು ನೋಂದಾಯಿಸಲಾಗಿದೆ. ಗುಜರಾತ್ ಮತ್ತು ಅಸ್ಸಾಂ ಕ್ರಮವಾಗಿ 85 ಲಕ್ಷ ಮತ್ತು 50 ಲಕ್ಷ ಸದಸ್ಯರು ನೋಂದಾಯಿಸಿಕೊಂಡಿದ್ದಾರೆ.
ಇದನ್ನೂ ಓದಿ: ನವ ದಂಪತಿ ಏಕೆ 16 ಮಕ್ಕಳನ್ನು ಹೊಂದಬಾರದು?: ತಮಿಳುನಾಡು ಸಿಎಂ ಸ್ಟಾಲಿನ್