ನವದೆಹಲಿ: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ರಾಜಕೀಯ ಮುಖವಾಣಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕೇರಳದಲ್ಲಿ ಕಾಂಗ್ರೆಸ್ ಬೆಂಬಲ ನೀಡಿದೆ. ಇದು ರಾಜಕೀಯ ಟೀಕೆಗೆ ಗುರಿಯಾಗಿದೆ. ಕಾಂಗ್ರೆಸ್ ಉಗ್ರರ ಬೆಂಬಲದೊಂದಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್‌ಗೆ ಎಸ್‌ಡಿಪಿಐ ಬೆಂಬಲ ಘೋಷಿಸಿದೆ. ಆದರೆ, ನಿಷೇಧಿತ ಪಿಎಫ್ಐನ ಉಗ್ರ ಚಟುವಟಿಕೆಗಳನ್ನು ಎಸ್‌ಡಿಪಿಐ ಬೆಂಬಲಿಸುತ್ತದೆ. ಅಂತಹ ಸಂಘಟನೆ ಜೊತೆಗೆ ಕಾಂಗ್ರೆಸ್ ಕೈಜೋಡಿಸಿದ್ದನ್ನು ಬಿಜೆಪಿ ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದೆ.
ಈ ಬಗ್ಗೆ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರೇಮ್ ಶುಕ್ಲಾ, ಕೈ ಪಕ್ಷದ ನಾಯಕ ರಾಹುಲ್ ಗಾಂಧಿ ಒಂದೆಡೆ ಮೊಹಬ್ಬರ್ ಕಿ ದುಕಾನ್ (ಪ್ರೀತಿಯ ಅಂಗಡಿ) ತೆರೆಯುವ ಬಗ್ಗೆ ಮಾತನಾಡುತ್ತಾರೆ. ಇನ್ನೊಂದೆಡೆ, ಪಿಎಫ್‌ಐ ಮೊಹಬ್ಬತ್ ಕೆ ಪೈಗಮ್ (ಪ್ರೀತಿಯ ಸಂದೇಶ) ಸ್ಲೋಗನ್ ಹೊರಡಿಸಿ, ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಕ್ಕಾಗಿ ಹೋರಾಡುತ್ತದೆ. ಅಂತಹ ಸಂಘಟನೆಯ ರಾಜಕೀಯ ಅಂಗವಾದ ಎಸ್‌ಡಿಪಿಐ ಜೊತೆಗೆ 'ಕೈ' ಜೋಡಿಸಿರುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ ಅವರು ರಾಮಲೀಲಾ ಮೈದಾನದಲ್ಲಿ ಈಚೆಗೆ ದೇಶಕ್ಕೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ. ನಂತರ ಅವರು ಪಿಎಫ್‌ಐ ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುವ ಎಸ್‌ಡಿಪಿಐನಿಂದ ಚುನಾವಣಾ ಬೆಂಬಲ ಪಡೆಯುತ್ತಿದ್ದಾರೆ. ಇದು ಭಯೋತ್ಪಾದಕರ ಬೆಂಬಲದೊಂದಿಗೆ ಕಾಂಗ್ರೆಸ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಬಿಜೆಪಿ ವಕ್ತಾರರು ಆರೋಪಿಸಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರು, ಕಾಂಗ್ರೆಸ್‌ನ ಭಯೋತ್ಪಾದನೆ ಮತ್ತು ತುಕ್ಡೆ-ತುಕ್ಡೆ ಗ್ಯಾಂಗ್‌ನ ಮೇಲಿನ ಪ್ರೀತಿ ಅವ್ಯಾಹತವಾಗಿ ಮುಂದುವರೆದಿದೆ ಎಂದಿದ್ದಾರೆ. ಬಿಜೆಪಿಯ ಕೇರಳ ಘಟಕವು ಯುಡಿಎಫ್‌ಗೆ ಎಸ್‌ಡಿಪಿಐ ನೀಡಿದ ಬೆಂಬಲದ ಬಗ್ಗೆ ತಮ್ಮ ನಿಲುವನ್ನು ವಿವರಿಸಲು ರಾಹುಲ್ ಗಾಂಧಿಯನ್ನು ಆಗ್ರಹಿಸಿದೆ.
ಅಮಿತ್ ಶಾ ಟೀಕೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಉಗ್ರ ಸಂಘಟನೆಗಳ ಭಾಗವಾಗಿರುವ ಸಂಘಟನೆಗಳ ಬೆಂಬಲವನ್ನು ಪಡೆದರೆ ಆ ಪಕ್ಷವು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಜನರು ಹೇಗೆ ಸುರಕ್ಷಿತವಾಗಿರಲು ಸಾಧ್ಯವೇ ಎಂದು ಈಚೆಗೆ ಕರ್ನಾಟಕ ಪ್ರವಾಸದ ವೇಳೆ ಪ್ರಶ್ನಿಸಿದ್ದರು.
ಇನ್ನೂ, ರಾಹುಲ್ ಗಾಂಧಿ ಅವರು ಪ್ರಸ್ತುತ ಪ್ರತಿನಿಧಿಸುತ್ತಿರುವ ಕೇರಳದ ವಯನಾಡ್ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಮತ್ತೊಮ್ಮೆ ಸ್ಪರ್ಧೆ ಬಯಸಿ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ದೊಡ್ಡ ರ್ಯಾಲಿ ನಡೆಸುವ ಮೂಲಕ ಸಾವಿರಾರು ಸಂಖ್ಯೆಯಲ್ಲಿ ಬೆಂಬಲಿಗರ ಜೊತೆಗೆ ಉಮೇದುವಾರಿಕೆ ಸಲ್ಲಿಸಿದರು.
ಇದನ್ನೂ ಓದಿ: ಕೈ ಬಿಟ್ಟು ಕಮಲ ಹಿಡಿದ ಒಲಿಂಪಿಕ್ ಪದಕ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್ - Vijender Singh Joins BJP