ಪಾಟ್ನಾ: ಹಿಂದಿನ ಕಾಲದ ಬೇತಿಯಾ ರಾಜ್ ಜಮೀನ್ದಾರಿ ಎಸ್ಟೇಟ್ ಭೂಮಿಯನ್ನು ಸಂಪೂರ್ಣವಾಗಿ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಅನುವು ಮಾಡಿಕೊಡುವ ಶಾಸನ ಜಾರಿಗೆ ತರಲು ಬಿಹಾರ ಸರ್ಕಾರ ಈಗ ಮುಂದಾಗಿದೆ. ಬೇತಿಯಾ ರಾಜ್ ಜಮೀನ್ದಾರಿ ಎಸ್ಟೇಟ್ ಭೂಮಿಯ ಅತಿಕ್ರಮಣ ತೆರವಿಗೆ ಹಲವಾರು ವರ್ಷಗಳ ಪ್ರಯತ್ನಗಳ ನಂತರ ಸರ್ಕಾರ ಈಗ ಈ ವಿಷಯದಲ್ಲಿ ಹೊಸ ಕಾನೂನು ಜಾರಿಗೆ ಸಿದ್ಧತೆ ನಡೆಸಿದೆ.
ಮಂಗಳವಾರ ಬಿಹಾರ ವಿಧಾನಸಭೆಯಲ್ಲಿ ಪರಿಚಯಿಸಲಾದ ಬೇತಿಯಾ ರಾಜ್ ಆಸ್ತಿ ಮಸೂದೆ-2024, ಪೂರ್ವ ಮತ್ತು ಪಶ್ಚಿಮ ಚಂಪಾರಣ್ ಸೇರಿದಂತೆ ಬಿಹಾರದ ಆರು ಜಿಲ್ಲೆಗಳಲ್ಲಿ ಹರಡಿರುವ ಎಲ್ಲಾ 15,215 ಎಕರೆ ಬೇತಿಯಾ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರಕ್ಕೆ ಅವಕಾಶ ನೀಡುತ್ತದೆ ಎಂದು ಬಿಹಾರದ ಭೂ ಮತ್ತು ಕಂದಾಯ ಇಲಾಖೆ ಸಚಿವ ದಿಲೀಪ್ ಜೈಸ್ವಾಲ್ ಹೇಳಿದ್ದಾರೆ.
ಮಂಗಳವಾರ ಕರಡು ಮಸೂದೆಯನ್ನು ಪರಿಚಯಿಸಿದ ನಂತರ ಕಾನೂನಿನ ಬಗ್ಗೆ ಮಾತನಾಡಿದ ಜೈಸ್ವಾಲ್, ಪ್ಯಾನ್-ಬಿಹಾರ್ ಸಮೀಕ್ಷೆಯಲ್ಲಿ ಬೇತಿಯಾ ಭೂಮಿಯ ವಿಷಯದಲ್ಲಿ ಭಾರಿ ದುರಾಡಳಿತ ಮತ್ತು ಅತಿಕ್ರಮಣಗಳು ನಡೆದಿರುವುದು ಬೆಳಕಿಗೆ ಬಂದ ನಂತರ ರಾಜ್ಯ ಸರ್ಕಾರವು ಈ ಭೂಮಿಯನ್ನು ಕಾನೂನುಬದ್ಧವಾಗಿ ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿದೆ ಎಂದು ಹೇಳಿದರು.
"ಬೇತಿಯಾ ಭೂಮಿಯನ್ನು ನಿರ್ವಹಿಸುವುದು ಕಷ್ಟಕರವಾಗುತ್ತಿರುವುದರಿಂದ, ವಿಶೇಷವಾಗಿ ಹಲವಾರು ವರ್ಷಗಳಿಂದ ಈ ಭೂಮಿಯ ಅತಿಕ್ರಮಣವಾಗುತ್ತಿರುವುದರಿಂದ ಇದಕ್ಕಾಗಿ ವಿಶೇಷ ಕಾನೂನು ಜಾರಿಗೊಳಿಸುವುದು ಅಗತ್ಯವಾಗಿದೆ. ಕಾನೂನು ಜಾರಿಗೆ ಬಂದ ನಂತರ ಅಂಥ ಭೂಮಿಯ ಸಂಪೂರ್ಣ ವಿವರಗಳನ್ನು ತಿಳಿಸಲಾಗುವುದು" ಎಂದು ಅವರು ತಿಳಿಸಿದರು.
ಬೇತಿಯಾ ರಾಜ್ ಇದು ಚಂಪಾರಣ್ ಪ್ರದೇಶ ಮೂಲದ ರಾಜವಂಶವಾಗಿದ್ದು, 17 ನೇ ಶತಮಾನದಲ್ಲಿ ಚಕ್ರವರ್ತಿ ಷಹಜಹಾನ್ ಅವರಿಂದ ರಾಜಾ ಎಂಬ ಬಿರುದನ್ನು ಪಡೆದ ಉಜ್ಜಯಿನಿ ಸಿಂಗ್ ಮತ್ತು ಅವರ ಮಗ ಗಜ್ ಸಿಂಗ್ ಅವರಿಂದ ಈ ಹೆಸರು ಬಂದಿದೆ. ಬೇತಿಯಾ ರಾಜ್ ನ ಕೊನೆಯ ರಾಜ ಹರೇಂದ್ರ ಕಿಶೋರ್ ಸಿಂಗ್ 1893 ರಲ್ಲಿ ನಿಧನರಾದರು. ಆದರೆ ಇವರಿಗೆ ಯಾವುದೇ ಉತ್ತರಾಧಿಕಾರಿ ಇರಲಿಲ್ಲ. ಹೀಗಾಗಿ ಎಸ್ಟೇಟ್ ಅವರ ಮೊದಲ ಹೆಂಡತಿಗೆ ವರ್ಗಾಯಿಸಲ್ಪಟ್ಟಿತು. ಇವರು ಕೂಡ 1896 ರಲ್ಲಿ ನಿಧನರಾದರು. ನಂತರ ಎಸ್ಟೇಟ್ನ ಅಧಿಕಾರ ಅವರ ಎರಡನೇ ಪತ್ನಿ ಮಹಾರಾಣಿ ಜಾನಕಿ ಕುವಾರ್ ಅವರಿಗೆ ವರ್ಗಾವಣೆಯಾಗಿತ್ತು. ಆದರೆ 1897 ರಲ್ಲಿ ಈ ಎಸ್ಟೇಟ್ನ ಆಡಳಿತವನ್ನು ಕೋರ್ಟ್ ಆಫ್ ವಾರ್ಡ್ಸ್ಗೆ ವರ್ಗಾಯಿಸಲಾಯಿತು.
ಕೋರ್ಟ್ ಆಫ್ ವಾರ್ಡ್ಸ್ ಎಂಬುದು 1540 ರಿಂದ 1660 ರವರೆಗೆ ಇಂಗ್ಲೆಂಡ್ ನಲ್ಲಿ ಅಸ್ತಿತ್ವದಲ್ಲಿದ್ದ ಕೋರ್ಟ್ ಆಫ್ ವಾರ್ಡ್ಸ್ ಅಂಡ್ ಲಿವರಿಸ್ ನಂತೆಯೇ ಈಸ್ಟ್ ಇಂಡಿಯಾ ಕಂಪನಿಯು ರಚಿಸಿದ ಕಾನೂನು ಸಂಸ್ಥೆಯಾಗಿತ್ತು. ಉತ್ತರಾಧಿಕಾರಿಯು ಅಪ್ರಾಪ್ತ ವಯಸ್ಕನೆಂದು ಪರಿಗಣಿಸಲ್ಪಟ್ಟಾಗ ಮತ್ತು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅಸಮರ್ಥನಾಗಿದ್ದಾಗ ವಾರಸುದಾರರು ಮತ್ತು ಅವರ ಎಸ್ಟೇಟ್ ಗಳನ್ನು ರಕ್ಷಿಸುವುದು ಇದರ ಉದ್ದೇಶವಾಗಿತ್ತು. ಉತ್ತರಾಧಿಕಾರಿಯ ಪರವಾಗಿ ಎಸ್ಟೇಟ್ ಗಳನ್ನು ನಿರ್ವಹಿಸುವುದು, ಅವರು ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ಸ್ವತಂತ್ರವಾಗಿ ನಿರ್ವಹಿಸಲು ಅಗತ್ಯವಾದ ಕೌಶಲ್ಯಗಳನ್ನು ಪಡೆದಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿತ್ತು. ಸಾಮಾನ್ಯ ಸಂದರ್ಭಗಳಲ್ಲಿ ಎಸ್ಟೇಟ್ ಗಳ ನಿಯಂತ್ರಣವನ್ನು ಉತ್ತರಾಧಿಕಾರಿಗೆ ಮರಳಿಸಲಾಗುತ್ತದೆ.
ಜಮೀನನ್ನು ಕೋರ್ಟ್ ಆಫ್ ವಾರ್ಡ್ಸ್ಗೆ ವರ್ಗಾಯಿಸಲ್ಪಟ್ಟಿದ್ದರಿಂದ ಅದನ್ನು ಯಾರಿಗೂ ಮಾರಾಟ ಮಾಡಲು ಅಥವಾ ವರ್ಗಾಯಿಸಲು ಅವಕಾಶವಿರಲಿಲ್ಲ. 1954 ರಲ್ಲಿ ಮಹಾರಾಣಿ ಜಾನಕಿ ಕುವಾರ್ ಅವರ ಮರಣದ ನಂತರ, ಬಿಹಾರ ಸರ್ಕಾರವು ಎಸ್ಟೇಟ್ ಅನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಇತ್ತೀಚೆಗೆ, ಬಿಹಾರ ಸರ್ಕಾರವು ಬೇತಿಯಾ ರಾಜ್ ಹೊಂದಿದ್ದ ಭೂಮಿಯನ್ನು ಗುರುತಿಸಲು ಅವಕಾಶ ನೀಡಿತ್ತು. ಈ ಭೂಮಿಯ ಪ್ರಸ್ತುತ ಮೌಲ್ಯ ಸುಮಾರು 8,000 ಕೋಟಿ ರೂ. ಎನ್ನಲಾಗಿದೆ.
ನವೆಂಬರ್ 29 ರಿಂದ ಕೊನೆಗೊಳ್ಳುವ ಪ್ರಸಕ್ತ ಅಧಿವೇಶನದಲ್ಲಿ ರಾಜ್ಯದ ವಿಧಾನ ಪರಿಷತ್ತಿನಲ್ಲಿ ಕರಡು ಕಾನೂನನ್ನು ಪರಿಚಯಿಸಲು ಸರ್ಕಾರ ಯೋಜಿಸಿದೆ. ಸರ್ಕಾರಿ ಅಧಿಕಾರಿಯೊಬ್ಬರ ಪ್ರಕಾರ, ಈ ಶಾಸನವು ಜಾರಿಗೆ ಬಂದ ನಂತರ, ಬೇತಿಯಾ ಭೂಮಿಯಲ್ಲಿ ಶಾಲೆ, ಕಾಲೇಜು, ಆಸ್ಪತ್ರೆ ಮತ್ತು ಸಮುದಾಯ ಭವನಗಳನ್ನು ನಿರ್ಮಿಸಲು ರಾಜ್ಯದ ಕಂದಾಯ ಇಲಾಖೆ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಅಧಿಕಾರ ಸಿಗಲಿದೆ. ಅಲ್ಲದೆ ಭೂ ಬ್ಯಾಂಕುಗಳನ್ನು ರಚಿಸುವ ಸರ್ಕಾರದ ಪ್ರಯತ್ನಗಳಿಗೆ ಈ ಕಾನೂನು ಉಪಯುಕ್ತವಾಗಲಿದೆ.
ಇದನ್ನೂ ಓದಿ : ಕೊಲೆ ಕೇಸ್: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 104 ವರ್ಷದ ವೃದ್ಧನಿಗೆ ಮಧ್ಯಂತರ ಜಾಮೀನು