ಪಾಟ್ನಾ(ಬಿಹಾರ): ಲೋಕಸಭಾ ಚುನಾವಣೆಯ ಮತದಾನದ ದಿನಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ಬಿಹಾರ ಸರ್ಕಾರ ವೇತನ ಸಹಿತ ರಜೆ ಘೋಷಣೆ ಮಾಡಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ರಾಜ್ಯದ 40 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19 ಮತ್ತು ಜೂನ್ 1ರ ನಡುವೆ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅಜಿಯೋನ್ (ಭೋಜ್‌ಪುರ) ವಿಧಾನಸಭಾ ಕ್ಷೇತ್ರಕ್ಕೆ ಜೂನ್ 1ರಂದು ಉಪ ಚುನಾವಣೆ ನಿಗದಿಯಾಗಿದೆ.
ಸರ್ಕಾರ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಕಚೇರಿಗಳು ಮತ್ತು ಕೆಲಸದ ಸ್ಥಳಗಳಲ್ಲಿ ರಜೆ ಇರುತ್ತದೆ. ಏಪ್ರಿಲ್ 19, ಏಪ್ರಿಲ್ 26, ಮೇ 7, ಮೇ 13, ಮೇ 20, ಮೇ 25 ಮತ್ತು ಜೂನ್ 1ರಂದು ಚುನಾವಣೆ ನಡೆಯಲಿದೆ. 1951ರ ಜನತಾ ಪ್ರಾತಿನಿಧ್ಯ ಕಾಯಿದೆಯ ಸೆಕ್ಷನ್ 135 (ಬಿ) ಪ್ರಕಾರ, ಮತದಾನದ ದಿನಗಳಂದು ನೌಕರರಿಗೆ ವೇತನ ಸಹಿತ ರಜೆ ನೀಡಲು ಅವಕಾಶವಿದೆ.
ಚುನಾವಣೆಯ ಮಾಹಿತಿ: ಲೋಕಸಭೆ ಚುನಾವಣೆ ಮತ್ತು ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಗಳು ಹಾಗೂ ವಿವಿಧ ರಾಜ್ಯಗಳ 26 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಗಳಿಗೆ ಕೇಂದ್ರ ಚುನಾವಣಾ ಆಯೋಗ ಸಂಪೂರ್ಣ ವೇಳಾಪಟ್ಟಿಯನ್ನು ಮಾರ್ಚ್ 16ರಂದು ಪ್ರಕಟಿಸಿದೆ. ದೇಶಾದ್ಯಂತ 543 ಲೋಕಸಭೆ ಕ್ಷೇತ್ರಗಳಿಗೆ ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದೆ. ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ಜರುಗಲಿದೆ. ಎಲ್ಲ ಚುನಾವಣೆಗಳ ಮತ ಎಣಿಕೆ ಜೂನ್ 4ರಂದು ನಡೆಯಲಿದೆ.
ಏ.26ರಂದು ಕರ್ನಾಟಕದ ಮೈಸೂರು ಭಾಗದಲ್ಲಿ ಮೊದಲ ಹಂತದ ಚುನಾವಣೆ ಜರುಗಲಿದೆ. ಮೇ 7ರಂದು ದೇಶದಲ್ಲಿ ಮೂರನೇ ಹಂತದ ಚುನಾವಣೆ ಇದೆ. ಆದರೆ, ಅದೇ ದಿನ ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಎರಡನೇ ಹಂತದ ಮತದಾನ ಜರುಗಲಿದೆ.
ಏಪ್ರಿಲ್ 19ರಂದು ಮೊದಲ ಹಂತದಲ್ಲಿ 21 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣೆ, ಏಪ್ರಿಲ್ 26ರಂದು ಎರಡನೇ ಹಂತದಲ್ಲಿ 13 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣೆ ನಡೆಯಲಿದೆ. ಮೇ 7ರಂದು ಮೂರನೇ ಹಂತದಲ್ಲಿ 12 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಮೇ 13 ರಂದು ನಾಲ್ಕನೇ ಹಂತದಲ್ಲಿ 10 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಚುನಾವಣೆ ಜರುಗಲಿದೆ. ಮೇ 20ರಂದು ಐದನೇ ಹಂತದಲ್ಲಿ 8 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಆರನೇ ಹಂತದಲ್ಲಿ 7 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಏಳನೇ ಹಂತದಲ್ಲಿ 8 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ನಿಗದಿಯಾಗಿದೆ.
ಇದನ್ನೂ ಓದಿ: ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಅಡಿ 96.55 ರಷ್ಟು ಕ್ಲೈಮ್‌ಗಳು ಇತ್ಯರ್ಥ - PM Suraksha Bima Yojana