ಪಾಟ್ನಾ (ಬಿಹಾರ): ಹಣೆಬರಹ ಗಟ್ಟಿಯಿದ್ದರೆ ಯಮನು ಕೂಡ ಏನೂ ಮಾಡಲಾರ ಎಂಬ ಮಾತು ಇಲ್ಲಿ ಸತ್ಯವಾಗಿದೆ. ಬಿಹಾರದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು. ಅಂತ್ಯಸಂಸ್ಕಾರಕ್ಕಾಗಿ ಆಕೆಯ ದೇಹವನ್ನು ತರುತ್ತಿದ್ದಾಗ ದಿಢೀರನೆ ಬದುಕಿದ್ದಾಳೆ. ಇದು ಕುಟುಂಬಸ್ಥರಲ್ಲಿ ಅಚ್ಚರಿಯ ಜೊತೆಗೆ ಭಯವನ್ನು ಸಹ ಉಂಟು ಮಾಡಿದೆ. ಬಳಿಕ ಆಕೆ ನಿಜವಾಗಿಯೂ ಬದುಕಿದ್ದಾಳೆ ಎಂಬುದು ಖಚಿತವಾಗಿದೆ.
ಈ ವಿದ್ಯಮಾನ ಬಿಹಾರದಲ್ಲಿ ಸದ್ದು ಮಾಡಿದೆ. ವೈದ್ಯರಿಂದ ಮೃತಪಟ್ಟಿದ್ದಾಳೆ ಎಂದು ಘೋಷಿತವಾಗಿ, ಮೃತದೇಹವನ್ನು ಛತ್ತೀಸ್ಗಢದಿಂದ ಬಿಹಾರಕ್ಕೆ ತರುವಾಗ 18 ಗಂಟೆಗಳ ಪ್ರಯಾಣದ ಬಳಿಕ ಆಕೆ ಏಕಾಏಕಿ ಮಾರ್ಗಮಧ್ಯೆ ಜೀವ ಪಡೆದುಕೊಂಡಿದ್ದಾಳೆ.
ಘಟನೆಯ ವಿವರ: ರಾಮವತಿ ದೇವಿ ಮರುಜನ್ಮ ಪಡೆದ ಮಹಿಳೆ. ಈಕೆ ಬಿಹಾರದ ಬೇಗುಸರಾಯ್‌ನ ನೀಮಾ ಚಂದ್‌ಪುರ ಗ್ರಾಮದವರು. ತನ್ನ ಇಬ್ಬರು ಮಕ್ಕಳಾದ ಮುರಾರಿ ಶಾವೋ ಮತ್ತು ಘನಶ್ಯಾಮ್ ಶಾವೋ ಜೊತೆ ಇತ್ತೀಚೆಗೆ ಛತ್ತೀಸ್‌ಗಢಕ್ಕೆ ತೆರಳಿದ್ದರು. ಫೆಬ್ರವರಿ 11 ರಂದು ರಾಮವತಿಗೆ ಉಸಿರಾಟದ ಸಮಸ್ಯೆ ಉಂಟಾಗಿತ್ತು. ತಕ್ಷಣವೇ ಆಕೆಯನ್ನು ಕೊರ್ವಾ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ವೇಳೆ ಆಕೆ ಮೃತಪಟ್ಟಿರುವುದಾಗಿ ಅಲ್ಲಿನ ವೈದ್ಯರು ಘೋಷಿಸಿದ್ದರು.
ಪುತ್ರರಿಬ್ಬರು ತಾಯಿಯನ್ನು ತಮ್ಮೂರಿಗೆ ತಂದು ಅಂತ್ಯಸಂಸ್ಕಾರ ಮಾಡಲು ಬಯಸಿ, ಅದರಂತೆ ಬಿಹಾರಕ್ಕೆ ಶವವನ್ನು ವಾಪಸ್ ತರುತ್ತಿದ್ದರು. ಫೆಬ್ರವರಿ 12 ರಂದು ಖಾಸಗಿ ವಾಹನದಲ್ಲಿ ದೇಹವನ್ನು ಬೇಗುಸರೈಗೆ ತರಲಾಗುತ್ತಿತ್ತು. ಛತ್ತೀಸ್ಗಢದಿಂದ 18 ಗಂಟೆಗಳ ಪ್ರಯಾಣದ ನಂತರ ಬಿಹಾರದ ಔರಂಗಾಬಾದ್ ತಲುಪಿದಾಗ ಅಚ್ಚರಿ ಎಂಬಂತೆ ರಾಮವತಿ ಇದ್ದಕ್ಕಿದ್ದಂತೆ ಎದ್ದು ಕುಳಿತಿದ್ದಾರೆ.
ಇದನ್ನು ಕಂಡು ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ. ರಸ್ತೆ ಬದಿ ವಾಹನ ನಿಲ್ಲಿಸಿ ಆಕೆಯನ್ನು ಭಯದಿಂದಲೇ ಪರೀಕ್ಷಿಸಿದ್ದಾರೆ. ಮಹಿಳೆ ಜೀವಂತವಾಗಿರುವುದನ್ನು ಕಂಡುಕೊಂಡ ಅವರು ಬೇಗುಸರಾಯ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಆಕೆಯನ್ನು ವೆಂಟಿಲೇಟರ್‌ನಲ್ಲಿರಿಸಿ ಚಿಕಿತ್ಸೆ ನೀಡುತ್ತಿದ್ದಾರೆ.
ಸಿಪಿಆರ್ ಎಫೆಕ್ಟ್: ಮೃತದೇಹವನ್ನು ಅಂತ್ಯಸಂಸ್ಕಾರಕ್ಕಾಗಿ ವಾಹನದಲ್ಲಿ ಕರೆತರುತ್ತಿದ್ದಾಗ ಕಾರ್ಡಿಯೋಪಲ್ಮನರಿ ರೆಸಸಿಟೇಶನ್ (ಸಿಪಿಆರ್) ಆಗಿ ಮಹಿಳೆ ಬದುಕಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಅಂದರೆ, ವಾಹನ ಅಲುಗಾಡಿದಾಗ ದೇಹ ಕುಲುಕಿ ಮಹಿಳೆಗೆ ಉಸಿರಾಟ ಮರು ಆರಂಭವಾಗಿದೆ. ಹೃದಯಸ್ತಂಭನ ಉಂಟಾದಾಗ ಸಿಪಿಆರ್ ಮಾಡಲಾಗುತ್ತದೆ. ಅದಿಲ್ಲಿ ಸಹಜವಾಗಿ ಆಗಿದೆ ಎಂದಿದ್ದಾರೆ.
ಕಾರ್ಡಿಯೋಪಲ್ಮನರಿ ರೆಸಸಿಟೇಶನ್ (ಸಿಪಿಆರ್) ಅಂದರೆ, ಉಸಿರು ನಿಂತಾಗ ಎದೆಯನ್ನು ಕೈಗಳಿಂದ ಅದುಮುವುದು, ಉಸಿರು ನೀಡುವುದು, ಜೋರಾಗಿ ಉಸಿರಾಡುವ ಪ್ರಕ್ರಿಯೆ ಇದಾಗಿದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ: ವಿವಾದ ಎಬ್ಬಿಸಿದ 'ಅಕ್ಬರ್'-'ಸೀತಾ' ಸಿಂಹಗಳ ಮರುನಾಮಕರಣ