ಪಾಟ್ನಾ(ಬಿಹಾರ): ದೇಶದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಬೆಂಗಳೂರು ಟೆಕ್ಕಿ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಇದರ ಮಧ್ಯೆ, ಉತ್ತರ ಪ್ರದೇಶದಲ್ಲಿ ಎಂಜಿನಿಯರ್ನ ಅಂತ್ಯಸಂಸ್ಕಾರ ಬುಧವಾರ ನಡೆದಿದೆ. ಆತನ ಸೂಚನೆಯಂತೆ ಕುಟುಂಬವು ನ್ಯಾಯಕ್ಕಾಗಿ ಚಿತಾಭಸ್ಮ ಹಿಡಿದು ಬಿಹಾರದಲ್ಲಿರುವ ಕಿರುಕುಳ ನೀಡಿದ ಆರೋಪಿತ ಪತ್ನಿಯ ಮನೆಗೆ ತೆರಳಿದೆ.
ಕುಸಿದು ಬಿದ್ದ ತಾಯಿ: "ನನ್ನ ಮಗುವಿಗೆ ಸಾಕಷ್ಟು ಚಿತ್ರಹಿಂಸೆ ನೀಡಲಾಗಿದೆ. ಆತ ವಿಪರೀತ ಕಿರುಕುಳ ಅನುಭವಿಸಿದ್ದಾನೆ. ಮಗನಿಗೆ ನ್ಯಾಯ ಕೊಡಿಸಿ. ನನಗೆ ವೃದ್ಧಾಪ್ಯದ ಆಸರೆ ಇಲ್ಲವಾಗಿದೆ. ಕಿರುಕುಳ ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಬಿಕ್ಕಿ ಬಿಕ್ಕಿ ಅತ್ತು ಅತುಲ್ ಸುಭಾಷ್ ಅವರ ತಾಯಿ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದರು.
"ಚಿತ್ರಹಿಂಸೆ ಕೂಡ ಕೊಲೆಯಾಗಿದೆ. ನಮಗೆ ನ್ಯಾಯ ಬೇಕು. ನನ್ನ ಮಗನಿಗೆ ನ್ಯಾಯ ಸಿಗಬೇಕು. ಸರ್ಕಾರದಿಂದ ಈವರೆಗೂ ಯಾವುದೇ ಭರವಸೆ ಸಿಕ್ಕಿಲ್ಲ. ಇದು ಆತ್ಮಹತ್ಯೆಯಲ್ಲ, ಕೊಲೆ. ಮಗನಿಗೆ ಮಾನಸಿಕ ಕಿರುಕುಳ ನೀಡಿ ಹತ್ಯೆ ಮಾಡಲಾಗಿದೆ" ಎಂದು ತಂದೆ ಪವನ್ ಕುಮಾರ್ ಆರೋಪಿಸಿದರು.
ಡೆತ್ನೋಟ್ನಲ್ಲಿ ಕಿರುಕುಳ, ನ್ಯಾಯದ ನಿರೀಕ್ಷೆ: ಮೂಲತಃ ಉತ್ತರ ಪ್ರದೇಶದ ಟೆಕ್ಕಿ ಅತುಲ್ ಸುಭಾಷ್ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದರು. ತನಗೆ ಪತ್ನಿ ಮತ್ತು ಆಕೆಯ ಕುಟುಂಬಸ್ಥರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಡಿಸೆಂಬರ್ 9ರಂದು ಮಾರತ್‌ಹಳ್ಳಿಯ ಮಂಜುನಾಥ ಲೇಔಟ್‌ನಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸುಮಾರು 24 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದರು.
ಡೆತ್ನೋಟ್ನಲ್ಲಿ ಅವರು ಬರೆದಿರುವಂತೆ, "ನನಗೆ ನ್ಯಾಯ ಸಿಗಬೇಕು. ಮಹಿಳಾ ಕಾನೂನಿನ ಹೆಸರಿನಲ್ಲಿ ಪುರುಷರನ್ನು ಹಿಂಸಿಸಲಾಗುತ್ತಿದೆ. ನ್ಯಾಯ ನೀಡಬೇಕಾದ ನ್ಯಾಯಾಧೀಶರೇ 5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ. ನನ್ನ ಸಾವಿನ ಬಳಿಕ ಪತ್ನಿ ಶವಸಂಸ್ಕಾರಕ್ಕೆ ಬರಬಾರದು. ಪುತ್ರನ ಬಳಿಯೂ ಆಕೆ ಹೋಗಬಾರದು. ಆಕೆ ಮತ್ತು ಅವರ ಕುಟುಂಬದವರಿಗೆ ಶಿಕ್ಷೆಯಾಗಬೇಕು. ಅಲ್ಲಿಯವರೆಗೂ ನನ್ನ ಚಿತಾಭಸ್ಮವನ್ನು ವಿಸರ್ಜನೆ ಮಾಡಬೇಡಿ. ಹಾಗೊಂದು ವೇಳೆ ನ್ಯಾಯ ಸಿಗದೇ ಹೋದಲ್ಲಿ ಚಿತಾಭಸ್ಮವನ್ನು ನ್ಯಾಯಾಲಯದ ಮುಂಭಾಗದ ಗಟಾರಕ್ಕೆ ಎಸೆಯಿರಿ" ಎಂದು ತಿಳಿಸಿದ್ದಾರೆ.
ಸುಭಾಷ್ ಸಾವಿನ ನಂತರ ಅವರ ಪತ್ನಿ ನಿಕಿತಾ ಸಿಂಘಾನಿಯಾ, ಆಕೆಯ ತಾಯಿ ನಿಶಾ, ತಂದೆ ಅನುರಾಗ್ ಮತ್ತು ಸಂಬಂಧಿ ಸುಶೀಲ್ ವಿರುದ್ಧ ಮಂಗಳವಾರ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಪ್ರದೇಶದಕ್ಕೆ ತೆರಳಿದ ಪೊಲೀಸ್ ತಂಡ: ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಿರುವ ಮಾರತ್ಹಳ್ಳಿ ಠಾಣೆ ಪೊಲೀಸರ ತಂಡ ಆರೋಪಿಗಳ ವಿಚಾರಣೆ ನಡೆಸಲು ಉತ್ತರ ಪ್ರದೇಶಕ್ಕೆ ತೆರಳಿದೆ. ಪ್ರಕರಣದ ತನಿಖಾಧಿಕಾರಿ ಆಗಿರುವ ಪಿಎಸ್ಐ ಜ್ಞಾನದೇವ್ ನೇತೃತ್ವದ ತಂಡ ಜೌನ್ಪುರಕ್ಕೆ ತಲುಪಿದೆ. ಅತುಲ್ ಕುಟುಂಬ ಮತ್ತು ಪತ್ನಿಯ ಕುಟುಂಬವನ್ನು ವಿಚಾರಣೆ ನಡೆಸುತ್ತಿದೆ.
ಇದನ್ನೂ ಓದಿ: ಟೆಕ್ಕಿ ಆತ್ಮಹತ್ಯೆ ಪ್ರಕರಣ: ಉತ್ತರ ಪ್ರದೇಶಕ್ಕೆ ತೆರಳಿದ ಬೆಂಗಳೂರು ಪೊಲೀಸರ ತಂಡ