ನವದೆಹಲಿ: ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳಾದ ಅಬ್ದುಲ್ ಮಥೀನ್ ತಾಹಾ (30) ಮತ್ತು ಮುಸ್ಸಾವಿರ್ ಹುಸೇನ್ ಶಾಜೆಬ್ನನ್ನು (30) ಶುಕ್ರವಾರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿ, ಕೋಲ್ಕತ್ತಾದ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಇಬ್ಬರೂ ಭಯೋತ್ಪಾದಕರನ್ನು ತನಿಖೆಗಾಗಿ ರಾಜ್ಯಕ್ಕೆ ಸಾಗಿಸಲು ಮೂರು ದಿನಗಳ ಕಾಲ ತನಿಖಾ ತಂಡದ ಕಸ್ಟಡಿಗೆ (ಟ್ರಾನ್ಸಿಟ್ ರಿಮಾಂಡ್) ನೀಡಿ ಕೋರ್ಟ್ ಆದೇಶಿಸಿದೆ.
ಮಾರ್ಚ್ 20ರಂದು ಕೆಫೆ ಸ್ಫೋಟದ ಅಬ್ದುಲ್ ಮಥೀನ್ ತಾಹಾ ಮತ್ತು ಮುಸ್ಸಾವಿರ್ ಹುಸೇನ್ ಶಾಜೆಬ್ ತಲೆಮರೆಸಿಕೊಂಡಿದ್ದರು. ಮುಸ್ಸಾವಿರ್ ಹುಸೇನ್ ಕೆಫೆಯಲ್ಲಿ ಐಇಡಿ ಇರಿಸಿದ ವ್ಯಕ್ತಿ ಎಂದು ಎನ್‌ಐಎ ಗುರುತಿಸಿದೆ. ಮತ್ತೋರ್ವ ಅಬ್ದುಲ್ ಮಥೀನ್ ತಾಹಾ ಈ ಪಿತೂರಿಯ ಹಿಂದಿನ ರೂವಾರಿ ಮತ್ತು ಸ್ಫೋಟವನ್ನು ಯೋಜಿಸಿ ಕಾರ್ಯಗತಗೊಳಿಸಿದ್ದನು ಎಂದು ರಾಷ್ಟ್ರೀಯ ತನಿಖಾ ದಳ ತಿಳಿಸಿದೆ.
ಅಬ್ದುಲ್ ಮಥೀನ್ ತಾನು ಮತ್ತು ಸಹ ಆರೋಪಿಯು ಬಂಧನದಿಂದ ತಪ್ಪಿಸಿಕೊಳ್ಳುವ ಯೋಜನೆಯನ್ನು ರೂಪಿಸಿ, ವಾರಗಳ ಕಾಲ ಅದರಲ್ಲಿ ಯಶಸ್ವಿ ಕೂಡ ಆಗಿದ್ದ. ಇವರಿಬ್ಬರು ಹಾಗೂ ಮತ್ತೊಬ್ಬ ಸಹ ಆರೋಪಿ ಮಾಜ್ ಮುನೀರ್ ಅಹ್ಮದ್ ಜತೆಗೆ ಈ ಹಿಂದೆ ಭಯೋತ್ಪಾದನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಇಬ್ಬರು ಆರೋಪಿಗಳನ್ನು ಕೋಲ್ಕತ್ತಾದ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆ ನೀಡಿದೆ.
ಮಾರ್ಚ್ 3ರಂದು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದ ಎನ್‌ಐಎ, ಈ ಇಬ್ಬರು ಆರೋಪಿಗಳಾದ ಮಾಜ್ ಮುನೀರ್ ಅಹ್ಮದ್ ಮತ್ತು ಮುಝಾಮಿಲ್ ಶರೀಫ್ನನ್ನು ಸ್ಫೋಟದಲ್ಲಿ ಪ್ರಮುಖ ಪಾತ್ರ ವಹಿಸಿದ ಭಯೋತ್ಪಾದಕರು ಎಂದು ಗುರುತಿಸಿತ್ತು. ಮುಝಾಮಿಲ್ ಶರೀಫ್ ಐಇಡಿ ಸ್ಫೋಟವನ್ನು ನಡೆಸುವ ಇತರ ಆರೋಪಿಗಳಿಗೆ ಸ್ಫೋಟಕ ಸಾಮಗ್ರಿ ಪೂರೈಸುವಲ್ಲಿ ತೊಡಗಿಸಿಕೊಂಡಿದ್ದ ಎಂದು ತನಿಖಾ ಸಂಸ್ಥೆ ತಿಳಿಸಿದೆ.
ಕೊನೆಗೂ, ಶುಕ್ರವಾರ ಭಯೋತ್ಪಾದನಾ ನಿಗ್ರಹ ದಳವು ಇಬ್ಬರು ಭಯೋತ್ಪಾದಕರನ್ನು ಕೋಲ್ಕತ್ತಾದಲ್ಲಿ ಪತ್ತೆಹಚ್ಚಿದೆ. ಕೇಂದ್ರದ ವಿವಿಧ ಸಂಸ್ಥೆಗಳು ಮತ್ತು ಕರ್ನಾಟಕ, ಪಶ್ಚಿಮ ಬಂಗಾಳ, ತಮಿಳುನಾಡು, ಉತ್ತರ ಪ್ರದೇಶ, ದೆಹಲಿ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯ ಪೊಲೀಸ್ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಎನ್‌ಐಎ ಮಾಹಿತಿ ನೀಡಿದೆ.
ಈ ಭಯೋತ್ಪಾದಕರು ತಮ್ಮ ಗುರುತು ಬದಲಾಯಿಸಿಕೊಂಡು ಕೋಲ್ಕತ್ತಾದ ಬಳಿಯ ಲಾಡ್ಜ್‌ನಲ್ಲಿ ತಂಗಿದ್ದರು. ಆರೋಪಿಗಳ ಬಂಧನಕ್ಕೆ ಪಶ್ಚಿಮ ಬಂಗಾಳ ಪೊಲೀಸರನ್ನು ಸಂಪರ್ಕಿಸಿದ ತಕ್ಷಣವೇ, ಅವರು ಸಹ ಸ್ಪಂದಿಸಿದರು. ಇದು ಶೋಧ ಕಾರ್ಯಾಚರಣೆಯ ಯಶಸ್ವಿ ಮತ್ತು ಭಯೋತ್ಪಾದಕರ ಬಂಧನಕ್ಕೆ ಕಾರಣವಾಯಿತು. ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪ್ರಕಟಣೆಯಲ್ಲಿ ತನಿಖಾ ಸಂಸ್ಥೆ ವಿವರಿಸಿದೆ.
ನಾಲ್ವರ ಹೆಸರು ಉಲ್ಲೇಖಿಸಿದ ಎನ್‌ಐಎ: ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬರ್, ಸಂಚಿನ ರೂವಾರಿ ಸೇರಿದಂತೆ ಒಟ್ಟಾರೆ ನಾಲ್ವರ ಹೆಸರನ್ನು ಎನ್‌ಐಎ ತನ್ನ ಇಂದಿನ ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ. ಕೆಫೆಯಲ್ಲಿ ಐಇಡಿ ಇರಿಸಿದವನು ಮುಸ್ಸಾವಿರ್ ಹುಸೇನ್ ಆಗಿದ್ದರೆ, ಈ ಪಿತೂರಿಯ ಹಿಂದಿನ ರೂವಾರಿ ಅಬ್ದುಲ್ ಮಥೀನ್ ತಾಹಾ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ. ಮುಝಾಮಿಲ್ ಶರೀಫ್ ಎಂಬುವ ಸ್ಫೋಟಕ ಸಾಮಗ್ರಿ ಪೂರೈಸುವಲ್ಲಿ ತೊಡಗಿಸಿಕೊಂಡಿದ್ದ ಎಂದು ಈ ಹಿಂದೆಯೇ ಗುರುತಿಸಲಾಗಿತ್ತು.
ಅಲ್ಲದೇ, ಮುಸ್ಸಾವಿರ್, ಮಥೀನ್ ಇಬ್ಬರೂ ಶಿವಮೊಗ್ಗದ ತೀರ್ಥಹಳ್ಳಿಯವರು ಹಾಗೂ ಮುಝಾಮಿಲ್ ಚಿಕ್ಕಮಗಳೂರಿನ ಕಳಸಾದ ಮೂಲದವನು ಎಂದು ತನಿಖಾ ದಳ ಬಹಿರಂಗ ಪಡಿಸಿತ್ತು. ಇಂದು ಈ ಮೂವರ ಜೊತೆಗೆ ಮಾಜ್ ಮುನೀರ್ ಅಹ್ಮದ್ ಎಂಬ ಮತ್ತೊಬ್ಬನ ಹೆಸರನ್ನೂ ಬಹಿರಂಗಪಡಿಸಿದೆ. ಇವನು ಈ ಹಿಂದೆ ಭಯೋತ್ಪಾದನಾ ಪ್ರಕರಣಗಳಲ್ಲೂ ಭಾಗಿಯಾಗಿದ್ದ ಎಂದು ಮಾಹಿತಿ ನೀಡಿದೆ.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಕೊನೆಗೂ ಕೋಲ್ಕತ್ತಾದಲ್ಲಿ ಇಬ್ಬರು ಮಾಸ್ಟರ್ ಮೈಂಡ್ಗಳ ಬಂಧನ