ಕೋಲ್ಕತ್ತಾ(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದಲ್ಲಿ ರಾಜಭವನ ಮತ್ತು ಸರ್ಕಾರದ ನಡುವಿನ ಸಂಘರ್ಷ ಮತ್ತೊಂದು ಹಂತ ತಲುಪಿದೆ. ಇದೀಗ ಸರ್ಕಾರಿ ಅನುದಾನಿತ ವಿಶ್ವವಿದ್ಯಾಲಯಗಳ ಬಗ್ಗೆ ನ್ಯಾಯಾಂಗ ತನಿಖೆಗೆ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಆದೇಶಿಸಿದ್ದಾರೆ. ವಿಶ್ವವಿದ್ಯಾಲಯಗಳ ಬಗ್ಗೆ ವಿವಿಧ ರೀತಿಯ ಭ್ರಷ್ಟಾಚಾರದ ದೂರುಗಳನ್ನು ಸ್ವೀಕರಿಸಿರುವ ಸಂಬಂಧ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ರಾಜಭವನದ ಮೂಲಗಳು ತಿಳಿಸಿವೆ. ನಿವೃತ್ತ ನ್ಯಾಯಾಧೀಶರಿಗೆ ತನಿಖೆಯ ಜವಾಬ್ದಾರಿ ವಹಿಸಲಾಗಿದೆ ಎಂದು ವರದಿಯಾಗಿದೆ.
ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರೂ ಆಗಿರುವ ರಾಜ್ಯಪಾಲರು ವಿಶ್ವವಿದ್ಯಾಲಯಗಳ ಕುಲಾಧಿಪತಿಗಳು ಸಹ ಆಗಿದ್ದಾರೆ. ರಾಜ್ಯಪಾಲರ ಈ ನಿರ್ಧಾರವನ್ನು ಬಗ್ಗೆ ಶಿಕ್ಷಣ ಸಚಿವ ಬ್ರತ್ಯಾ ಬಸು ಟೀಕಿಸಿದ್ದಾರೆ. ''ಚುನಾವಣಾ ಪ್ರಚಾರ ಮತ್ತು ರಾಜಕೀಯ ಉದ್ದೇಶಗಳಿಗಾಗಿ ವಿಶ್ವವಿದ್ಯಾಲಯ ಕ್ಯಾಂಪಸ್‌ಗಳ ಭ್ರಷ್ಟಾಚಾರ, ಹಿಂಸಾಚಾರ ಮತ್ತು ದುರುಪಯೋಗದ ಬಗ್ಗೆ ಕುಲಾಧಿಪತಿಗಳು ಮತ್ತು ರಾಜ್ಯಪಾಲರು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ ಎಂಬುದು ಅಚ್ಚರಿ ತಂದಿದೆ. ಈಗ, ಸರ್ಕಾರವು ವರ್ಚುವಲ್ ಸಾಮಾಜಿಕ ಮಾಧ್ಯಮಗಳಾದ 'ಎಕ್ಸ್', 'ಫೇಸ್ ಬುಕ್' ಮೂಲಕ ನಡೆಯುತ್ತಿಲ್ಲ ಎಂದು ನಮಗೆಲ್ಲರಿಗೂ ತಿಳಿದಿದೆ. ಈ ವಿಚಾರಣೆಯ ಆದೇಶ ಸರ್ಕಾರಕ್ಕೆ ಹಾಗೂ ಮಾಧ್ಯಮಗಳಿಗೆ ತಲುಪಬೇಕಿದೆ'' ಎಂದು ಹೇಳಿದ್ದಾರೆ.
ಅಲ್ಲದೇ, ''ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ, 'ಕುಲಾಧಿಪತಿಗಳು ಮತ್ತು ರಾಜ್ಯಪಾಲರು' ವಿಚಾರಣೆಗೆ ಆದೇಶಿಸಿದ್ದಾರೆ ಎಂಬುದು! ಈಗ ಪ್ರಶ್ನೆಯೆಂದರೆ ರಾಜ್ಯಪಾಲರು ಮಾಡಬಹುದಾದ ಅಧಿಕಾರವನ್ನು ಕುಲಪತಿಗಳು ಚಲಾಯಿಸಬಹುದೇ?, ಗೊಂದಲವು ಸರ್ವೋಚ್ಚವಾಗಿ ಆಳುತ್ತದೆ'' ಎಂದು ಸಚಿವ ಬ್ರಾತ್ಯಾ ತನ್ನ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಜ್ಯಪಾಲರ ಈ ನಿರ್ಧಾರ ಕುರಿತು ತೃಣಮೂಲ ಕಾಂಗ್ರೆಸ್ ಪಕ್ಷದ ವಕ್ತಾರ ಅರೂಪ್ ಚಕ್ರವರ್ತಿ ಪ್ರತಿಕ್ರಿಯಿಸಿ, ''ಭಾರತದಲ್ಲಿ ರಾಜಪ್ರಭುತ್ವ ಕೆಲಸ ಮಾಡುವುದಿಲ್ಲ. ಪ್ರಜಾಪ್ರಭುತ್ವ ಕೆಲಸ ಮಾಡುತ್ತದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ರಾಜ್ಯಪಾಲರ ಸ್ಥಾನ ಸಾಂವಿಧಾನಿಕ ಹುದ್ದೆ ಮಾತ್ರ. ಆ ಸ್ಥಾನದಲ್ಲಿದ್ದ ಅವರು ಒಂದರ ನಂತರ ಒಂದರಂತೆ ಮಾಡುತ್ತಿರುವ ಕಾರ್ಯಗಳು ಯಾವುದೇ ರೀತಿಯಲ್ಲಿ ಕಾನೂನುಬದ್ಧವಾಗಿಲ್ಲ. ಅವರು ಅಂತಹ ನಿರ್ಧಾರಗಳನ್ನು ತೆಗೆದುಕೊಂಡಷ್ಟೂ ಜನರ ಮುಂದೆ ಅವರೇ ಹೆಚ್ಚು ತೆರೆದುಕೊಳ್ಳುತ್ತಾರೆ'' ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು, ನ್ಯಾಯಾಂಗ ವಿಚಾರಣಾ ಸಮಿತಿಗೆ ತನಿಖೆ ಮಾಡಲು ಸೂಚಿದಲಾದ ವಿಷಯಗಳು ಬಹಳ ಮಹತ್ವದ್ದಾಗಿವೆ. ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಭ್ರಷ್ಟಾಚಾರದೊಂದಿಗೆ ಹಿಂಸಾಚಾರ ಮತ್ತು ಭಯೋತ್ಪಾದನೆಯ ಸಮಸ್ಯೆಯೂ ಇದೆ. ಇದಲ್ಲದೇ ರಾಜಕೀಯ, ಮತದಾನ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ವಿಶ್ವವಿದ್ಯಾಲಯದ ಆವರಣವನ್ನು ಬಳಸಿಕೊಳ್ಳುವ ವಿಚಾರವನ್ನೂ ಸೇರಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ವಿಶ್ವವಿದ್ಯಾಲಯದ ಉಪಕುಲಪತಿ ಹುದ್ದೆ ಪದೇ ಪದೇ ವಿವಾದಕ್ಕೆ ಒಳಗಾಗುತ್ತಿದೆ. ಆದರೆ, ಇತ್ತೀಚಿನ ಬೆಳವಣಿಗೆಗಳಲ್ಲಿ ಚುನಾವಣಾ ಸಭೆಗಳನ್ನು ನಡೆಸಲು ಅನುಮತಿಸುವ ಮೂಲಕ ಕ್ಯಾಂಪಸ್‌ಗಳಲ್ಲಿ ಸಂಘರ್ಷವನ್ನು ಹರಡಲಾಗುತ್ತಿದೆ. ಇಂತಹ ವಿಷಯಗಳಿಂದ ರಾಜ್ಯಪಾಲರು ಈ ಹಿಂದೆ ಶಿಕ್ಷಣ ಸಚಿವರನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದ್ದರು. ಇದರಿಂದ ರಾಜಭವನ ಮತ್ತು ಸರ್ಕಾರದ ನಡುವಿನ ಸಂಘರ್ಷ ಹೆಚ್ಚಿದ್ದು, ಮುಂದುವರೆದ ಭಾಗವಾಗಿ ರಾಜ್ಯಪಾಲರು ನ್ಯಾಯಾಂಗ ತನಿಖೆಯ ಅಸ್ತ್ರ ಬಿಟ್ಟಿದ್ದಾರೆ.
ಇದನ್ನೂ ಓದಿ: ನಾನು ಭಾರತದ ಜನತೆಗಾಗಿ ಕೆಲಸ ಮಾಡುತ್ತಿದ್ದೇನೆ, ಭಾರತೀಯ ಜನತಾ ಪಕ್ಷಕ್ಕಾಗಿ ಅಲ್ಲ: ಪಶ್ಚಿಮ ಬಂಗಾಳ ರಾಜ್ಯಪಾಲ