ಧೋಲ್ಪುರ್ (ರಾಜಸ್ಥಾನ): ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯು ಸೋಮವಾರ ಅದ್ಧೂರಿಯಾಗಿ ಜರುಗಿತ್ತು. ಈ ಐತಿಹಾಸಿಕ ದಿನದಂದು ಜನಿಸಿದ ಮಕ್ಕಳಿಗೆ ಪೋಷಕರು ದೇವರ ಹೆಸರಿಡುವ ಮೂಲಕ ತಮ್ಮ ಭಕ್ತಿಯನ್ನು ಮೆರೆದಿದ್ದಾರೆ. ಗಂಡು ಮಗುವಿಗೆ 'ರಾಮ' ಎಂದು ಹೆಸರಿಟ್ಟಿದ್ದರೆ, ಹೆಣ್ಣು ಮಗುವಿಗೆ 'ಸೀತಾ' ಎಂದು ಹೆಸರಿಟ್ಟು ಗಮನ ಸೆಳೆದಿದ್ದಾರೆ.
ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಮತ್ತು ರಾಮ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಕಾರ್ಯವು ಇಡೀ ಜಗತ್ತಿನ ಗಮನ ಸೆಳೆದಿದೆ. ಸೋಮವಾರ ಭವ್ಯ ಮಂದಿರದಲ್ಲಿ ದೇವರು ನೆಲೆನಿಂತಿದ್ದಾನೆ. ದೇಶದ ಅನೇಕ ಕಡೆಗಳಲ್ಲಿ ಇದೇ ದಿನವೇ ಹುಟ್ಟಿದ ಮಕ್ಕಳಿಗೆ ರಾಮನ ಹೆಸರು ನಾಮಕಾರಣ ಮಾಡಿರುವ ವರದಿಗಳಾಗಿವೆ. ಅದೇ ರೀತಿಯಾಗಿ ರಾಜಸ್ಥಾನದ ಧೋಲ್ಪುರ ಜಿಲ್ಲಾಸ್ಪತ್ರೆಯಲ್ಲಿ ಸೋಮವಾರ ಜನಿಸಿದ 26 ಮಕ್ಕಳಿಗೆ ಪೋಷಕರು ದೇವರ ಹೆಸರಿಟ್ಟಿದ್ದಾರೆ.
ಜಿಲ್ಲಾಸ್ಪತ್ರೆಯ ತಾಯಿ ಮತ್ತು ಮಕ್ಕಳ ವಾರ್ಡ್ನಲ್ಲಿ 26 ಮಹಿಳೆಯರಿಗೆ ಹೆರಿಗೆ ಮಾಡಲಾಗಿದೆ. ಈ ಪೈಕಿ 14 ಮಹಿಳೆಯರು ಗಂಡು ಹಾಗೂ 12 ಮಹಿಳೆಯರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅಯೋಧ್ಯೆಯಲ್ಲಿ ರಾಮ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಗೆ ಸಾಕ್ಷಿಯಾಗಿ ಆಸ್ಪತ್ರೆಯಲ್ಲೇ ಗಂಡು ಮಗುವಿಗೆ 'ರಾಮ' ಹಾಗೂ ಹೆಣ್ಣು ಮಗುವಿಗೆ 'ಸೀತಾ' ಎಂದು ಹೆಸರಿಟ್ಟಿದ್ದಾರೆ.
ಇದರಿಂದ ಆಸ್ಪತ್ರೆಯಲ್ಲಿ ಭಕ್ತಿಯ ವಾತಾವರಣ ಮೂಡಿತ್ತು. ಅಲ್ಲದೇ, ಪೋಷಕರು ತಮ್ಮ ಮಕ್ಕಳಿಗೆ ರಾಮ, ಸೀತಾ ಎಂದು ನಾಮಕಾರಣ ಮಾಡಿದ್ದು ಮಾತ್ರವಲ್ಲದೇ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಈ ಕುರಿತು ವಿಮಲಾ ಶರ್ಮಾ ಎಂಬುವರು 'ಈಟಿವಿ ಭಾರತ್'ಗೆ ಪ್ರತಿಕ್ರಿಯಿಸಿ, ನಮ್ಮ ಸೊಸೆ ಸೃಷ್ಟಿ ಅವರನ್ನು ಹೆರಿಗೆ ನೋವಿನ ಕಾರಣ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಅಯೋಧ್ಯೆಯಲ್ಲಿ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ ದಿನವಾದ ಜನವರಿ 22ರಂದು ಸೊಸೆಗೆ ಹೆರಿಗೆಯಾಗಬೇಕೆಂದು ಇಡೀ ಕುಟುಂಬಸ್ಥರು ಬಯಸಿದ್ದೆವು. ಅಂತೆಯೇ, ಅದೇ ದಿನ ಸಿಸೇರಿಯನ್ ಮಾಡಿಸಿದ್ದು, ಮೊಮ್ಮಗಳು ಜನಿಸಿದ್ದಾಳೆ. ಹೀಗಾಗಿ ಮಗುವಿಗೆ 'ಸೀತಾ' ಎಂದು ನಾಮಕರಣ ಮಾಡಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ, ದೀಕ್ಷಾ ಎಂಬುವರು ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ನಮ್ಮ ಸೊಸೆಗೆ ಸೋಮವಾರ ಸಹಜ ಹೆರಿಗೆಯಾಗಿದೆ. ಗಂಡು ಮಗು ಜನಿಸಿದ್ದು, 'ರಾಮ' ಎಂದು ಹೆಸರಿಡಲಾಗಿದೆ ಎಂದು ಹೇಳಿದರು. ಆಸ್ಪತ್ರೆಯ ವೈದ್ಯೆ ಡಾ. ರಿಚಾ ಸಿಂಗ್ ಪ್ರತಿಕ್ರಿಯಿಸಿ, ಸೋಮವಾರ 26 ತಾಯಂದಿರಿಗೆ ಹೆರಿಗೆ ಮಾಡಿಸಲಾಗಿದೆ. ಈ ಪೈಕಿ 21 ಜನರಿಗೆ ಸಹಜ ಹೆರಿಗೆಯಾಗಿದೆ. ಅದೇ ಸಮಯದಲ್ಲಿ ಐವರಿಗೆ ಸಿಸೇರಿಯನ್ ಮೂಲಕ ಸುರಕ್ಷಿತ ಹೆರಿಗೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನು ಓದಿ: ರಾಮಮಂದಿರ ಉದ್ಘಾಟನೆಯಂದು ಜನಿಸಿದ ಮಗುವಿಗೆ 'ರಾಮ್ ರಹೀಮ್' ಹೆಸರಿಟ್ಟ ಮುಸ್ಲಿಂ ಕುಟುಂಬ