ನವದೆಹಲಿ: ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ಮೇಲೆ ಕೆಲ ದುಷ್ಕರ್ಮಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ. ಈ ದಾಳಿಯಿಂದ ಬಿಜೆಪಿ ಕೈವಾಡ ಇದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಇದು ಕೇಸರಿ ಪಕ್ಷದ ಹತಾಶೆ ತೋರಿಸುತ್ತದೆ. ಈ ಚುನಾವಣೆಯಲ್ಲಿ ಬಿಜೆಪಿ ದೆಹಲಿ ಮಾತ್ರವಲ್ಲದೇ, ನೆರೆಯ ಹರಿಯಾಣದಲ್ಲಿ ಸೋಲಲಿದೆ ಎಂದು ಹೇಳಿದೆ.
ದೆಹಲಿಯ ಎಲ್ಲ ಏಳು ಮತ್ತು ಹರಿಯಾಣದ 10 ಲೋಕಸಭಾ ಕ್ಷೇತ್ರಗಳಿಗೆ ಮೇ 25ರಂದು ಚುನಾವಣೆ ನಡೆಯಲಿದೆ. ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ 'ಇಂಡಿಯಾ' ಮೈತ್ರಿಕೂಟದ ಸೀಟು ಹಂಚಿಕೆ ಮಾಡಿಕೊಂಡು ಜಂಟಿಯಾಗಿ ಸ್ಪರ್ಧಿಸಿದೆ. ದೆಹಲಿಯ ಏಳು ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಮೂರು ಕ್ಷೇತ್ರಗಳು ಹಾಗೂ ನೆರೆಯ ರಾಜ್ಯವಾದ ಹರಿಯಾಣದಲ್ಲಿ ಹತ್ತು ಕ್ಷೇತ್ರಗಳ ಪೈಕಿ ಒಂಬತ್ತು ಕಡೆ ಸ್ಪರ್ಧಿಸುತ್ತಿದೆ. ಮೈತ್ರಿಕೂಟದ ಭಾಗವಾಗಿ ಆಪ್, ದೆಹಲಿಯ ನಾಲ್ಕು ಕ್ಷೇತ್ರಗಳು, ಹರಿಯಾಣದ ಒಂದು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದೆ.
ದೆಹಲಿಯ ಮೂರು ಕ್ಷೇತ್ರಗಳಲ್ಲಿ ಈಶಾನ್ಯ ದೆಹಲಿಯು ಒಂದಾಗಿದೆ. ಬಿಜೆಪಿಯ ಮನೋಜ್ ತಿವಾರಿ ವಿರುದ್ಧ ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ನಾಯಕ ಕನ್ಹಯ್ಯಾ ಕುಮಾರ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಶುಕ್ರವಾರ ಸಂಜೆ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಕನ್ಹಯ್ಯಾ ಮೇಲೆ ದಾಳಿ ನಡೆಸಲಾಗಿದೆ.
ಈ ಬಗ್ಗೆ ದೆಹಲಿಯ ಎಐಸಿಸಿ ಉಸ್ತುವಾರಿ ದೀಪಕ್ ಬಬಾರಿಯಾ 'ಈಟಿವಿ ಭಾರತ್'ಗೆ ಪ್ರತಿಕ್ರಿಯಿಸಿ, ನಮ್ಮ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಇದು ಬಿಜೆಪಿಯ ಸೋಲಿನ ಹತಾಶೆಯನ್ನು ತೋರಿಸುತ್ತದೆ. ಇಂತಹ ಹಿಂಸೆಗೆ ಪ್ರಜಾಪ್ರಭುತ್ವದಲ್ಲಿ ಜಾಗವಿಲ್ಲ. ಆದರೆ, ನಮ್ಮ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಬದಲಿಗೆ, ಈ ದಾಳಿಯು ಬಿಜೆಪಿ ಬಣ ಬಯಲು ಮಾಡಿದ್ದು, ಆ ಪಕ್ಷದ ದೇಶಾದ್ಯಂತ ನಕಾರಾತ್ಮಕ ಸಂದೇಶ ರವಾನೆಯಾಗಿದೆ. ಇದು ದೆಹಲಿಯಲ್ಲಿ ಮಾತ್ರವಲ್ಲದೇ ಹರಿಯಾಣದಲ್ಲಿಯೂ ಕೇಸರಿ ಪಕ್ಷಕ್ಕೆ ಹಾನಿ ಮಾಡುತ್ತದೆ ಎಂದು ಹೇಳಿದರು.
ಬಿಜೆಪಿಯೊಂದಿಗೆ ದಾಳಿಕೋರರು ನಂಟು ಹೊಂದಿದ್ದಾರೆ ಮತ್ತು ಸುದ್ದಿ ವಾಹಿನಿಗಳಲ್ಲಿ ಈ ಘಟನೆಯನ್ನು ಸಮರ್ಥಿಸಿಕೊಳ್ಳುವ ಧೈರ್ಯಯನ್ನೂ ಬಿಜೆಪಿ ಮಾಡಿದೆ. ಈ ಹಿಂದೆ ಕನ್ಹಯ್ಯ ದೇಶದ ವಿರುದ್ಧ ಮಾಡಿದ ಹೇಳಿಕೆಗಳಿಗೆ ಶಿಕ್ಷೆಯಾಗಿದೆ ಎಂದು ಅವರು ದಾಳಿಯನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ, ಇದೆಲ್ಲವೂ ಕನ್ಹಯ್ಯ ಅವರ ಮಾನಹಾನಿಗಾಗಿ ಮಾಡಿದ ಸುಳ್ಳು ಆರೋಪಗಳಾಗಿವೆ. ಸತ್ಯ ಏನು ಎಂಬುದು ಜನರಿಗೆ ಗೊತ್ತಿದೆ. ಬಿಜೆಪಿಯೇ ಒಡೆದು ಆಳುವ ರಾಜಕಾರಣ ಮಾಡುತ್ತಿದೆ. ಕನ್ಹಯ್ಯಾ ಅವರಿಗೆ ಸಿಗುತ್ತಿರುವ ಬೆಂಬಲದಿಂದ ಬಿಜೆಪಿಯವರು ಚಿಂತಿತರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ, ಆಪ್ ನಾಯಕರಾದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮತ್ತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಬಿಭವ್ ಕುಮಾರ್ ನಡುವಿನ ವಿವಾದದ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡಿದ ದೀಪಕ್ ಬಬಾರಿಯಾ, ಇದು ಆಮ್ ಆದ್ಮಿ ಪಕ್ಷದ ಆಂತರಿಕ ವಿಷಯವಾಗಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಕಾನೂನು ತನ್ನ ಕ್ರಮ ತೆಗೆದುಕೊಳ್ಳುತ್ತದೆ. ಆದರೆ ಬಿಭವ್ ವಿರುದ್ಧ ಪ್ರತಿಭಟನೆ ಮಾಡುವ ಮೂಲಕ ಬಿಜೆಪಿ ವಿವಾದದ ಬಗ್ಗೆ ರಾಜಕೀಯ ಮಾಡಲು ಪ್ರಯತ್ನಿಸುತ್ತಿದೆ ಎಂದು ಬಬಾರಿಯಾ ಹೇಳಿದರು.
ಮುಂದುವರೆದು, ಮೈತ್ರಿಕೂಟವು ಉತ್ತಮವಾಗಿದೆ. ನಿರುದ್ಯೋಗ ಮತ್ತು ಬೆಲೆ ಏರಿಕೆಯಂತಹ ಸಾರ್ವಜನಿಕ ಸಮಸ್ಯೆಗಳೇ ಪ್ರಮುಖವಾಗಿರುವ ಕಾರಣ ಈ ವಿವಾದವು ಚುನಾವಣೆಯ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ನಮ್ಮ ನಾಯಕ ರಾಹುಲ್ ಗಾಂಧಿ ದೆಹಲಿಯ ಎಲ್ಲ ಏಳು ಮೈತ್ರಿ ಅಭ್ಯರ್ಥಿಗಳ ಪ್ರಚಾರ ನಡೆಸಲಿದ್ದಾರೆ. ಕೇಜ್ರಿವಾಲ್ ಈಗಾಗಲೇ ಮೈತ್ರಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದು, ಎರಡೂ ಪಕ್ಷಗಳ ಕಾರ್ಯಕರ್ತರು ಸಹ ಮನೆ-ಮನೆಗೆ ತೆರಳುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಮಾಲಿವಾಲ್ ಮೇಲೆ ಹಲ್ಲೆ ಪ್ರಕರಣ: ಸಿಎಂ ಕೇಜ್ರಿವಾಲ್ ಪಿಎ ಬಿಭವ್ ಬಂಧನ