ಅಮೃತಸರ: ಎಸ್‌ಎಡಿ ನಾಯಕ ಸುಖಬೀರ್ ಸಿಂಗ್ ಬಾದಲ್ ಮೇಲೆ ಗುಂಡು ಹಾರಿಸಲು ಯತ್ನಿಸಿದ ಆರೋಪಿ ನರೇನ್ ಸಿಂಗ್ ಚೌರಾ ಅವರನ್ನು ಅಮೃತಸರ ಪೊಲೀಸರು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ. ಈ ವೇಳೆ ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ತಮ್ಮ ಕಸ್ಟಡಿಗೆ ನೀಡುವಂತೆ ಪೊಲೀಸರು ಮನವಿ ಮಾಡಲಿದ್ದಾರೆ.
ಕಸ್ಟಡಿ ಅವಧಿಯಲ್ಲಿ ಆರೋಪಿಯಿಂದ ದಾಳಿಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಪ್ರಯತ್ನಿಸುವ ಸಾಧ್ಯತೆಯಿದೆ. ಬುಧವಾರ ಬಂಧನದ ವೇಳೆ ಎಲ್ಲ ಅಪರಾಧಗಳನ್ನು ಒಪ್ಪಿಕೊಂಡಿರುವ ಆರೋಪಿ, ದರ್ಬಾರ್ ಸಾಹಿಬ್ನಲ್ಲಿ ಮಾಜಿ ಡಿಸಿಎಂ ಸುಖಬೀರ್ ಸಿಂಗ್ ಬಾದಲ್ ಅವರನ್ನು ಕೊಲೆ ಮಾಡಬೇಕೆಂದಿದ್ದೆ ಎಂದು ಹೇಳಿದ್ದರು.
ಈ ಹಿಂದೆ ಹಲವು ಅಪರಾಧ ಚಟುವಟಿಕೆಗಳಲ್ಲಿ ಶಾಮೀಲಾಗಿದ್ದ ಚೌರಾ ಅಮೃತಸರ, ಗುರುದಾಸ್‌ಪುರ, ಲುಧಿಯಾನ ಮತ್ತು ಚಂಡೀಗಢ ಜೈಲುಗಳಲ್ಲಿ ಶಿಕ್ಷೆಯನ್ನು ಅನುಭವಿಸಿದ್ದಾರೆ. ಚೌರಾ ಅವರನ್ನು ಫೆಬ್ರವರಿ 28, 2013 ರಂದು ತರ್ನ್ ತರನ್‌ನ ಜಲಾಲಾಬಾದ್ ಗ್ರಾಮದಿಂದ ಬಂಧಿಸಲಾಗಿತ್ತು. ಮತ್ತು ಅದೇ ದಿನ ಅವರ ಸಹಚರರಾದ ಸುಖದೇವ್ ಸಿಂಗ್ ಮತ್ತು ಗುರಿಂದರ್ ಸಿಂಗ್ ಅವರನ್ನು ಪಂಡೋರಿ ಗ್ರಾಮದಿಂದ ಬಂಧಿಸಲಾಗಿತ್ತು.
ಖಲಿಸ್ತಾನ್ ಲಿಬರೇಶನ್ ಫೋರ್ಸ್ ಮತ್ತು ಅಕಾಲ್ ಫೆಡರೇಷನ್‌ನಂತಹ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಹಾಗೂ ಖೈದಿಗಳಿಗೆ ಬಟ್ಟೆ ಮತ್ತು ಇತರ ವಸ್ತುಗಳನ್ನು ನೀಡುವ ಮೂಲಕ ಬುರೈಲ್ ಜೈಲ್ ಬ್ರೇಕ್ ಪ್ರಕರಣದ ಮಾಸ್ಟರ್‌ಮೈಂಡ್‌ಗೆ ಸಹಾಯ ಮಾಡಿದ ಆರೋಪ ಈತನ ಮೇಲಿದೆ. 2004ರಲ್ಲಿ ನಾಲ್ವರು ಖಲಿಸ್ತಾನಿ ಭಯೋತ್ಪಾದಕರು 94 ಅಡಿ ಉದ್ದದ ಸುರಂಗ ಕೊರೆದು ಪರಾರಿಯಾಗಿದ್ದರು.
ಇದನ್ನೂ ಓದಿ: ಸುಖಬೀರ್ ಸಿಂಗ್ ಬಾದಲ್ ಮೇಲೆ ಗುಂಡು ಹಾರಿಸಲು ಯತ್ನಿಸಿದವನ ಮಾಹಿತಿ ಪತ್ತೆ: ಯಾರು ಈ ನರೇನ್ ಸಿಂಗ್ ಚೌರಾ?