ನಾಗಾನ್: ಕೋಲ್ಕತ್ತಾ ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ಮತ್ತೊಂದು ಹೇಯ ಕೃತ್ಯ ಅಸ್ಸಾಂ ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ಇಲ್ಲಿನ ನಾಗಾನ್ನ ಧಿಂಗ್ ಪ್ರದೇಶದಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಘಟನೆಗೆ ರಾಜ್ಯದೆಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.
ಘಟನೆಯ ವಿವರ: ಆಗಸ್ಟ್ 22ರಂದು ಧಿಂಗ್ ನಗರದಲ್ಲಿ ಟ್ಯೂಷನ್ ಮುಗಿಸಿ ಮರಳುತ್ತಿದ್ದ ಬಾಲಕಿಯನ್ನು ಮೂವರು ದುಷ್ಕರ್ಮಿಗಳು ಎಳೆದೊಯ್ದು ಭಗಕ್ ಗಾನ್ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿ, ಸ್ಥಳೀಯ ಸ್ಮಶಾನದ ಬಳಿ ಬಿಟ್ಟು ಹೋಗಿದ್ದಾರೆ. ಬೆತ್ತಲಾಗಿ, ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಬಾಲಕಿಯನ್ನು ಪಾದಚಾರಿಯೊಬ್ಬರು ಗಮನಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತಕ್ಷಣಕ್ಕೆ ಸ್ಥಳಕ್ಕೆ ಬಂದು ಸಂತ್ರಸ್ತೆಯನ್ನು ಆಸ್ಪತ್ರೆ ದಾಖಲಿಸಿ, ಪ್ರಕರಣ ದಾಖಲಿಸಿದ್ದಾರೆ.
ದುರದೃಷ್ಟಕರ ಘಟನೆ- ಎಸ್‌ಪಿ: ಈ ಪ್ರಕರಣ ರಾಜ್ಯದಲ್ಲಿ ಆಘಾತ ಮೂಡಿಸಿದೆ. ನಾಗಾನ್ ಜಿಲ್ಲಾ ಎಸ್‌ಪಿ ಸ್ವಪನನಿಲ್ ದೆಕಾ ಅವರನ್ನೊಳಗೊಂಡ ಪೊಲೀಸರ ತಂಡ ತನಿಖೆಗೆ ಮುಂದಾಗಿದೆ. ಘಟನೆ ಕುರಿತು ಮಾತನಾಡಿರುವ ಎಸ್‌ಪಿ, ಇದು ದುರಾದೃಷ್ಟಕರ. ಆರೋಪಿಗಳ ಪತ್ತೆ ಕ್ರಮ ಕೈಗೊಳ್ಳಲಾಗಿದೆ. ಶೀಘ್ರದಲ್ಲೇ ಅವರನ್ನು ಬಂಧಿಸಿ, ಶಿಕ್ಷೆಗೆ ಒಳಪಡಿಸಲಾಗುವುದು ಎಂದಿದ್ದಾರೆ.
ಧಿಂಗ್ ಬಂದ್: ಕೋಲ್ಕತ್ತಾದ ಬಳಿಕ ಅಸ್ಸಾಂನಲ್ಲಿ ನಡೆದಿರುವ ಘಟನೆ ಇದೀಗ ಮಹಿಳೆಯರ ಸುರಕ್ಷತೆಯ ಬಗ್ಗೆ ಪ್ರಶ್ನೆ ಮೂಡಿಸಿದೆ ಎಂದು ಸ್ಥಳೀಯ ಸಂಘಟನೆಗಳು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಪರಾಧಿಗಳನ್ನು ತಕ್ಷಣ ಬಂಧಿಸಬೇಕು ಎಂಬ ಬೇಡಿಕೆಯೊಂದಿಗೆ ಅಖಿಲ ಭಾರತ ವಿದ್ಯಾರ್ಥಿ ಯೂನಿಯನ್ ಮತ್ತು ಸ್ಥಳೀಯರು ಗುರುವಾರ ರಾತ್ರಿ ಪ್ರತಿಭಟನೆ ನಡೆಸಿದರು.
ಕಠಿಣ ಕ್ರಮದ ಎಚ್ಚರಿಕೆ ನೀಡಿದ ಸಿಎಂ: ಘಟನೆ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ, ಹೇಯ ಕೃತ್ಯ ಎಸಗಿದ ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಇಲಿ ಪಾಷಾಣ ಸೇವಿಸಿ ಅತ್ಯಾಚಾರ ಪ್ರಕರಣದ ಆರೋಪಿ ಸಾವು