ನವದೆಹಲಿ: "ನಿಮ್ಮ ಪತಿ ಅಥವಾ ಮಗ ಪ್ರಧಾನಿ ನರೇಂದ್ರ ಮೋದಿ ಅವರ ಜಪ ಮಾಡಿದರೆ, ರಾತ್ರಿ ಊಟ ಕೊಡಬೇಡಿ, ನೀವು ಇನ್ನು ಮುಂದೆ ಆಮ್ ಆದ್ಮಿ (ಆಪ್) ಪಕ್ಷಕ್ಕೇ ಮತ ಹಾಕುವ ಶಪಥ ಮಾಡಿ" ಇದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಹಿಳೆಯರಲ್ಲಿ ಮಾಡಿದ ಭಿನ್ನಹ.
ಆಪ್ ಸರ್ಕಾರವು 2024-25 ರ ಬಜೆಟ್‌ನಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಮಹಿಳೆಯರಿಗೆ ಮಾಸಿಕ 1 ಸಾವಿರ ರೂಪಾಯಿ ನೀಡುವ ಯೋಜನೆಯನ್ನು ಘೋಷಿಸಿದ್ದು, ಶನಿವಾರ ಮಹಿಳೆಯರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ದೆಹಲಿ ಸಿಎಂ ಹೀಗೆ ಕರೆ ನೀಡಿದ್ದಾರೆ.
ಅನೇಕರು ಈಗ ಪ್ರಧಾನಿ ಮೋದಿ ಅವರ ಹೆಸರನ್ನೇ ಜಪಿಸುತ್ತಿದ್ದಾರೆ. ಆದರೆ, ನೀವು ಅದನ್ನು ಸರಿದಾರಿಗೆ ತರಬೇಕು. ನಿಮ್ಮ ಪತಿ ಅಥವಾ ಪುತ್ರ ಮೋದಿಯವರ ಹೆಸರನ್ನು ಹೇಳುತ್ತಿದ್ದರೆ, ನೀವು ಅವರಿಗೆ ರಾತ್ರಿಯ ಊಟವನ್ನು ನೀಡುವುದಿಲ್ಲ ಎಂದು ಹೇಳಿ. ಜೊತೆಗೆ ಎಲ್ಲ ಮಹಿಳೆಯರು ಇನ್ನು ಮುಂದೆ ಆಪ್ ಬೆಂಬಲಿಸುವುದಾಗಿ ತಮ್ಮ ಕುಟುಂಬ ಸದಸ್ಯರ ಮೇಲೆ ಪ್ರಮಾಣ ಮಾಡುವಂತೆಯೂ ಮಹಿಳೆಯರಲ್ಲಿ ಕೋರಿದ್ದಾರೆ.
ನಿಮ್ಮ ನೆರವಿಗೆ ಕೇಜ್ರಿವಾಲ್ ಇದ್ದಾನೆ: ಬಿಜೆಪಿಯನ್ನು ಬೆಂಬಲಿಸುವ ಇತರ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ನಮ್ಮ ಸರ್ಕಾರ ವಿದ್ಯುತ್ ಉಚಿಯ ಮಾಡಿದೆ, ಮಹಿಳೆಯರಿಗೆ ಬಸ್ ಟಿಕೆಟ್ ಉಚಿತ, ಈಗ ಪ್ರತಿ ತಿಂಗಳು 1 ಸಾವಿರ ರೂಪಾಯಿ ನೀಡುತ್ತಿದ್ದೇವೆ. ನಿಮಗೆ ಬಿಜೆಪಿ ಏನು ಮಾಡಿದೆ? ಬಿಜೆಪಿಗೆ ಏಕೆ ಮತ ಹಾಕಬೇಕು?. ನಿಮ್ಮ ಸಹೋದರನಾದ ನಾನು ಮಾತ್ರ ನಿಮ್ಮ ಬೆಂಬಲಕ್ಕೆ ಸದಾ ನಿಲ್ಲುತ್ತೇನೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಆಪ್ಗೆ ಮತ ಹಾಕಿ ಎಂದು ಮನವಿ ಮಾಡಿದರು.
ಮಹಿಳಾ ಸಬಲೀಕರಣದ ಹೆಸರಿನಲ್ಲಿ ಇಲ್ಲಿಯವರೆಗೆ ಬರೀ ವಂಚನೆ ಮಾಡಲಾಗಿದೆ ಎಂದು ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಟೀಕಿಸಿದ ದೆಹಲಿ ಮುಖ್ಯಮಂತ್ರಿ, ರಾಷ್ಟ್ರೀಯ ಪಕ್ಷಗಳು ಮಹಿಳೆಗೆ ಒಂದಷ್ಟು ಹುದ್ದೆ ನೀಡಿ ಮಹಿಳಾ ಸಬಲೀಕರಣ ಮಾಡಿದ್ದೇವೆ ಎಂದು ಜಂಬ ಕೊಚ್ಚಿಕೊಳ್ಳುತ್ತಿವೆ. ಒಂದೆರಡು ಹುದ್ದೆ ನೀಡಿದರೆ, ಸಬಲೀಕರಣ ಸಾಧ್ಯವೇ?. ಹಾಗಂತ ನಾನು ಮಹಿಳೆಯರಿಗೆ ಈ ಸ್ಥಾನಗಳನ್ನು ನೀಡಬಾರದು ಎನ್ನುತ್ತಿಲ್ಲ. ತಮ್ಮ ಸರ್ಕಾರದ ಅಡಿಯಲ್ಲಿ 'ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆ' ಜಾರಿ ಮಾಡಿ ನಿಜವಾದ ಸಬಲೀಕರಣವನ್ನು ತರುತ್ತಿದ್ದೇವೆ ಎಂದು ಅವರು ಹೇಳಿದರು.
ಹಣವಿದ್ದಾಗ ಸಬಲೀಕರಣವಾಗುತ್ತದೆ. ಪ್ರತಿ ಮಹಿಳೆಗೆ ಪ್ರತಿ ತಿಂಗಳು 1000 ರೂ. ಸಿಕ್ಕಾಗ ನಿಜವಾದ ಸಬಲೀಕರಣವಾಗುತ್ತದೆ. ಇಡೀ ವಿಶ್ವದಲ್ಲಿ ಈ ಯೋಜನೆಯು ಅತಿದೊಡ್ಡ ಮಹಿಳಾ ಸಬಲೀಕರಣ ಕಾರ್ಯಕ್ರಮವಾಗಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಈಗ ಶ್ರೀರಾಮ ಇದ್ದಿದ್ದರೆ ಅವರ ಮನೆಗೂ ಬಿಜೆಪಿಯವರು ಐಟಿ - ಇಡಿ, ಸಿಬಿಐ ಕಳುಹಿಸುತ್ತಿದ್ದರು: ಕೇಜ್ರಿವಾಲ್