ಇಟಾನಗರ : ಅರುಣಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಪ್ರತಿಪಕ್ಷ ಕಾಂಗ್ರೆಸ್ನ ಇಬ್ಬರು ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ ಪಿಪಿ)ಯ ಇಬ್ಬರು ಹಾಲಿ ಶಾಸಕರು ಭಾನುವಾರ ಮುಖ್ಯಮಂತ್ರಿ ಪೆಮಾ ಖಂಡು ಅವರ ಸಮ್ಮುಖದಲ್ಲಿ ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಯಾದರು.
ಪ್ರತಿಪಕ್ಷ ಕಾಂಗ್ರೆಸ್ ಶಾಸಕರಾದ ನಿನೊಂಗ್ ಎರಿಂಗ್, ವಾಂಗ್ಲಿಂಗ್ ಲೊವಾಂಗ್ಡಾಂಗ್ ಮತ್ತು ಎನ್ಪಿಪಿ ಶಾಸಕರಾದ ಮುತ್ತು ಮಿಥಿ, ಗೋಕರ್ ಬಸರ್ ಅವರು ಬಿಜೆಪಿಯ ಇಟಾನಗರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿಗೆ ಸೇರಿದರು. ಎನ್ಪಿಪಿ ಅರುಣಾಚಲ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿಯ ಮಿತ್ರ ಪಕ್ಷವಾಗಿದೆ.
ಮುಖ್ಯಮಂತ್ರಿ ಪೆಮಾ ಖಂಡು, ಅಸ್ಸಾಂ ಸಚಿವ ಮತ್ತು ಅರುಣಾಚಲ ಪ್ರದೇಶದ ಬಿಜೆಪಿ ಚುನಾವಣಾ ಉಸ್ತುವಾರಿ ಅಶೋಕ್ ಸಿಂಘಾಲ್ ಮತ್ತು ರಾಜ್ಯ ಅಧ್ಯಕ್ಷ ಬಿಯುರಾಮ್ ವಾಹ್ಗೆ ಸೇರ್ಪಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪಕ್ಷಕ್ಕೆ ಬಂದ ನಾಲ್ವರು ಶಾಸಕರನ್ನು ಸಿಎಂ ಪೆಮಾ ಖಂಡು ಸ್ವಾಗತಿಸಿದರು.
ಎರಿಂಗ್ ಪಶ್ಚಿಮ ಪಾಸಿಘಾಟ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದರೆ, ವಾಂಗ್ಲಿನ್ ಲೋವಾಂಗ್ಡಾಂಗ್ ಬೋರ್ದುರಿಯಾ ಬೋಗಾಪಾನಿ ಕ್ಷೇತ್ರದ ಶಾಸಕರಾಗಿದ್ದಾರೆ. ಮುತ್ತು ಮಿಥಿ ಮತ್ತು ಗೋಕರ್ ಬಸರ್ ಕ್ರಮವಾಗಿ ರೋಯಿಂಗ್ ಮತ್ತು ಬಸರ್ ಸ್ಥಾನಗಳ ಶಾಸಕರಾಗಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಖಂಡು, "ನಾಲ್ವರು ಶಾಸಕರ ಬಿಜೆಪಿ ಸೇರ್ಪಡೆಯು ಪ್ರಧಾನಿ ಮೋದಿಯವರ ಉತ್ತಮ ಆಡಳಿತದ ತತ್ವಗಳಲ್ಲಿ ಅವರು ಇಟ್ಟಿರುವ ನಂಬಿಕೆಗೆ ಸಾಕ್ಷಿಯಾಗಿದೆ. ಪ್ರಧಾನಮಂತ್ರಿಯವರ ಪರಿವರ್ತನಾತ್ಮಕ ನಾಯಕತ್ವವು 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್' ಎಂಬ ಧ್ಯೇಯವಾಕ್ಯದ ಮೇಲೆ ಕೇಂದ್ರೀಕೃತವಾಗಿದೆ. ಈ ಧ್ಯೇಯವಾಕ್ಯವು ಇಡೀ ದೇಶದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತಂದಿದೆ" ಎಂದು ಹೇಳಿದ್ದಾರೆ.
60 ಸದಸ್ಯರ ಅರುಣಾಚಲ ಪ್ರದೇಶ ವಿಧಾನಸಭೆಗೆ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಲೋಕಸಭೆಯ ಜೊತೆಗೆ ಚುನಾವಣೆ ನಡೆಯುವ ಸಾಧ್ಯತೆಯಿದೆ. ಭಾನುವಾರದ ಸೇರ್ಪಡೆಯೊಂದಿಗೆ, ರಾಜ್ಯ ವಿಧಾನಸಭೆಯ ಒಟ್ಟು 60 ಸದಸ್ಯರಲ್ಲಿ ಬಿಜೆಪಿಯ ಬಲವು ಮಿತ್ರಪಕ್ಷಗಳೊಂದಿಗೆ 56 ಕ್ಕೆ ಏರಿಕೆಯಾಗಿದೆ. ಕಾಂಗ್ರೆಸ್ ಬಲ ಎರಡು ಸ್ಥಾನಗಳಿಗೆ ಕುಸಿದಿದ್ದು, ಸದನದಲ್ಲಿ ಇಬ್ಬರು ಸ್ವತಂತ್ರ ಸದಸ್ಯರಿದ್ದಾರೆ. 2019 ರ ಚುನಾವಣೆಯಲ್ಲಿ ಬಿಜೆಪಿಯು 41 ಸ್ಥಾನಗಳನ್ನು ಗಳಿಸಿತ್ತು.
ಇದನ್ನೂ ಓದಿ : ಜುಲೈ 1ರಿಂದ ಭಾರತದಾದ್ಯಂತ ಹೊಸ ಅಪರಾಧ ನ್ಯಾಯ ಕಾನೂನುಗಳು ಜಾರಿ