ವಿಜಯವಾಡ(ಆಂಧ್ರಪ್ರದೇಶ) : ಪಿಸಿಸಿ ಮುಖ್ಯಸ್ಥೆ ವೈ ಎಸ್ ಶರ್ಮಿಳಾ ಮತ್ತು ವೈ ಎಸ್ ವಿವೇಕಾನಂದ ರೆಡ್ಡಿ ಪುತ್ರಿ ಸುನೀತಾ ಒಗ್ಗೂಡಿ ಸಿಎಂ ಜಗನ್‌ಗೆ ಪ್ರಬಲ ಪೈಪೋಟಿ ನೀಡಲು ಮುಂದಾಗಿದ್ದಾರೆ. ಸಿಎಂ ಜಗನ್ ಅವರ ಜಿಲ್ಲೆಯಲ್ಲೇ ರಾಜಕೀಯವಾಗಿ ಡ್ಯಾಮೇಜ್ ಮಾಡಲು ರಣತಂತ್ರ ಸಿದ್ಧವಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಶರ್ಮಿಳಾ ಅಥವಾ ಸುನೀತಾ ಕುಟುಂಬದಿಂದ ಯಾರೋ ಒಬ್ಬರು ಕಡಪ ಸಂಸತ್ ಮತ್ತು ಪುಲಿವೆಂದುಲ ವಿಧಾನಸಭಾ ಸ್ಥಾನಕ್ಕೆ ಸ್ಪರ್ಧಿಸುವ ಸಾಧ್ಯತೆ ಇದೆ ಎಂಬುದಾಗಿ ತಿಳಿದು ಬಂದಿದೆ.
ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ವೈ ಎಸ್ ಶರ್ಮಿಳಾ ಅವರನ್ನು ವಿವೇಕಾನಂದ ರೆಡ್ಡಿ ಪುತ್ರಿ ಸುನಿತಾ ಇಡುಪುಲಪಾಯ (ವೈಎಸ್ ಫ್ಯಾಮಿಲಿ ಎಸ್ಟೇಟ್)ದಲ್ಲಿ ಭೇಟಿ ಮಾಡಿರುವುದು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ. ಸೋಮವಾರ ಬೆಳಗ್ಗೆ ಏಳೂವರೆ ಗಂಟೆಗೆ ಪುಲಿವೆಂದುಲದಿಂದ ಇಡುಪುಲಪಾಯಕ್ಕೆ ತೆರಳಿದ್ದ ಸುನೀತಾ ಎಸ್ಟೇಟ್‌ನಲ್ಲಿ ಶರ್ಮಿಳಾ ಅವರನ್ನು ಭೇಟಿಯಾಗಿದ್ದಾರೆ.
ಇಬ್ಬರೂ ಎರಡು ಗಂಟೆಗಳ ಕಾಲ ಖಾಸಗಿಯಾಗಿ ಚರ್ಚೆ ನಡೆಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಕಡಪ ಜಿಲ್ಲೆಯಲ್ಲಿ ವಿಶೇಷವಾಗಿ ಕಡಪ ಸಂಸತ್ ಮತ್ತು ಪುಲಿವೆಂದುಲ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಸ್ಪರ್ಧಿಸುವ ಅಭ್ಯರ್ಥಿಗಳ ಕುರಿತು ಚರ್ಚಿಸಿದ್ದಾರೆ. ಪುಲಿವೆಂದುಲ ವಿಧಾನಸಭೆಗೆ ವೈಸಿಪಿಯಿಂದ ಸಿಎಂ ಜಗನ್ ಹಾಗೂ ಕಡಪ ಸಂಸತ್ ನಿಂದ ವೈ ಎಸ್ ಅವಿನಾಶ್ ರೆಡ್ಡಿ ಕಣಕ್ಕಿಳಿಯುತ್ತಿರುವ ಹಿನ್ನೆಲೆಯಲ್ಲಿ ಇಬ್ಬರನ್ನು ಸೋಲಿಸಲು ಕಾಂಗ್ರೆಸ್ ಪಕ್ಷದ ಪರವಾಗಿ ತಮ್ಮ ಕುಟುಂಬದವರು ಕಣಕ್ಕಿಳಿಯಬೇಕು ಎಂಬ ಬಗ್ಗೆ ಇಬ್ಬರ ನಡುವೆ ಸುದೀರ್ಘ ಚರ್ಚೆ ನಡೆದಿರುವುದು ಗೊತ್ತಾಗಿದೆ.
ತಂದೆ ವೈ ಎಸ್ ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸಲು ಸಹೋದರ ಸಿಎಂ ಜಗನ್ ಅವರಿಂದ ಯಾವುದೇ ನೆರವು ಸಿಗದ ಹಿನ್ನೆಲೆಯಲ್ಲಿ ಸುನೀತಾ ಏಕಾಂಗಿಯಾಗಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಸಿಬಿಐ ತನಿಖೆಗೆ ಕೋರಿ ನ್ಯಾಯಾಲಯದ ಮೊರೆ ಹೋದಾಗ ಆ ತನಿಖೆಯಲ್ಲಿ ಸಂವೇದನಾಶೀಲ ವಿಷಯಗಳು ಬೆಳಕಿಗೆ ಬಂದಿದ್ದು ಗೊತ್ತೇ ಇದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ರೆಡ್ಡಿ ಹತ್ಯೆಯ ಕಾನೂನು ಹೋರಾಟದಲ್ಲಿ ವೈ ಎಸ್ ಶರ್ಮಿಳಾ ಮಾತ್ರ ಪ್ರಾರಂಭದಿಂದಲೂ ಸುನೀತಾ ಪರ ನಿಂತಿದ್ದರು. ಈ ಬಗ್ಗೆ ಶರ್ಮಿಳಾ ಸಿಬಿಐಗೆ ಹೇಳಿಕೆಯನ್ನೂ ನೀಡಿದ್ದಾರೆ.
ವಿವೇಕಾನಂದ ಪ್ರಕರಣದಲ್ಲಿ ವೈ ಎಸ್ ಭಾಸ್ಕರ್ ರೆಡ್ಡಿ ಮತ್ತು ವೈ ಎಸ್ ಅವಿನಾಶ್ ರೆಡ್ಡಿ ಆರೋಪಿಗಳು. ವೈ ಎಸ್ ಭಾಸ್ಕರ ರೆಡ್ಡಿ ಮತ್ತು ಕೆಲವರು ಚಂಚಲಗುಡ ಜೈಲಿನಲ್ಲಿ ರಿಮಾಂಡ್ ಕೈದಿಗಳಾಗಿದ್ದರೆ, ವೈ ಎಸ್ ಅವಿನಾಶ್ ರೆಡ್ಡಿ ಜಾಮೀನು ಪಡೆದಿದ್ದಾರೆ. ವಿವೇಕಾನಂದ ರೆಡ್ಡಿ ಪುತ್ರಿ ಸುನಿತಾ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜಗನ್ ಅವರನ್ನು ರಾಜಕೀಯವಾಗಿ ಎದುರಿಸಲು ವೈ ಎಸ್ ಶರ್ಮಿಳಾ ಅವರು ಸುನೀತಾ ಕುಟುಂಬವನ್ನು ಕಡಪ ಲೋಕಸಭೆಗೆ ಕಾಂಗ್ರೆಸ್ ಪಕ್ಷದ ಪರವಾಗಿ ಕಣಕ್ಕಿಳಿಸಲು ಮುಂದಾಗಿದ್ದಾರೆ.
ಸುನೀತಾಗೆ ಶರ್ಮಿಳಾ ಭರವಸೆ : ಇಡುಪುಲಪಾಯ ಸಭೆಯಲ್ಲಿ ಶರ್ಮಿಳಾ ಮತ್ತು ಸುನೀತಾ ನಡುವೆ ಇದೇ ವಿಷಯ ಪ್ರಸ್ತಾಪವಾಗಿದೆ. ಕಡಪ ಲೋಕಸಭೆಗೆ ಸುನಿತಾ ಅಥವಾ ಅವರ ತಾಯಿ ಸೌಭಾಗ್ಯಮ್ಮ ಅವರನ್ನು ಕಣಕ್ಕಿಳಿಸಲು ಶರ್ಮಿಳಾ ಚಿಂತನೆ ನಡೆಸಿದ್ದಾರೆ ಎಂದು ವರದಿಯಾಗಿದೆ. ನೀನು ಸ್ಪರ್ಧಿಸು, ನಾನು ಇಲ್ಲೇ ಇದ್ದು ಎಲ್ಲವನ್ನು ನೋಡಿಕೊಳ್ಳುತ್ತೇನೆ ಎಂದು ಸುನೀತಾಗೆ ಶರ್ಮಿಳಾ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ. ಸಭೆಯ ನಂತರ ಇಬ್ಬರೂ ವೈಎಸ್ ಸಮಾಧಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ದೆಹಲಿಯಲ್ಲಿ ರಾಹುಲ್ ಗಾಂಧಿ ಸಮ್ಮುಖದಲ್ಲಿ ಸುನಿತಾ ಅವರು ಶೀಘ್ರವೇ ಪಕ್ಷ ಸೇರುವ ವ್ಯವಸ್ಥೆ ಮಾಡುವುದಾಗಿ ಶರ್ಮಿಳಾ ಭರವಸೆ ನೀಡಿದ್ದಾರೆ ಎಂಬುದಾಗಿಯೂ ತಿಳಿದುಬಂದಿದೆ.
ಇದನ್ನೂ ಓದಿ: ಆಂಧ್ರಪ್ರದೇಶ: ವೈಎಸ್ಆರ್ ಕಾಂಗ್ರೆಸ್ನ 24 ಹಾಲಿ ಶಾಸಕರು, 8 ಸಂಸದರಿಗೆ ಟಿಕೆಟ್ ನಿರಾಕರಣೆ ಸಾಧ್ಯತೆ