ನವದೆಹಲಿ: ಖ್ಯಾತ ಧಾರಾವಾಹಿ ನಟಿ ರೂಪಾಲಿ ಗಂಗೂಲಿ ಮತ್ತು ಮಹಾರಾಷ್ಟ್ರದ ಜ್ಯೋತಿಷಿ ಅಮೇಯಾ ಜೋಶಿ ಮಂಗಳವಾರ ಬಿಜೆಪಿ ಸೇರ್ಪಡೆಗೊಂಡರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದ ಪ್ರಗತಿಗಾಗಿ ಕೆಲಸ ಮಾಡಲು ನಾವು ಪಕ್ಷ ಸೇರಿದ್ದೇವೆ ಎಂದು ಇಬ್ಬರೂ ತಿಳಿಸಿದ್ದಾರೆ.
ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಮತ್ತು ರಾಷ್ಟ್ರೀಯ ಮಾಧ್ಯಮ ವಿಭಾಗದ ಉಸ್ತುವಾರಿ ಅನಿಲ್ ಬಲುನಿ ಸೇರಿದಂತೆ ಹಿರಿಯ ಬಿಜೆಪಿ ನಾಯಕರ ಸಮ್ಮುಖದಲ್ಲಿ ರೂಪಾಲಿ ಮತ್ತು ಜೋಶಿ ಬಿಜೆಪಿ ಸೇರಿದರು. ನಂತರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಇಬ್ಬರು ಮಾತುಕತೆ ನಡೆಸಿದರು.
ಬಳಿಕ ಮಾತನಾಡಿದ ರೂಪಾಲಿ, ''ಪ್ರಧಾನಿ ಮೋದಿ ನನಗೆ ಸ್ಫೂರ್ತಿ. ನಾನು ಅವರ ದೊಡ್ಡ ಅಭಿಮಾನಿ. ಬಿಜೆಪಿ ಅತ್ಯುತ್ತಮ ಕೆಲಸ ಮಾಡುತ್ತಿದೆ. ಆದ್ದರಿಂದ ಬಿಜೆಪಿ ಸೇರಲು ನಿರ್ಧರಿಸಿದ್ದೆ. ನನ್ನನ್ನು ಪಕ್ಷಕ್ಕೆ ಸ್ವಾಗತಿಸಿದ್ದಕ್ಕೆ ನಾನು ಆಭಾರಿ. ನಾಗರಿಕರಾದ ನಾವೆಲ್ಲರೂ ಈ ಚುನಾವಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು'' ಎಂದು ಹೇಳಿದರು.
'ಸಾರಾಭಾಯ್ ವರ್ಸಸ್ ಸಾರಾಭಾಯ್' ಮತ್ತು 'ಅನುಪಮಾ' ಮುಂತಾದ ಟಿವಿ ಧಾರಾವಾಹಿಗಳ ಮೂಲಕ ಹೆಸರುವಾಸಿಯಾಗಿರುವ ರೂಪಾಲಿ ಗಂಗೂಲಿ, ಕಳೆದ ಮಾರ್ಚ್‌ನಲ್ಲಿ ಮೋದಿ ಅವರನ್ನು ಭೇಟಿ ಮಾಡಿದ್ದರು. ಈ ವಿಚಾರವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದರು. ಇದೀಗ ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ.
ಇದನ್ನೂ ಓದಿ: ಧರ್ಮ ಬದಲಿಸಿ ಹಿಂದೂ ಪ್ರೇಮಿಯನ್ನು ಮದುವೆಯಾದ ಮುಸ್ಲಿಂ ಯುವತಿ