ತಿರುವನಂತಪುರಂ (ಕೇರಳ): ಕೇರಳದ ಪತ್ತನಂತಿಟ್ಟ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ತಮ್ಮ ಪುತ್ರ ಅನಿಲ್ ಕೆ.ಆ್ಯಂಟನಿ ಚುನಾವಣೆಯಲ್ಲಿ ಗೆಲ್ಲಬಾರದು ಎಂದು ಕಾಂಗ್ರೆಸ್ ಹಿರಿಯ ನಾಯಕ ಎ.ಕೆ.ಆ್ಯಂಟನಿ ಹೇಳಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಂದ್ರದ ಮಾಜಿ ಸಚಿವರಾದ ಎ.ಕೆ.ಆ್ಯಂಟನಿ, ತಮ್ಮ ಮಗ ಸ್ಪರ್ಧಿಸಿರುವ ಪಕ್ಷ ಸೋಲಬೇಕು. ಕಾಂಗ್ರೆಸ್ ಅಭ್ಯರ್ಥಿ ಆಂಟೊ ಆ್ಯಂಟನಿ ಗೆಲ್ಲಬೇಕು ಎಂದು ತಿಳಿಸಿದ್ದಾರೆ. ಇದೇ ವೇಳೆ, ಕಾಂಗ್ರೆಸ್ ನಾಯಕರ ಮಕ್ಕಳು ಬಿಜೆಪಿಗೆ ಸೇರ್ಪಡೆಯಾಗಿರುವುದು ತಪ್ಪು ಎಂದು ಕಿಡಿಕಾರಿದ್ದಾರೆ. ತಮ್ಮ ಮಗನ ರಾಜಕೀಯದ ಬಗ್ಗೆ ಪದೇ ಪದೆ ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಆ್ಯಂಟನಿ, ಕಾಂಗ್ರೆಸ್ ಪಕ್ಷವೇ ನನ್ನ ಧರ್ಮ ಎಂದಷ್ಟೇ ಹೇಳಿದರು. 2023ರ ಏಪ್ರಿಲ್ನಲ್ಲಿ ಅನಿಲ್ ಆ್ಯಂಟನಿ ಬಿಜೆಪಿ ಸೇರ್ಪಡೆಗೊಂಡಿದ್ದರು.
ಗುಜರಾತ್ ಗಲಭೆ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರ ವಿಷಯವಾಗಿ ಕಾಂಗ್ರೆಸ್ನೊಂದಿಗೆ ಅನಿಲ್ ಆ್ಯಂಟನಿ ಭಿನ್ನಾಭಿಪ್ರಾಯ ಹೊಂದಿದ್ದರು. ಇದೇ ವಿಷಯವಾಗಿ ಪಕ್ಷದ ನಡೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಜೊತೆಗೆ ಕೇರಳ ಕಾಂಗ್ರೆಸ್ನ ಡಿಜಿಟಲ್ ಮೀಡಿಯಾ ಸಂಚಾಲಕ, ಎಐಸಿಸಿ ಸೋಷಿಯಲ್ ಮೀಡಿಯಾ ಮತ್ತು ಡಿಜಿಟಲ್ ಕಮ್ಯುನಿಕೇಷನ್ ಸೆಲ್ನ ರಾಷ್ಟ್ರೀಯ ಸಂಯೋಜಕರ ಹುದ್ದೆಗೆ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್ ತೊರೆದ ಎರಡು ತಿಂಗಳ ನಂತರ ಬಿಜೆಪಿಗೆ ಸೇರಿದ್ದರು. ಈಗ ಬಿಜೆಪಿ ಟಿಕೆಟ್ನಿಂದ ಲೋಕಸಭೆ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಇದನ್ನೂ ಓದಿ: ದೇಶದ ಎಲ್ಲ ಸಮಸ್ಯೆಗಳಿಗೆ ಮೂಲವೇ ಕಾಂಗ್ರೆಸ್; ಈ ಚುನಾವಣೆ ಸ್ಥಿರತೆ, ಅಸ್ಥಿರತೆಯ ನಡುವಿನ ಹೋರಾಟ: ಪ್ರಧಾನಿ ಮೋದಿ