ರಾಂಚಿ (ಜಾರ್ಖಂಡ್): ಜೆಎಂಎಂ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದ ಸಿಎಂ ಆಗಿರುವ ಚಂಪೈ ಸೊರೇನ್, ಸಚಿವ ಸಂಪುಟ ವಿಸ್ತರಣೆಗೂ ಮೊದಲೇ ಬಂಡಾಯ ಎದುರಿಸುವ ಆತಂಕ ಎದುರಾಗಿದೆ. ಸಂಪುಟದಲ್ಲಿರುವ ನಾಲ್ವರು ಕಾಂಗ್ರೆಸ್ ಸಚಿವರನ್ನು ಕೈಬಿಡಬೇಕು ಎಂದು ಸ್ವಪಕ್ಷೀಯ ಶಾಸಕರೇ ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ 12 ಎಂಎಲ್ಎಗಳು ಸರ್ಕಾರದ ವಿರುದ್ಧ ತಿರುಗಿ ಬೀಳುವ ಎಚ್ಚರಿಕೆ ನೀಡಿದ್ದಾರೆ.
ನಮ್ಮದೇ ಪಕ್ಷದ ಮಂತ್ರಿಗಳು ನಮ್ಮ ಅಹವಾಲುಗಳನ್ನು ಆಲಿಸುತ್ತಿಲ್ಲ. ಕ್ಷೇತ್ರದಲ್ಲಿ ಕೆಲಸಗಳು ನಡೆಯುತ್ತಿಲ್ಲ. ಅವರೆಲ್ಲರ ಕಾರ್ಯವೈಖರಿಯೂ ತುಂಬಾ ನಿರಾಶದಾಯವಾಗಿದೆ. ಹೀಗಾಗಿ ಎಲ್ಲರನ್ನೂ ಸಂಪುಟದಿಂದ ಹೊರಗಿಡಬೇಕು ಎಂದು ಶಾಸಕರು ಪಟ್ಟು ಹಿಡಿದಿದ್ದಾರೆ.
ನಾವು ಸರ್ಕಾರದ ವಿರುದ್ಧವಿಲ್ಲ: ನಮ್ಮ ಕೋಪ ಜಾರ್ಖಂಡ್ ಸರ್ಕಾರ ಅಥವಾ ಹೈಕಮಾಂಡ್ ಮೇಲಲ್ಲ. ನಮ್ಮದೇ ಪಕ್ಷದ ಸಚಿವರು ಉತ್ತಮವಾಗಿ ಕೆಲಸ ಮಾಡುತ್ತಿಲ್ಲ. ಶಾಸಕರು ಸಮಸ್ಯೆಗಳನ್ನು ಆಲಿಸುತ್ತಿಲ್ಲ. ಹೀಗಾಗಿ ಅವರನ್ನು ಸಂಪುಟದಿಂದ ಕೈಬಿಡಿ ಎಂದು ಈ ಹಿಂದೆಯೇ ಮನವಿ ಮಾಡಿದ್ದೆವು. ಸಿಎಂ ಚಂಪೈ ಸೊರೆನ್ ಸಂಪುಟದಿಂದ ತೆಗೆದು ಹಾಕದಿದ್ದರೆ, 12 ಶಾಸಕರು ಯಾವ ಮಟ್ಟಕ್ಕೆ ಬೇಕಾದರೂ ತೆರಳಲು ಸಿದ್ಧ ಎಂದು ಕಾಂಗ್ರೆಸ್ ಶಾಸಕ ಇರ್ಫಾನ್ ಅನ್ಸಾರಿ ಎಚ್ಚರಿಕೆ ನೀಡಿದ್ದಾರೆ.
ಮಾಜಿ ಸಿಎಂ ಹೇಮಂತ್ ಸೊರೇನ್ ಅವರ ಸಂಪುಟದಲ್ಲಿದ್ದ ಕಾಂಗ್ರೆಸ್ ಸಚಿವರನ್ನೇ ಮತ್ತೆ ಚಂಪೈ ಸರ್ಕಾರದಲ್ಲಿ ಮುಂದುವರಿಸಲು ಯೋಜಿಸಲಾಗಿದೆ. ಇದು ಉಳಿದ ಶಾಸಕರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಹೊಸಬರಿಗೆ ಅವಕಾಶ ನೀಡಬೇಕು ರಾಂಚಿಯ ಖಿಜ್ರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜೇಶ್ ಕಚಾಪ್ ಹೇಳಿದ್ದಾರೆ.
ಬೆಂಗಳೂರು ಅಥವಾ ಜೈಪುರಕ್ಕೆ ಶಾಸಕರು: ಶತಾಯಗತಾಯ ಸಚಿವರನ್ನು ಸಂಪುಟದಿಂದ ಹೊರಗಿಡುವಂತೆ ಒತ್ತಡ ಹಾಕಲು ಮತ್ತು ಶಾಸಕರು ಒಗ್ಗಟ್ಟು ಪ್ರದರ್ಶಿಸಲು ಕರ್ನಾಟಕದ ಬೆಂಗಳೂರು ಅಥವಾ ರಾಜಸ್ಥಾನದ ಜೈಪುರಕ್ಕೆ ತೆರಳಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದರ ಜೊತೆಗೆ ರಾಜ್ಯ ಉಸ್ತುವಾರಿ ನಾಯಕರಿಗೆ ಲಿಖಿತವಾಗಿ ಈ ಬಗ್ಗೆ ತಿಳಿಸಲಾಗಿದೆ. ಮುಂದುವರಿದು ರಾಹುಲ್ ಗಾಂಧಿ ಹಾಗೂ ಕೆ.ಸಿ.ವೇಣುಗೋಪಾಲ್ಗೂ ದೂರು ನೀಡಲು ಶಾಸಕರು ಮುಂದಾಗಿದ್ದಾರೆ.
ಬಜೆಟ್ ಅಧಿವೇಶನ ಆರಂಭವಾಗುತ್ತಿರುವ ಹೊತ್ತಿನಲ್ಲೇ ಕಾಂಗ್ರೆಸ್ ಶಾಸಕರು ಧ್ವನಿ ಎತ್ತಿದ್ದಾರೆ. ಬಜೆಟ್ ಮಂಡನೆ ಬಳಿಕ ಹಣಕಾಸು ಮಸೂದೆಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಬೇಕು. ಈ ವೇಳೆ ಶಾಸಕರು ಗೈರಾದಲ್ಲಿ ಸರ್ಕಾರ ಪತನವಾಗುವ ಆತಂಕವೂ ಇದೆ. ಕಾಂಗ್ರೆಸ್ ಶಾಸಕರ ವಿರೋಧದಿಂದಾಗಿ ಈಗಾಗಲೇ ಎರಡು ಬಾರಿ ಸಂಪುಟ ವಿಸ್ತರಣೆಯನ್ನು ಮುಂದೂಡಲಾಗಿದೆ. ಮೊದಲ ಸಭೆಯಲ್ಲಿ ಬಹಿರಂಗವಾಗಿಯೇ ಶಾಸಕರು ಸಚಿವರ ವಿರುದ್ಧ ಹರಿಹಾಯ್ದಿದ್ದರು.
ಇದನ್ನೂ ಓದಿ: ನನ್ನ ವಿರುದ್ಧದ ಭ್ರಷ್ಟಾಚಾರ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ: ಹೇಮಂತ್ ಸೊರೇನ್