ಹೈದರಾಬಾದ್ : ಆಂಧ್ರಪ್ರದೇಶದ ಆರು ಮಾಜಿ ಮುಖ್ಯಮಂತ್ರಿಗಳ ಮಕ್ಕಳು ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.
ವೈ.ಎಸ್. ಜಗನ್ ಮೋಹನ್ ರೆಡ್ಡಿ : ಹಾಲಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಪುಲಿವೆಂದುಲ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಇವರು ಮಾಜಿ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ್ ರೆಡ್ಡಿ ಅವರ ಪುತ್ರರಾಗಿದ್ದಾರೆ. ರಾಜಶೇಖರ್ ರೆಡ್ಡಿ 1978 ಮತ್ತು 2009 ರ ನಡುವೆ ವೈಎಸ್ಆರ್ ಕುಟುಂಬದ ಭದ್ರಕೋಟೆಯಾದ ಪುಲಿವೆಂದುಲ ಕ್ಷೇತ್ರವನ್ನು ಆರು ಬಾರಿ ಪ್ರತಿನಿಧಿಸಿದ್ದರು. ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳ ನಂತರ ಅವರು ಸೆಪ್ಟೆಂಬರ್ 2, 2009 ರಂದು ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾಗಿದ್ದರು.
ನಾರಾ ಲೋಕೇಶ್ : ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಮತ್ತು ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಅವರು 2019 ರಲ್ಲಿ ಮೊದಲ ಬಾರಿಗೆ ಮಂಗಳಗಿರಿಯಿಂದ ಸ್ಪರ್ಧಿಸಿ ಸೋತಿದ್ದರು. ಈಗ ಎರಡನೇ ಬಾರಿಗೆ ಅವರು ತಮ್ಮ ಅದೃಷ್ಟ ಪರೀಕ್ಷೆ ಮಾಡಲಿದ್ದಾರೆ. ಈ ಬಾರಿ ಲೋಕೇಶ್ಗೆ ವೈಎಸ್ಆರ್ಸಿಪಿಯ ಎಂ. ಲಾವಣ್ಯ ನೇರ ಎದುರಾಳಿಯಾಗಿದ್ದಾರೆ. ಲೋಕೇಶ್ ಅವರು 1982 ರಲ್ಲಿ ಟಿಡಿಪಿ ಸ್ಥಾಪಿಸಿದ ಮಾಜಿ ಸಿಎಂ ಮತ್ತು ಟಾಲಿವುಡ್ ದಂತಕಥೆ ಎನ್ ಟಿ ರಾಮರಾವ್ (ಎನ್ ಟಿಆರ್) ಅವರ ಮೊಮ್ಮಗ.
ಎನ್ ಬಾಲಕೃಷ್ಣ: ಟಾಲಿವುಡ್ ನಟ ಮತ್ತು ಮಾಜಿ ಮುಖ್ಯಮಂತ್ರಿ ಎನ್ಟಿಆರ್ ಅವರ ಪುತ್ರ ಹಿಂದೂಪುರ ಶಾಸಕ ಎನ್ ಬಾಲಕೃಷ್ಣ ಮತ್ತೆ ಅದೇ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಎನ್ಟಿಆರ್ ಕುಟುಂಬದ ಭದ್ರಕೋಟೆಯಾಗಿರುವ ಹಿಂದೂಪುರವನ್ನು ಈ ಹಿಂದೆ ರಾಮರಾವ್ ಮತ್ತು ಅವರ ಹಿರಿಯ ಮಗ ಎನ್ ಹರಿಕೃಷ್ಣ ಪ್ರತಿನಿಧಿಸಿದ್ದರು. 2014 ಮತ್ತು 2019ರಲ್ಲಿ ಹಿಂದೂಪುರ ಕ್ಷೇತ್ರದಿಂದ ಗೆದ್ದಿದ್ದ ಬಾಲಕೃಷ್ಣ ಹ್ಯಾಟ್ರಿಕ್ ಗೆಲುವಿನ ಗುರಿ ಹೊಂದಿದ್ದಾರೆ.
ಎನ್ ಮನೋಹರ್ : ಟಿಡಿಪಿ, ಜನಸೇನಾ ಮತ್ತು ಬಿಜೆಪಿಯನ್ನು ಒಳಗೊಂಡ ಎನ್ಡಿಎ ಪರವಾಗಿ ತೆನಾಲಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಜನಸೇನಾ ನಾಯಕ ಎನ್ ಮನೋಹರ್ ಅವರು ಮಾಜಿ ಸಿಎಂ ಎನ್ ಭಾಸ್ಕರ್ ರಾವ್ ಅವರ ಪುತ್ರ.
ಎನ್. ರಾಮ್ ಕುಮಾರ್ ರೆಡ್ಡಿ : ಮಾಜಿ ಮುಖ್ಯಮಂತ್ರಿ ಎನ್. ಜನಾರ್ದನ ರೆಡ್ಡಿ ಅವರ ಪುತ್ರ ಎನ್. ರಾಮ್ ಕುಮಾರ್ ರೆಡ್ಡಿ ವೆಂಕಟಗಿರಿ ಕ್ಷೇತ್ರದಿಂದ ವೈಎಸ್ಆರ್ಸಿಪಿ ಟಿಕೆಟ್ನಲ್ಲಿ ಸ್ಪರ್ಧಿಸುತ್ತಿದ್ದರೆ, ಮತ್ತೋರ್ವ ಮಾಜಿ ಸಿಎಂ ಕೆ. ವಿಜಯಭಾಸ್ಕರ್ ರೆಡ್ಡಿ ಅವರ ಪುತ್ರ ಕೆ. ಸೂರ್ಯ ಪ್ರಕಾಶ್ ರೆಡ್ಡಿ ಧೋನ್ ಕ್ಷೇತ್ರದಿಂದ ಟಿಡಿಪಿ ಟಿಕೆಟ್ನಲ್ಲಿ ಸ್ಪರ್ಧಿಸುತ್ತಿದ್ದಾರೆ.
ವೈ.ಎಸ್. ಶರ್ಮಿಳಾ : ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ್ ರೆಡ್ಡಿ ಅವರ ಪುತ್ರಿಯಾಗಿರುವ ಶರ್ಮಿಳಾ ಅವರು ಕಡಪ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. (ವೈಎಸ್ ಜಗನ್ಮೋಹನ್ ರೆಡ್ಡಿ ಮತ್ತು ಶರ್ಮಿಳಾ ಇವರಿಬ್ಬರೂ ವೈಎಸ್ಆರ್ ಅವರ ಮಕ್ಕಳು)
ಪುರಂದೇಶ್ವರಿ: ರಾಜಮಹೇಂದ್ರವರಂ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಆಂಧ್ರಪ್ರದೇಶದ ಬಿಜೆಪಿ ಅಧ್ಯಕ್ಷೆ ಪುರಂದೇಶ್ವರಿ ಅವರು ಮಾಜಿ ಸಿಎಂ ಎನ್ಟಿಆರ್ ಅವರ ಪುತ್ರಿ. (ಬಾಲಕೃಷ್ಣ ಮತ್ತು ಪುರಂದೇಶ್ವರಿ ಇವರಿಬ್ಬರೂ ಎನ್ಟಿಆರ್ ಅವರ ಮಕ್ಕಳು. ಲೋಕೇಶ್ ಎನ್ಟಿಆರ್ ಅವರ ಮೊಮ್ಮಗ)