ಶ್ರೀನಗರ: ಭಾರೀ ಮಳೆ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯ ಬಲ್ತಾಲ್ ಮಾರ್ಗದಲ್ಲಿ ಅಮರನಾಥ ಯಾತ್ರೆಯನ್ನು ಸೋಮವಾರ ಸ್ಥಗಿತಗೊಳಿಸಲಾಗಿದೆ. ಇದಕ್ಕೂ ಮುನ್ನ ಪಹಲ್ಗಾಮ್ ಮಾರ್ಗದಲ್ಲಿಯೂ ಯಾತ್ರೆಯು ಶನಿವಾರವೇ ಬಂದ್ ಆಗಿತ್ತು.
ಭಾನುವಾರದಂದು ಪಹಲ್ಗಾಮ್ ಮತ್ತು ಬಲ್ತಾಲ್ ಮಾರ್ಗಗಳ ಅಮರನಾಥ ಯಾತ್ರಾ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿದಿದೆ. ಈ ಮಾರ್ಗಗಳಿಗೆ ತುರ್ತು ನಿರ್ವಹಣೆ ಅಗತ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
"ಇಂದು ಭಾರೀ ಮಳೆಯಾಗುತ್ತಿರುವ ಕಾರಣ, ಶ್ರೀ ಅಮರನಾಥ ಜೀ ಯಾತ್ರಾ ಮಾರ್ಗದ ಬಲ್ತಾಲ್ ಬಳಿ ತುರ್ತಾಗಿ ದುರಸ್ತಿ ಮತ್ತು ನಿರ್ವಹಣಾ ಕಾರ್ಯ ಕೈಗೊಳ್ಳಬೇಕಾಗಿದೆ. ಯಾತ್ರಿಗಳ ಸುರಕ್ಷತೆಯ ಹಿತದೃಷ್ಟಿಯಿಂದ, ಸೋಮವಾರ ಯಾವುದೇ ಯಾತ್ರೆಗೆ ಅವಕಾಶವಿಲ್ಲ. ಬಲ್ತಾಲ್ ಮಾರ್ಗದ ಮರು ಆರಂಭದ ಬಗ್ಗೆ ಸೂಕ್ತ ಸಮಯದಲ್ಲಿ ಮಾಹಿತಿ ನೀಡಲಾಗುವುದು'' ಎಂದು ಕಾಶ್ಮೀರ ವಿಭಾಗೀಯ ಆಯುಕ್ತ ವಿಜಯ್ ಕುಮಾರ್ ಬಿಧುರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಯಾತ್ರೆಯ ಪಹಲ್ಗಾಮ್ ಮಾರ್ಗದಲ್ಲಿ ಈಗಾಗಲೇ ಅಗತ್ಯ ದುರಸ್ತಿ ಮತ್ತು ನಿರ್ವಹಣಾ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಬಿಧುರಿ ಹೇಳಿದರು. ಪಹಲ್ಗಾಮ್ ಮಾರ್ಗದಲ್ಲಿ ರಿಪೇರಿ ಕಾರಣ ಶನಿವಾರ ಜಮ್ಮು ಜಿಲ್ಲೆಯಿಂದ ಕಾಶ್ಮೀರ ಕಣಿವೆಯಿಂದ ಮುಂದಿನ ಪ್ರಯಾಣಕ್ಕೆ ಯಾತ್ರಿಕರಿಗೆ ಅನುಮತಿಸಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
52 ದಿನಗಳ ಅಮರನಾಥ ಯಾತ್ರೆಯು ಜೂನ್ 29ರಂದು ಪ್ರಾರಂಭಗೊಂಡಿದೆ. ಆಗಸ್ಟ್ 19ರಂದು ಮುಕ್ತಾಯಗೊಳ್ಳಲಿದೆ. ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಜಮ್ಮು ಜಿಲ್ಲೆಯ ಭಗವತಿ ನಗರ ಯಾತ್ರಿ ನಿವಾಸದ ಬಳಿ ಯಾತ್ರೆಗೆ ಚಾಲನೆ ನೀಡಿದ್ದರು.
ಪ್ರಸ್ತುತ ಶ್ರೀನಗರದ ಮೈಸುಮಾದಲ್ಲಿರುವ ದಶನಮಿ ಅಖಾಡದಲ್ಲಿ ಭಕ್ತರ ದರ್ಶನಕ್ಕಾಗಿ ಇರಿಸಲಾಗಿರುವ ಪವಿತ್ರ ಛಾರಿ ಮುಬಾರಕ್ ಗದೆಯನ್ನು ಅದರ ಪಾಲಕರಾದ ಮಹಂತ್ ದೀಪೇಂದ್ರ ಗಿರಿ ಅವರು ಪವಿತ್ರ ಗುಹಾ ದೇಗುಲಕ್ಕೆ ಕೊಂಡೊಯ್ಯಲಿದ್ದಾರೆ. ರಕ್ಷಾ ಬಂಧನದಂದೇ ಈ ಶುಭ ಕಾರ್ಯ ನಡೆಯಲಿದೆ. ಗದೆಯು ದೇಗುಲವನ್ನು ತಲುಪುವುದರೊಂದಿಗೆ ಯಾತ್ರೆಗೆ ತೆರೆ ಬೀಳಲಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ತಡರಾತ್ರಿ ಮಳೆ: ಬಿಟಿಎಂ, ಸಿಟಿ ಮಾರ್ಕೆಟ್ ರಸ್ತೆಗಳು ಜಲಾವೃತ - Bengaluru rain