ಪ್ರಯಾಗ್‌ರಾಜ್ (ಉತ್ತರ ಪ್ರದೇಶ): ಕಾಶಿ ವಿಶ್ವನಾಥನ ಹಳೆಯ ದೇಗುಲ ಎಂದೇ ಹೇಳಲಾಗುವ ಜ್ಞಾನವಾಪಿ ಮಸೀದಿಯೊಳಗಿನ ನೆಲಮಾಳಿಗೆಯಲ್ಲಿ (ವ್ಯಾಸ್ ತೆಹಖಾನಾ) ಹಿಂದೂಗಳು ಸಲ್ಲಿಸುತ್ತಿರುವ ಪೂಜೆಯನ್ನು ನಿಲ್ಲಿಸಬೇಕು ಎಂದು ಕೋರಿ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ (ಎಐಎಂಸಿ) ಸಲ್ಲಿಸಿರುವ ತಕರಾರು ಅರ್ಜಿಯ ಕುರಿತು ಅಲಹಾಬಾದ್ ಹೈಕೋರ್ಟ್ ಇಂದು(ಸೋಮವಾರ) ತೀರ್ಪು ನೀಡಲಿದೆ.
ಜ್ಞಾನವಾಪಿಯಲ್ಲಿನ ವ್ಯಾಸ್ ತೆಹಖಾನಾದಲ್ಲಿ ಹಿಂದೂಗಳು ಪೂಜೆ ಸಲ್ಲಿಸಲು ವಾರಾಣಸಿ ಜಿಲ್ಲಾ ನ್ಯಾಯಾಲಯ ಅವಕಾಶ ನೀಡಿದೆ. ಅದರಂತೆ ತೆಹಖಾನಾದಲ್ಲಿ ನಿತ್ಯ ಪೂಜೆ ನಡೆಯುತ್ತಿದೆ. ಆದರೆ, ಇದು ಮಸೀದಿ ಜಾಗವಾಗಿದ್ದು, ಪೂಜೆಗೆ ಅವಕಾಶ ನೀಡಬಾರದು ಎಂದು ಕೋರಿ ಮುಸ್ಲಿಂ ಪಕ್ಷದವರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಅರ್ಜಿಯನ್ನು ಪುರಸ್ಕರಿಸಿದ ಕೋರ್ಟ್, ವಾದ ಪ್ರತಿವಾದ ಆಲಿಸಿ ತೀರ್ಪು ಕಾಯ್ದಿರಿಸಿದೆ. ಫೆಬ್ರವರಿ 26 ರಂದು ಅಂತಿಮ ತೀರ್ಪು ನೀಡಲಾಗುವುದು ಎಂದು ಹೇಳಿತ್ತು.
ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್‌ವಾಲ್ ಅವರಿದ್ದ ಪೀಠ ಇಂದು ಬೆಳಗ್ಗೆ 10 ಗಂಟೆಗೆ ತೀರ್ಪು ಪ್ರಕಟಿಸಲಿದ್ದಾರೆ. ಹಿಂದೂಗಳ ಪೂಜೆ ಸಿಂಧುವೇ, ಅಸಿಂಧುವೇ ಎಂಬುದು ಈ ತೀರ್ಪಿನ ಮೇಲೆ ನಿಂತಿದೆ.
ಈಗಿರುವ ಮಸೀದಿಯೊಳಗೆ ನಾಲ್ಕು ತೆಹಖಾನಾಗಳಿದ್ದು, ಅದರಲ್ಲಿ ಒಂದಾದ ವ್ಯಾಸ್ ತೆಹಖಾನಾ ಇಲ್ಲಿ ವಾಸಿಸುತ್ತಿರುವ ವ್ಯಾಸ್ ಕುಟುಂಬಕ್ಕೆ ಸೇರಿದ್ದಾಗಿದೆ. ಅದರಲ್ಲಿ ಅವರ ಕುಟುಂಬಸ್ಥರು ಹಿಂದಿನಿಂದಲೂ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ಕೆಲ ವರ್ಷಗಳ ಹಿಂದೆ ಪೂಜೆ ಸಲ್ಲಿಕೆಯನ್ನು ಉತ್ತರಪ್ರದೇಶ ಸರ್ಕಾರ ತಡೆ ಹಿಡಿದಿತ್ತು. ಇದಕ್ಕೆ ಮರು ಅವಕಾಶ ನೀಡಬೇಕು ಎಂದು ಕೋರಿ ವ್ಯಾಸ್ ಕುಟುಂಬ ವಾರಾಣಸಿ ಜಿಲ್ಲಾ ಕೋರ್ಟ್ಗೆ ಮನವಿ ಮಾಡಿತ್ತು. ಅದನ್ನು ಆಲಿಸಿದ್ದ ಕೋರ್ಟ್ ಜನವರಿ 17 ರಂದು ಪೂಜೆ ಸಲ್ಲಿಸಲು ಅವಕಾಶ ನೀಡಿ ಆದೇಶ ಹೊರಡಿಸಿತ್ತು. ಇದರ ವಿರುದ್ಧ ಮುಸ್ಲಿಂ ಪಕ್ಷಗಾರರು ಅರ್ಜಿ ಸಲ್ಲಿಸಿದ್ದಾರೆ.
ಸಂಸದ ಓವೈಸಿ ಆಕ್ಷೇಪ: ಎಐಎಂಐಎಂ ಅಧ್ಯಕ್ಷ, ಸಂಸದ ಅಸಾದುದ್ದೀನ್ ಓವೈಸಿ ಜ್ಞಾನವಾಪಿಯಲ್ಲಿ ಹಿಂದೂಗಳು ಪೂಜೆ ಸಲ್ಲಿಸುತ್ತಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವ್ಯಾಸ್ ತೆಹಖಾನಾದಲ್ಲಿ ಹಿಂದೂ ಭಕ್ತರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿದ ವಾರಾಣಸಿ ನ್ಯಾಯಾಲಯದ ತೀರ್ಪು ಪೂಜಾ ಸ್ಥಳಗಳ ಆರಾಧನಾ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.
ನ್ಯಾಯಾಧೀಶರು ತಮ್ಮ ನಿವೃತ್ತಿಯ ಕೊನೆ ದಿನದಂದು ಈ ತೀರ್ಪು ನೀಡಿದ್ದಾರೆ. ತೆಹಖಾನಾದಲ್ಲಿ ವಿಗ್ರಹಗಳಿವೆ ಎಂದು ಹೇಳಲು ಯಾವ ಆಧಾರವಿದೆ. 30 ವರ್ಷಗಳ ಹಿಂದೆ ಅಲ್ಲಿ ಪೂಜೆ ಸಲ್ಲಿಸಲಾಗುತ್ತಿತ್ತು ಎಂಬ ವಾದವನ್ನ ಮಾತ್ರ ಆಲಿಸಲಾಗಿದೆ. ಪೂಜಾ ಸ್ಥಳಗಳ ಆರಾಧನಾ ಕಾಯ್ದೆಯನ್ನು ಇಲ್ಲಿ ಪರಿಗಣಿಸಲಾಗಿಲ್ಲ ಎಂದು ಆಪಾದಿಸಿದ್ದಾರೆ.
ಇದನ್ನೂ ಓದಿ: ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಹಿಂದೂಗಳ ಪೂಜೆಗೆ ತಡೆ ನೀಡಲು ಅಲಹಾಬಾದ್ ಹೈಕೋರ್ಟ್ ನಕಾರ