ಪುರಿ (ಒಡಿಶಾ): ಇಲ್ಲಿನ ಖ್ಯಾತ ಜಗನ್ನಾಥ ದೇವಾಲಯದ ಖಜಾನೆಯನ್ನು (ರತ್ನ ಭಂಡಾರ) 46 ವರ್ಷಗಳ ನಂತರ ತೆರೆಯಲಾಗಿದ್ದು, ಐದು ಪೆಟ್ಟಿಗೆಗಳಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಚಿನ್ನ, ಬೆಳ್ಳಿ, ಇತರ ವಸ್ತುಗಳಿವೆ. ರತ್ನ ಭಂಡಾರದ ಬಾಗಿಲಿನ ಕೀಲಿ ಕಳೆದುಹೋದ ಕಾರಣ, ಬೀಗಗಳನ್ನು ಮುರಿದು ಬಾಗಿಲು ತೆರೆಯಲಾಗಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಜಗನ್ನಾಥ ದೇವಸ್ಥಾನದ ಮುಖ್ಯ ಆಡಳಿತಾಧಿಕಾರಿ ಅರಬಿಂದ ಪಾಧಿ ಅವರು, ಜುಲೈ 14 ರಂದು ಜಗನ್ನಾಥನ ರತ್ನ ಭಂಡಾರವನ್ನು ತೆರೆಯಲಾಗಿದೆ. ಐದು ಪೆಟ್ಟಿಗೆಗಳನ್ನು ಹೊರತರಲಾಗಿದೆ. ಅದರಲ್ಲಿನ ವಸ್ತುಗಳ ಲೆಕ್ಕಾಚಾರ ಹಾಕಿಲ್ಲ. ಸಮಯದ ಅಭಾವದ ಕಾರಣ ಅವುಗಳನ್ನು ಮುಂದೆ ಎಣಿಕೆ ಮಾಡಲಾಗುವುದು ಎಂದರು.
#WATCH | Puri, Odisha: Special boxes brought to Shri Jagannath Temple ahead of the re-opening of Ratna Bhandar.
— ANI (@ANI) July 14, 2024
The Ratna Bhandar of the Shri Jagannath Temple is to be opened today following Standard Operating Procedure issued by the state government. pic.twitter.com/xwRdtQe0Ml
ತಾತ್ಕಾಲಿಕ ಲಾಕರ್‌ಗಳಿಗೆ ಸ್ಥಳಾಂತರ: ಕೀಲಿಗಳು ಕಳೆದುಹೋದ ಕಾರಣ, ಬಾಗಿಲಿನ ಬೀಗಗಳನ್ನು ಮುರಿಯಲಾಗಿದೆ. ನೇಮಿತ ವ್ಯಕ್ತಿಗಳು ಮಾತ್ರ ಖಜಾನೆಯನ್ನ ಪ್ರವೇಶಿಸಿದ್ದಾರೆ. ಹಾವು ಹಿಡಿಯುವವರು ಕೂಡ ಇದ್ದರು. ಕೆಲ ಹಾವುಗಳನ್ನು ಹಿಡಿಯಲಾಗಿದೆ. ರತ್ನ ಭಂಡಾರದ ಎಲ್ಲಾ ಆಭರಣಗಳನ್ನು ತಾತ್ಕಾಲಿಕ ಲಾಕರ್‌ಗಳಿಗೆ ಸ್ಥಳಾಂತರಿಸಲಾಗಿದೆ. ಒಳ ಭಾಗದಲ್ಲಿರುವ ಇನ್ನೊಂದು ಕೊಠಡಿಯಲ್ಲಿನ ಬಾಗಿಲುಗಳನ್ನು ತೆರೆದಿದ್ದರೂ, ಪೆಟ್ಟಿಗೆಗಳನ್ನು ಹೊರತರಲಾಗಿಲ್ಲ ಎಂದು ತಿಳಿಸಿದ್ದಾರೆ.
ಒಳಗಿನ ಕೊಠಡಿಯಲ್ಲಿರುವ ಆಭರಣಗಳನ್ನು ಯಾವಾಗ ಹೊರ ತರಬೇಕೆಂದು ಸಭೆ ನಡೆಸಿ ನಿರ್ಧರಿಸುತ್ತೇವೆ. ಈಗ ಹೊರತಂದ ಆಭರಣಗಳನ್ನು ಪುರಾತತ್ವ ಇಲಾಖೆಗೆ ಹಸ್ತಾಂತರಿಸಲಾಗುವುದು. ಎಎಸ್ಐ ರತ್ನಭಂಡಾರದ ನಿರ್ವಹಣೆಯನ್ನು ಪೂರ್ಣಗೊಳಿಸಿದ ನಂತರ, ಆಭರಣಗಳನ್ನು ತಾತ್ಕಾಲಿಕ ಸ್ಟ್ರಾಂಗ್ ರೂಂನಲ್ಲಿ ಇರಿಸಲಾಗುತ್ತದೆ. ಒಳ ಕೊಠಡಿಯ ಬಗ್ಗೆ ಮುಂದೆ ಯೋಚಿಸಲಾಗುವುದು ಎಂದರು.
46 ವರ್ಷಗಳ ನಂತರ ಪುರಿಯ ಜಗನ್ನಾಥ ದೇವಾಲಯದ ರತ್ನ ಭಂಡಾರವನ್ನು ಭಾನುವಾರ ಪುನಃ ತೆರೆಯಲಾಗಿದೆ. ರತ್ನ ಭಂಡಾರವು ಎರಡು ಕೋಣೆಗಳನ್ನು ಹೊಂದಿದೆ. ಭಿತರ್ ಭಂಡಾರ (ಒಳಗಿನ ಖಜಾನೆ) ಮತ್ತು ಬಹಾರ್ ಖಜಾನೆ (ಹೊರ ಖಜಾನೆ) ಎಂದು ಕರೆಯಲಾಗುತ್ತಿದೆ. ಜುಲೈ 14 ರಂದು ಹೊರ ಖಜಾನೆಯಲ್ಲಿನ ಪೆಟ್ಟಿಗೆಗಳನ್ನು ಮಾತ್ರ ಹೊರತರಲಾಗಿದೆ.
ರತ್ನ ಭಂಡಾರದಲ್ಲಿ ಏನಿದೆ?: ದಾಖಲೆಗಳ ಪ್ರಕಾರ, ದೇವಾಲಯದ ರತ್ನ ಭಂಡಾರದಲ್ಲಿ ಒಟ್ಟು 454 ಚಿನ್ನದ ವಸ್ತುಗಳಿವೆ. ಅದರ ಒಟ್ಟು ತೂಕ 128.38 ಕೆಜಿಯಾಗಿದೆ. 293 ಬೆಳ್ಳಿ ವಸ್ತುಗಳು ಇವೆ. ಇವುಗಳ ತೂಕ 22,153 ಗ್ರಾಂ, ಅಂದರೆ, 221.53 ಕೆಜಿ ಎಂದು ಹೇಳಲಾಗಿದೆ.
ರತ್ನ ಭಂಡಾರವನ್ನು ಕೊನೆಯ ಬಾರಿಗೆ 14 ಜುಲೈ 1985 ರಂದು ತೆರೆಯಲಾಗಿತ್ತು. ಅಂದಿನಿಂದ ಇದು ಮುಚ್ಚಲ್ಪಟ್ಟಿದೆ. ಅದರ ಕೀಲಿಯು ಕಾಣೆಯಾಗಿದೆ ಎಂದು ಹೇಳಲಾಗಿದೆ. 1905, 1926, 1978 ಮತ್ತು 1984 ರಲ್ಲಿ ಜಗನ್ನಾಥ ದೇವಾಲಯದ ರತ್ನ ಭಂಡಾರವನ್ನು ನಾಲ್ಕು ಬಾರಿ ಮಾತ್ರ ತೆರೆಯಲಾಗಿದೆ. ಇದರಲ್ಲಿ 1978 ರಲ್ಲಿ ತೆರೆದು ಎಣಿಸಲಾದ ವಸ್ತುಗಳ ದಾಖಲೆಯು ಅಧಿಕೃತವಾಗಿದೆ.
ಇದನ್ನೂ ಓದಿ: ಪುರಿ ಜಗನ್ನಾಥನ ರತ್ನ ಭಂಡಾರದ ಬಾಗಿಲು 46 ವರ್ಷಗಳ ಬಳಿಕ ಓಪನ್: ರಹಸ್ಯ ಕೊಠಡಿಯೊಳಗೇನಿದೆ? - PURI JAGANNATH RATNA BHANDAR