ಲಖನೌ (ಉತ್ತರಪ್ರದೇಶ): ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಅವರು 51ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಜುಲೈ 1, 1973 ರಂದು ಜನಿಸಿದ ಯಾದವ್ ಅವರು ಉತ್ತರ ಪ್ರದೇಶದ ಅತ್ಯಂತ ಕಿರಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಮಾರ್ಚ್ 2012 ರಲ್ಲಿ ತಮ್ಮ 38ನೇ ವಯಸ್ಸಿನಲ್ಲಿ ಸಿಎಂ ಪಟ್ಟವನ್ನು ಅಲಂಕರಿಸಿದ್ದರು.
ಎಸ್ಪಿ ಕಾರ್ಯಕರ್ತರು ರಾಜ್ಯಾದ್ಯಂತ ಕೇಕ್ ಕತ್ತರಿಸುವುದು, ಸಸಿ ನೆಡುವುದು, ಸಮುದಾಯ ಔತಣ, ಹಣ್ಣು ಹಂಪಲು, ರಕ್ತದಾನ ಸೇರಿದಂತೆ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಇಂದು ದೆಹಲಿಯಲ್ಲಿ ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಿರುವ ಯಾದವ್ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವಾರು ರಾಜಕೀಯ ವ್ಯಕ್ತಿಗಳಿಂದ ಹುಟ್ಟುಹಬ್ಬದ ಶುಭಾಶಯಗಳನ್ನು ಸ್ವೀಕರಿಸಿದ್ದಾರೆ.
ಅಖಿಲೇಶ್ ಯಾದವ್ ಇಟಾವಾ ಜಿಲ್ಲೆಯಲ್ಲಿ ಜನಿಸಿದರು ಮತ್ತು ಮೈಸೂರಿನಲ್ಲಿ ವ್ಯಾಸಂಗ ಮುಗಿಸಿದರು. ಆಗಾಗ್ಗೆ ಸ್ನೇಹಿತರೊಂದಿಗೆ ಊಟಿಗೆ ಭೇಟಿ ನೀಡುತ್ತಿರುತ್ತಾರೆ. ಅಖಿಲೇಶ್ ಯಾದವ್ ಅವರು ರಾಹುಲ್ ಗಾಂಧಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಬ್ಬರಿಗಿಂತ ಕಿರಿಯರು. ರಾಹುಲ್ ಗಾಂಧಿ ಜೂನ್ 19, 1970 ರಂದು ಜನಿಸಿದ್ದು, ಅವರು ಅಖಿಲೇಶ್ ಯಾದವ್ ಅವರಿಗಿಂತ ಮೂರು ವರ್ಷ ದೊಡ್ಡವರು. ಸಿಎಂ ಯೋಗಿ ಆದಿತ್ಯನಾಥ್ ಅವರು ಜೂನ್ 5, 1972 ರಂದು ಜನಿಸಿದ್ದು, ಅವರು ಅಖಿಲೇಶ್ ಯಾದವ್ ಅವರಿಗಿಂತ ಒಂದು ವರ್ಷ ದೊಡ್ಡವರಾಗಿದ್ದಾರೆ.
ಅಖಿಲೇಶ್ ಅವರು ನವೆಂಬರ್ 24, 1999 ರಂದು ಡಿಂಪಲ್ ಯಾದವ್ ಅವರನ್ನು ವಿವಾಹವಾದರು. ಅಖಿಲೇಶ್ ಯಾದವ್ ಅವರು ಮೊದಲು 2009 ರ ಲೋಕಸಭಾ ಚುನಾವಣೆಯಲ್ಲಿ ಫಿರೋಜಾಬಾದ್ ಕ್ಷೇತ್ರದಿಂದ ಸಂಸದರಾಗಿ ಆಯ್ಕೆ ಆಗಿದ್ದರು. ಅಖಿಲೇಶ್ ಮುಖ್ಯಮಂತ್ರಿಯಾಗಿ ಅವರ ಅಧಿಕಾರಾವಧಿಯು ಆಗ್ರಾ - ಲಕ್ನೋ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಮತ್ತು ಯುಪಿ 100 ಪೊಲೀಸ್ ಸೇವೆ, 108 ಆಂಬ್ಯುಲೆನ್ಸ್ ಸೇವೆ ಮತ್ತು ಮಹಿಳೆಯರಿಗಾಗಿ 1090 ಸಹಾಯವಾಣಿಯಂತಹ ಸೇವೆಗಳನ್ನು ಪ್ರಾರಂಭಿಸುವುದು ಸೇರಿದಂತೆ ಮಹತ್ವದ ಯೋಜನೆಗಳನ್ನು ಪ್ರಾರಂಭಿಸಿದ್ದರು.
ಸಿಎಂ ಯೋಗಿ ಆದಿತ್ಯನಾಥ್ ಎಕ್ಸ್‌ನಲ್ಲಿ ಪೋಸ್ಟ್ ಮೂಲಕ ಅಖಿಲೇಶ್ ಯಾದವ್ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. "ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಜನ್ಮದಿನದಂದು ಹೃತ್ಪೂರ್ವಕ ಅಭಿನಂದನೆಗಳು. ನಿಮಗೆ ದೀರ್ಘಾಯುಷ್ಯ ಮತ್ತು ಒಳ್ಳೆಯ ಆರೋಗ್ಯ ನೀಡಲೆಂದು ನಾನು ಭಗವಾನ್ ಶ್ರೀರಾಮನನ್ನು ಪ್ರಾರ್ಥಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ. ಎಸ್‌ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್‌ಗೋಪಾಲ್ ಯಾದವ್, ಶಿವಪಾಲ್ ಸಿಂಗ್ ಯಾದವ್ ಮತ್ತು ಬಿಎಸ್‌ಪಿ ವರಿಷ್ಠೆ ಮಾಯಾವತಿ ಸೇರಿದಂತೆ ಇತರ ಪ್ರಮುಖ ನಾಯಕರು ಈ ಸಂದರ್ಭದಲ್ಲಿ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.