ಗುವಾಹಟಿ(ಅಸ್ಸಾಂ): ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದ ಫೇರ್‌ಪ್ಲೇ ಬೆಟ್ಟಿಂಗ್ ಅಪ್ಲಿಕೇಶನ್‌ನಲ್ಲಿ ಐಪಿಎಲ್ ಪಂದ್ಯ ವೀಕ್ಷಿಸಲು ಪ್ರೋತ್ಸಾಹಿಸುವ ವಿವಾದಿತ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಬಹುಭಾಷಾ ನಟಿ ತಮನ್ನಾ ಭಾಟಿಯಾರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಗುರುವಾರ ವಿಚಾರಣೆ ನಡೆಸಿದೆ.
ವಿವಾದಿತ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕೆ ನಟಿಗೆ ಇ.ಡಿ. ಅಧಿಕಾರಿಗಳು ಸಮನ್ಸ್ ನೀಡಿದ್ದರು. ಇದರಿಂದ ಬಾಲಿವುಡ್ ನಟಿ ಗುರುವಾರ ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿರುವ ಇಡಿ ಕಚೇರಿಗೆ ಹಾಜರಾಗಿದ್ದರು. ತಮ್ಮ ಪೋಷಕರೊಂದಿಗೆ ಮಧ್ಯಾಹ್ನ 1.25ರ ಸುಮಾರಿಗೆ ಗುವಾಹಟಿಯ ಇಡಿ ಕಚೇರಿಗೆ ಆಗಮಿಸಿದ್ದರು. ಅವರನ್ನು ಇ.ಡಿ. ಕಚೇರಿಯಲ್ಲಿ 5 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ.
ನಟಿ ಕಾಣಿಸಿಕೊಂಡ ಜಾಹೀರಾತಿನ ಫೇರ್‌ಪ್ಲೇ ಆ್ಯಪ್, ದೇಶದಲ್ಲಿ ಭಾರೀ ಸಂಚಲನ ಉಂಟು ಮಾಡಿದ್ದ ಮಹಾದೇವ್ ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ಆ್ಯಪ್ನ ಅಂಗಸಂಸ್ಥೆಯಾಗಿದೆ. ಇದರ ಮೇಲೆ ಕೋಟ್ಯಂತರ ರೂಪಾಯಿ ಬೆಟ್ಟಿಂಗ್ ನಡೆಸಿದ ಆರೋಪವಿದೆ. ಇದಕ್ಕೆ ಸಂಬಂಧಿಸಿದ ಆ್ಯಪ್ನಲ್ಲಿ ತಮನ್ನಾ ನಟಿಸಿದ್ದರಿಂದ ಇ.ಡಿ. ವಿಚಾರಣೆಗೆ ಕರೆದಿತ್ತು.
ಏನಿದು ಫೇರ್‌ಪ್ಲೇ ಆ್ಯಪ್?: FairPlay ವಿವಿಧ ಕ್ರೀಡೆಗಳು ಮತ್ತು ಮನರಂಜನಾ ಜೂಜಿನ ಆಯ್ಕೆಗಳನ್ನು ನೀಡುವ ಬೆಟ್ಟಿಂಗ್ ಆ್ಯಪ್. ಮಹಾದೇವ್ ಆನ್‌ಲೈನ್ ಗೇಮಿಂಗ್ ಅಪ್ಲಿಕೇಶನ್‌ನ ಅಂಗಸಂಸ್ಥೆ. ಇದು ಕ್ರಿಕೆಟ್, ಪೋಕರ್, ಬ್ಯಾಡ್ಮಿಂಟನ್, ಟೆನಿಸ್, ಫುಟ್‌ಬಾಲ್, ಇಸ್ಪೀಟ್ ಆಟಗಳು ಮತ್ತು ಇತರ ಆಟಗಳ ಮೇಲೆ ಬೆಟ್ಟಿಂಗ್ ಮಾಡಲು ಅವಕಾಶ ನೀಡುತ್ತದೆ.
ಮಹದೇವ್ ಬೆಟ್ಟಿಂಗ್ ಅಪ್ಲಿಕೇಶನ್ ಜಾಹೀರಾತಿಗೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಅವರಿಗೂ ಜಾರಿ ನಿರ್ದೇಶನಾಲಯ (ಇ.ಡಿ.) ಸಮನ್ಸ್ ನೀಡಿ ವಿಚಾರಣೆ ನಡೆಸಿತ್ತು. ಪ್ರಕರಣದಲ್ಲಿ ನಟಿ ಸಾಹಿಲ್ ಖಾನ್ರನ್ನು ಮುಂಬೈ ಸೈಬರ್ ಕ್ರೈಂ ತಂಡ ಬಂಧಿಸಿತ್ತು. ನಟಿಯರಾದ ಹುಮಾ ಖುರೇಷಿ ಮತ್ತು ಹಿನಾ ಖಾನ್ ಅವರ ಹೆಸರೂ ಪ್ರಕರಣದಲ್ಲಿ ಕೇಳಿಬಂದಿದೆ.
ಇದನ್ನೂ ಓದಿ: ಮಹಿಳೆಯ ಹೊಟ್ಟೆಯಲ್ಲಿತ್ತು 3 ಕೆ.ಜಿ ತೂಕದ ಕೂದಲು: ಆಕೆಗಿತ್ತು ಕೇಶ ತಿನ್ನುವ ಕೆಟ್ಟ ಅಭ್ಯಾಸ!