ಅಜ್ಮೀರ್(ರಾಜಸ್ಥಾನ): 1993ರ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಆರೋಪಿ ಅಬ್ದುಲ್ ಕರೀಮ್ ತುಂಡಾನನ್ನು ಭಯೋತ್ಪಾದಕ ಮತ್ತು ವಿಚ್ಛಿದ್ರಕಾರಿ ಚಟುವಟಿಕೆಗಳ ತಡೆ ಕಾಯ್ದೆ (ಟಾಡಾ) ನ್ಯಾಯಾಲಯ ಗುರುವಾರ ಖುಲಾಸೆಗೊಳಿಸಿ ಆದೇಶಿಸಿದೆ. ಇನ್ನಿಬ್ಬರು ಆರೋಪಿಗಳಾದ ಇರ್ಫಾನ್ ಮತ್ತು ಹಮೀದುದ್ದೀನ್ ಎಂಬವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
81 ವರ್ಷದ ತುಂಡಾ ಮೋಸ್ಟ್ ವಾಂಟೆಡ್ ಭಯೋತ್ಪಾದಕ ದಾವೂದ್ ಇಬ್ರಾಹಿಂನ ಆಪ್ತ ಸಹಾಯಕ. ಈತನ ವಿರುದ್ಧದ ಆರೋಪಗಳಿಗೆ ಪುರಾವೆಗಳ ಕೊರತೆಯಿಂದ ಖುಲಾಸೆಗೊಳಿಸಿ ನ್ಯಾಯಾಧೀಶ ಮಹಾವೀರ್ ಪ್ರಸಾದ್ ಗುಪ್ತಾ ಆದೇಶಿಸಿದ್ದಾರೆ. ಇಂದು ಪ್ರಕರಣದ ತೀರ್ಪು ಪ್ರಕಟ ಹಿನ್ನೆಲೆಯಲ್ಲಿ ಪೊಲೀಸರು ಮೂವರನ್ನೂ ಅಜ್ಮೀರ್ ಕೇಂದ್ರ ಕಾರಾಗೃಹದಿಂದ ನ್ಯಾಯಾಲಯಕ್ಕೆ ಕರೆದೊಯ್ದು ಹಾಜರುಪಡಿಸಿದ್ದರು.
ಪ್ರಕರಣದ ಹಿನ್ನೆಲೆ: ಬಾಬರಿ ಮಸೀದಿ ಧ್ವಂಸಗೊಂಡು ಒಂದು ವರ್ಷವಾದ ಅಂಗವಾಗಿ 1993ರಲ್ಲಿ ಐದು ಪ್ಯಾಸೆಂಜರ್ ರೈಲುಗಳಲ್ಲಿ ಸ್ಫೋಟಗಳನ್ನು ನಡೆಸಲಾಗಿತ್ತು. ಆ ವರ್ಷದ ಡಿಸೆಂಬರ್ 5-6ರ ಮಧ್ಯರಾತ್ರಿ ಲಖನೌ, ಕಾನ್ಪುರ, ಹೈದರಾಬಾದ್, ಸೂರತ್ ಮತ್ತು ಮುಂಬೈನಲ್ಲಿ ಪ್ಯಾಸೆಂಜರ್ ರೈಲುಗಳಲ್ಲಿ ಈ ಸ್ಫೋಟಗಳು ಸಂಭವಿಸಿದ್ದವು. ಇದರಲ್ಲಿ ಇಬ್ಬರು ಸಾವನ್ನಪ್ಪಿ, ಕನಿಷ್ಠ 22 ಮಂದಿ ಗಾಯಗೊಂಡಿದ್ದರು.
ಇದೀಗ ಪ್ರಕರಣದ ತೀರ್ಪು ಪ್ರಕಟಿಸಿರುವ ಕೋರ್ಟ್, ರೈಲುಗಳಲ್ಲಿ ಬಾಂಬ್ ಸ್ಫೋಟಗಳನ್ನು ಇಟ್ಟು, ರೈಲ್ವೆ ಆಸ್ತಿ ಮತ್ತು ಜನರ ಜೀವನಕ್ಕೆ ಹಾನಿ ಮಾಡುವುದರ ಜೊತೆಗೆ ವಿವಿಧ ಸಮುದಾಯಗಳಲ್ಲಿ ದ್ವೇಷ ಉಂಟುಮಾಡುವ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.
ಮತ್ತೊಂದೆಡೆ, ಆರೋಪಿಗಳು ತನಿಖೆಯ ಸಮಯದಲ್ಲಿ ಜೈಲಿನಲ್ಲಿ ಕಳೆದ ಅವಧಿಯನ್ನು ಆಧರಿಸಿ ತಮ್ಮನ್ನು ಖುಲಾಸೆಗೊಳಿಸುವಂತೆ ನ್ಯಾಯಾಲಯದ ಮುಂದೆ ಮನವಿ ಮಾಡಿದರು. ಆದಾಗ್ಯೂ, ಆರೋಪಿಗಳ ಚಟುವಟಿಕೆಗಳು ಗಂಭೀರ ಸ್ವರೂಪದ್ದಾಗಿದ್ದು, ಕಳೆದ ಜೈಲು ಶಿಕ್ಷೆ ಅಥವಾ ಆರೋಪಿಗಳು ಮಾಡಿದ ಅಪರಾಧವನ್ನು ಪರಿಗಣಿಸಿ ಅವರನ್ನು ಜೀವಾವಧಿ ಶಿಕ್ಷೆಯಿಂದ ಮುಕ್ತಗೊಳಿಸುವುದು ಸಮರ್ಥನೀಯವಲ್ಲ ಎಂದು ಹೇಳಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ: ಕೋರ್ಟ್ ತೀರ್ಪಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತುಂಡಾ ಪರ ವಕೀಲ ಶಫ್ಕತುಲ್ಲಾ ಸುಲ್ತಾನಿ, ''ಅಬ್ದುಲ್ ಕರೀಂ ತುಂಡಾ ವಿರುದ್ಧ ಹೊರಿಸಲಾಗಿದ್ದ ಎಲ್ಲ ಆರೋಪಗಳಿಂದ ನ್ಯಾಯಾಲಯ ಖುಲಾಸೆಗೊಳಿಸಿದೆ. ಆತ ಸಂಪೂರ್ಣ ನಿರಪರಾಧಿ. ನ್ಯಾಯಾಲಯವು ಪ್ರತಿಯೊಂದು ಕಾಯ್ದೆಯ ಪ್ರತಿಯೊಂದು ಸೆಕ್ಷನ್ನಿಂದಲೂ ಖುಲಾಸೆ ಮಾಡಿದೆ. ಆರೋಪಗಳನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ಗೆ ಸಾಕಷ್ಟು ಪುರಾವೆಗಳನ್ನು ಒದಗಿಸಲು ಸಾಧ್ಯವಾಗಲಿಲ್ಲ'' ಎಂದು ಹೇಳಿದರು.
''ತುಂಡಾ ತನ್ನಿಂದ ಸ್ಫೂರ್ತಿ ಪಡೆದ ಇತರ ಆರೋಪಿಗಳಿಗೆ ಬಾಂಬ್‌ಗಳನ್ನು ತಯಾರಿಸಲು ಸಹಾಯ ಮಾಡಿದ್ದರು ಎಂದು ತನಿಖಾ ಸಂಸ್ಥೆಗಳು ಹೇಳಿದ್ದವು. ಆದರೆ, ಪ್ರತಿವಾದದ ವೇಳೆ ನ್ಯಾಯಾಲಯದ ಮುಂದೆ ಸತ್ಯಗಳನ್ನು ಪ್ರಸ್ತುತಪಡಿಸಲಾಗಿದೆ. ತುಂಡಾ ವಿರುದ್ಧ ಯಾವುದೇ ನೇರ ಸಾಕ್ಷ್ಯ ಅಥವಾ ತಪ್ಪೊಪ್ಪಿಗೆ ಹೇಳಿಕೆ ದಾಖಲಾಗಿಲ್ಲ. ಬಾಂಬ್ ಇರಿಸಿದ್ದಕ್ಕಾಗಿ ಇರ್ಫಾನ್ ಮತ್ತು ಹಮೀದುದ್ದೀನ್ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ'' ಎಂದು ಮತ್ತೊಬ್ಬ ವಕೀಲ ಅಬ್ದುಲ್ ರಶೀದ್ ಹೇಳಿದರು.
ಇದೇ ವೇಳೆ, ''ಕಳೆದ 14 ವರ್ಷಗಳಿಂದ ಹಮೀದುದ್ದೀನ್ ಹಾಗೂ ಕಳೆದ 17 ವರ್ಷಗಳಿಂದ ಇರ್ಫಾನ್ ಜೈಲಿನಲ್ಲಿದ್ದಾನೆ. ಈತನ ಜೀವಾವಧಿ ಶಿಕ್ಷೆ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗುತ್ತದೆ'' ಎಂದು ವಕೀಲರು ಮಾಹಿತಿ ನೀಡಿದರು.
ಮತ್ತೊಂದೆಡೆ, ಜೀವಾವಧಿ ಶಿಕ್ಷೆಗೆ ಗುರಿಯಾದ ನಂತರ ನ್ಯಾಯಾಲಯದ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಹಮೀದುದ್ದೀನ್, ''ನಾನು ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇನೆ. ನಾನು ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುತ್ತೇನೆ'' ಎಂದಿದ್ದಾನೆ.
ಇದನ್ನೂ ಓದಿ: ಸಂದೇಶ್ಖಾಲಿ ಹಿಂಸಾಚಾರ, ಲೈಂಗಿಕ ದೌರ್ಜನ್ಯ ಸಿಐಡಿಗೆ ಹಸ್ತಾಂತರ; ಸಿಬಿಐ ತನಿಖೆಗೆ ಆಗ್ರಹ