ನವದೆಹಲಿ: ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಆಪ್) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಬಂಧನವನ್ನು ವಿರೋಧಿಸಿ ಪಕ್ಷದ ನಾಯಕರು ಭಾನುವಾರ ಇಲ್ಲಿನ ಜಂತರ್ ಮಂತರ್‌ನಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಡ ಮೊಳಗಿಸಿದರು.
ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಕೇಜ್ರಿವಾಲ್ ಅವರನ್ನು ಬಂಧಿಸಿದೆ. ಸದ್ಯ ಅವರು ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಅವರ ಬಂಧನವನ್ನು ರಾಜಕೀಯ ಪ್ರೇರಿತ ಎಂದು ಆರೋಪಿಸಿರುವ ಆಪ್ ಹೋರಾಟ ನಡೆಸುತ್ತಿದೆ.
ವಿವಿಧೆಡೆ ಉಪವಾಸ: ದೆಹಲಿ, ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಆಪ್ ಮುಖಂಡರು, ನಾಯಕರು, ಕಾರ್ಯಕರ್ತರು ಉಪವಾಸ ನಡೆಸುತ್ತಿದ್ದಾರೆ. ಆಪ್ ಆಡಳಿತವಿರುವ ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಹುಟ್ಟೂರಾದ ಖಟ್ಕರ್ ಕಲಾನ್‌ನಲ್ಲಿ ಸಾಮೂಹಿಕ ಉಪವಾಸದಲ್ಲಿ ಪಾಲ್ಗೊಂಡರು.
ದೆಹಲಿ ವಿಧಾನಸಭೆ ಸ್ಪೀಕರ್ ರಾಮ್ ನಿವಾಸ್ ಗೋಯೆಲ್, ಡೆಪ್ಯೂಟಿ ಸ್ಪೀಕರ್ ರಾಖಿ ಬಿಲಾ, ಸಚಿವರಾದ ಅತಿಶಿ, ಗೋಪಾಲ್ ರೈ ಮತ್ತು ಇಮ್ರಾನ್ ಹುಸೇನ್ ಸೇರಿದಂತೆ ಅನೇಕ ಹಿರಿಯ ಎಎಪಿ ನಾಯಕರು ಜಂತರ್ ಮಂತರ್‌ನಲ್ಲಿ ಬೆಳಗ್ಗೆ 11 ಗಂಟೆಯಿಂದ ಆರಂಭವಾದ ಸಾಮೂಹಿಕ ಉಪವಾಸದಲ್ಲಿ ಭಾಗವಹಿಸಿದ್ದರು.
ವಿದೇಶದಲ್ಲೂ ಹೋರಾಟ: ಬೋಸ್ಟನ್‌ನ ಹಾರ್ವರ್ಡ್ ಸ್ಕ್ವೇರ್, ಲಾಸ್ ಏಂಜಲೀಸ್‌ನ ಹಾಲಿವುಡ್ ಸೈನ್, ವಾಷಿಂಗ್ಟನ್ ಡಿಸಿಯ ಭಾರತೀಯ ರಾಯಭಾರಿ ಕಚೇರಿಯ ಹೊರಗೆ, ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್, ಟೊರೊಂಟೊ, ಲಂಡನ್ ಮತ್ತು ಮೆಲ್ಬೋರ್ನ್ ಸೇರಿದಂತೆ ಇತರ ರಾಜ್ಯಗಳಲ್ಲಿ ಮತ್ತು ವಿದೇಶಗಳಲ್ಲಿ ಆಪ್ ಬೆಂಬಲಿತ ಭಾರತೀಯರಿಂದ ಪ್ರತಿಭಟನೆಗಳು ನಡೆದವು ಎಂದು ಪಕ್ಷದ ಮುಖಂಡರು ತಿಳಿಸಿದರು.
ಕೇಜ್ರಿವಾಲ್ ಬಂಧನವನ್ನು ವಿರೋಧಿಸಿ ನಡೆಸಲಾಗುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವಂತೆ ಆಪ್ನ ದೆಹಲಿ ಘಟಕದ ಸಂಚಾಲಕ ಗೋಪಾಲ್ ರೈ ಜನರಲ್ಲಿ ಮನವಿ ಮಾಡಿದ್ದಾರೆ. ಉಪವಾಸ ನಡೆಸಿದ ಬಳಿಕ kejriwalkoaashirvaad.com ವೆಬ್‌ಸೈಟ್‌ಗೆ ಫೋಟೋಗಳನ್ನು ಕಳುಹಿಸಲು ಆಪ್ ಕೋರಿದೆ. ಕೇಜ್ರಿವಾಲ್ ಅವರನ್ನು ಏಪ್ರಿಲ್ 15ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಇದನ್ನೂ ಓದಿ: ಆಪ್ ನಾಯಕಿ ಅತಿಶಿಗೆ ಚುನಾವಣಾ ಆಯೋಗದಿಂದ ನೋಟಿಸ್ ಜಾರಿ - EC Notice To Atishi